ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ತೆರಿಗೆ ಆದಾಯ ಸಂಗ್ರಹದಲ್ಲಿ (Tax Revenue Collections) ಕರ್ನಾಟಕವನ್ನು (Karnataka) ಹಿಂದಿಕ್ಕಿರುವ ತಮಿಳುನಾಡು (Tamil Nadu) ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಮದ್ಯ ಮಾರಾಟದ ಮೇಲಿನ ಅಬಕಾರಿ ಸುಂಕದಿಂದಾಗಿ ತಮಿಳುನಾಡಿನ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಮಹಾರಾಷ್ಟ್ರ (Maharashtra) ಮತ್ತು ಉತ್ತರ ಪ್ರದೇಶ (Uttar Pradesh) ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ.
ಸಿಎಜಿ ವರದಿಯಿಂದ ಈ ಮಾಹಿತಿ ತಿಳಿದುಬಂದಿದೆ. ಏಪ್ರಿಲ್ – ಸೆಪ್ಟೆಂಬರ್ ಅವಧಿಯಲ್ಲಿ ತಮಿಳುನಾಡು 68,638 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಇದೇ ಅವಧಿಯಲ್ಲಿ ಕರ್ನಾಟಕ 66,158 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕರ್ನಾಟಕದ ಸ್ವಂತ ತೆರಿಗೆ ಆದಾಯ 53,566 ಕೋಟಿ ರೂ. ಆಗಿದ್ದರೆ, ತಮಿಳುನಾಡಿನ ಸ್ವಂತ ತೆರಿಗೆ ಆದಾಯ 50,324 ಕೋಟಿ ರೂ. ಆಗಿತ್ತು.
ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕವೇ ಮುಂದೆ
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ತಮಿಳುನಾಡಿಗೆ ಹೋಲಿಸಿದರೆ ಈ ವರ್ಷವೂ ಕರ್ನಾಟಕವೇ ಮುಂದಿದೆ. ದೇಶದಾದ್ಯಂತ ಅಕ್ಟೋಬರ್ ತಿಂಗಳಲ್ಲಿ ಒಟ್ಟು 1.51 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು. ಇದು ಜಿಎಸ್ಟಿ ಸಂಗ್ರಹದಲ್ಲಿ ಈವರೆಗಿನ ಎರಡನೇ ಗರಿಷ್ಠ ಮೊತ್ತವಾಗಿದೆ.
ಇದನ್ನೂ ಓದಿ: ಸೆಪ್ಟೆಂಬರ್ನಲ್ಲಿ 1.47 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹ: ಕರ್ನಾಟಕ ನಂಬರ್ 2
ಕರ್ನಾಟಕದಲ್ಲಿ ಅಕ್ಟೋಬರ್ ತಿಂಗಳಲ್ಲಿ 10,996 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ 8,259 ಕೋಟಿ ರೂ. ಸಂಗ್ರಹವಾಗಿತ್ತು. ತಮಿಳುನಾಡಿನಲ್ಲಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ 7,642 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದ್ದರೆ, ಈ ವರ್ಷ 9,540 ಕೋಟಿ ರೂ. ಸಂಗ್ರಹವಾಗಿದೆ. ಆದರೆ, ಸ್ವಂತ ತೆರಿಗೆ ಆದಾಯದಲ್ಲಿ ಮಾತ್ರ ತಮಿಳುನಾಡು ಈ ವರ್ಷದ ಮೊದಲಾರ್ಧದಲ್ಲಿ ಕರ್ನಾಟಕವನ್ನು ಮೀರಿಸಿದೆ.
ಏಪ್ರಿಲ್ನಲ್ಲಿ ದೇಶದಾದ್ಯಂತ ದಾಖಲೆಯ ಗರಿಷ್ಠ 1.68 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು. ಜಿಎಸ್ಟಿ ಜಾರಿಗೆ ಬಂದ ನಂತರ ತಿಂಗಳೊಂದರಲ್ಲಿ ಸಂಗ್ರಹವಾದ ಗರಿಷ್ಠ ಮೊತ್ತ ಇದಾಗಿದೆ. ಬಿಟ್ಟರೆ ಈಗ ಅಕ್ಟೋಬರ್ನಲ್ಲಿ ಆಗಿರುವ 1.51 ಲಕ್ಷ ಕೋಟಿ ರೂ. ಎರಡನೇ ಅತಿಹೆಚ್ಚಿನ ಸಂಗ್ರಹವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ