Data Patterns India: ಸಾರ್ವಜನಿಕರಿಗೆ 585 ರೂ.ಗೆ ವಿತರಿಸಿದ್ದ ಡೇಟಾ ಪ್ಯಾಟರ್ನ್ಸ್ ಷೇರು 864 ರೂ.ಗೆ ಲಿಸ್ಟಿಂಗ್

| Updated By: Srinivas Mata

Updated on: Dec 24, 2021 | 11:02 AM

ಡೇಟಾ ಪ್ಯಾಟರ್ನ್ಸ್ ಇಂಡಿಯಾ ಕಂಪೆನಿ ಷೇರು ಡಿಸೆಂಬರ್ 24ನೇ ತಾರೀಕಿನ ಶುಕ್ರವಾರದಂದು ಐಪಿಒದಲ್ಲಿ ವಿತರಣೆ ಮಾಡಿದ್ದಕ್ಕಿಂತ ಶೇ 48ರಷ್ಟು ಪ್ರೀಮಿಯಂಗೆ ಷೇರುಪೇಟೆಯಲ್ಲಿ ಲಿಸ್ಟಿಂಗ್ ಆಗಿದೆ.

Data Patterns India: ಸಾರ್ವಜನಿಕರಿಗೆ 585 ರೂ.ಗೆ ವಿತರಿಸಿದ್ದ ಡೇಟಾ ಪ್ಯಾಟರ್ನ್ಸ್ ಷೇರು 864 ರೂ.ಗೆ ಲಿಸ್ಟಿಂಗ್
ಸಾಂದರ್ಭಿಕ ಚಿತ್ರ
Follow us on

ಡೇಟಾ ಪ್ಯಾಟರ್ನ್ಸ್ ಇಂಡಿಯಾ ಡಿಸೆಂಬರ್ 24ನೇ ತಾರೀಕಿನ ಶುಕ್ರವಾರದಂದು ಅದ್ಭುತವಾದ ಲಿಸ್ಟಿಂಗ್ ಮಾಡಿದೆ. ಐಪಿಒದಲ್ಲಿ ವಿತರಣೆ ಮಾಡಿದ್ದ ದರಕ್ಕಿಂತ ಶೇ 47.69ರಷ್ಟು ಹೆಚ್ಚಿಗೆ ಮೊತ್ತಕ್ಕೆ ಷೇರುಪೇಟೆಗೆ ಪದಾರ್ಪಣೆ ಮಾಡಿದೆ. ಆರೋಗ್ಯಪೂರ್ಣ ಹಣಕಾಸು ಸ್ಥಿತಿ, ಜತೆಗೆ ಉತ್ತಮ ಆರ್ಡರ್ ಬುಕ್ ಮತ್ತು ಮೇಕ್​ ಇನ್ ಇಂಡಿಯಾ ಅವಕಾಶದ ಅಡಿಯಲ್ಲಿ ಬೆಳವಣಿಗೆಗೆ ಇರುವ ಸಾಮರ್ಥ್ಯವು ಹೂಡಿಕೆದಾರರಲ್ಲಿ ಸಕಾರಾತ್ಮಕವಾದ ಭಾವನೆ ಮೂಡಿಸಿದೆ. ಈ ಷೇರನ್ನು ತಲಾ 585 ರೂಪಾಯಿಯಂತೆ ವಿತರಣೆ ಮಾಡಲಾಗಿತ್ತು. ಬಿಎಸ್​ಇಯಲ್ಲಿ ಶುಕ್ರವಾರ 864 ರೂಪಾಯಿಗೆ ಈ ಕಂಪೆನಿಯ ಷೇರು ಲಿಸ್ಟಿಂಗ್ ಆಯಿತು. ಇನ್ನು ಎನ್​ಎಸ್​ಇಯಲ್ಲಿ 856 ರೂಪಾಯಿಗೆ ಲಿಸ್ಟಿಂಗ್ ಆಯಿತು. 2021ನೇ ಇಸವಿಯಲ್ಲಿ ಷೇರು ಪೇಟೆಯಲ್ಲಿ 62ನೇ ಲಿಸ್ಟಿಂಗ್ ಇದು.

ರಕ್ಷಣೆ ಮತ್ತು ವೈಮಾಂತರಿಕ್ಷ ಎಲೆಕ್ಟ್ರಾನಿಕ್ಸ್ ಸಲ್ಯೂಷನ್ ಒದಗಿಸುವ ಡೇಟಾ ಪ್ಯಾಟರ್ನ್ ಇಂಡಿಯಾಗೆ ಹೂಡಿಕೆದಾರರಿಂದ ಭಾರೀ ಬೇಡಿಕೆ ಬಂದಿತ್ತು. ಮೀಸಲಿಟ್ಟಿದ್ದ ಷೇರಿಗಿಂತ 120 ಪಟ್ಟು ಹೆಚ್ಚಿನ ಬೇಡಿಕೆ ಸಲ್ಲಿಸಲಾಗಿತ್ತು. ಸಾಂಸ್ಥಿಕೇತರ ಹೂಡಿಕೆದಾರರಿಗೆ ಮೀಸಲಿಟ್ಟಿದ್ದಕ್ಕಿಂತ 254 ಪಟ್ಟು ಹೆಚ್ಚು ಷೇರಿಗಾಗಿ ಬೇಡಿಕೆ ಇಡಲಾಗಿತ್ತು. ಕ್ವಾಲಿಫೈಡ್ ಇನ್​ಸ್ಟಿಟ್ಯೂಷನಲ್ ಹೂಡಿಕೆದಾರರ ಮೀಸಲು ಪ್ರಮಾಣಕ್ಕಿಂತ 191 ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು. ಇನ್ನು ರೀಟೇಲ್ ಹೂಡಿಕೆದಾರರಿಗೆ ಮೀಸಲಾಗಿದ್ದರ ಪಾಲಿಗೆ 23.14 ಪಟ್ಟು ಅರ್ಜಿ ಸಲ್ಲಿಕೆ ಆಗಿತ್ತು.

ಸಾರ್ವಜನಿಕ ವಿತರಣೆ ಮೂಲಕ ಡೇಟಾ ಪ್ಯಾಟರ್ನ್ಸ್​ಗೆ 588.22 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವಾರ ಪ್ರತಿ ಷೇರಿಗೆ 555-585 ರೂಪಾಯಿ ದರದ ಬ್ಯಾಂಡ್​ನಲ್ಲಿ ಸಬ್​ಸ್ಕ್ರಿಪ್ಷನ್ ಮುಕ್ತವಾಗಿತ್ತು. ಡೇಟಾ ಪ್ಯಾಟರ್ನ್ಸ್​ನಂಥದ್ದು ಕೆಲವೇ ಕೆಲವು ಕಂಪೆನಿಗಳಿದ್ದು, ದೇಶೀಯವಾಗಿ ಅಭಿವೃದ್ಧಿ ಪಡಿಸಿದ ರಕ್ಷಣಾ ಉತ್ಪನ್ನಗಳ ಕೈಗಾರಿಕೆಗೆ ಸೇವೆ ಅಗತ್ಯವಾದದ್ದನ್ನು ಒದಗಿಸುತ್ತದೆ. 2021ರ ಸೆಪ್ಟೆಂಬರ್​ಗೆ ಕಂಪೆನಿಯ ಆರ್ಡರ್ ಬುಕ್ 581.3 ಕೋಟಿ ರೂಪಾಯಿ ಇತ್ತು.

ಪ್ರೊಸೆಸರ್​ಗಳು, ಪವರ್, ರೇಡಿಯೋ ಫ್ರೀಕ್ವೆನ್ಸಿಗಳು ಮತ್ತು ಮೈಕ್ರೋವೇವ್, ಎಂಬೆಡೆಡ್ ಸಾಫ್ಟ್​ವೇರ್​ ಮತ್ತು ಫರ್ಮ್​ವೇರ್ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್​ ಸೇರಿ ರಕ್ಷಣೆ ಹಾಗೂ ವೈಮಾಂತರಿಕ್ಷ ಪ್ಲಾಟ್​ಫಾರ್ಮ್​ಗಳಿಗೆ ಬೇಕಾದ ಎಂಡ್​ ಟು ಎಂಡ್ ಅಗತ್ಯಗಳನ್ನು ಡೇಟಾ ಪ್ಯಾಟರ್ನ್ಸ್ ಅಭಿವೃದ್ಧಿ ಮಾಡುತ್ತದೆ. ಭಾರತೀಯ ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಇರುವ ದೊಡ್ಡ ಮಾರುಕಟ್ಟೆ ಅವಕಾಶ, ಕಂಪೆನಿಯ ಗಮನ ಕೇಂದ್ರೀತವಾದ ಉದ್ಯಮದ ಮಾದರಿ, ಆವಿಷ್ಕಾರಗಳು, ಆರೋಗ್ಯಪೂರ್ಣ ಹಣಕಾಸು ಸ್ಥಿತಿ, ಮುಂಬರುವ ವರ್ಷಗಳಲ್ಲಿ ಪ್ರಬಲ ಆರ್ಡರ್​ಗಳು ಬರುವ ಸಾಮರ್ಥ್ಯ ಈ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು, ಕಂಪೆನಿಯ ಐಪಿಒಗೆ ಸಬ್​ಸ್ಕ್ರೈಬ್ ಮಾಡುವಂತೆ ಎಲ್ಲ ಬ್ರೋಕರೇಜ್​ಗಳು ಶಿಫಾರಸು ಮಾಡಿದ್ದರು.

ಇದನ್ನೂ ಓದಿ: MapmyIndia: 1033 ರೂಪಾಯಿಗೆ ವಿತರಿಸಿದ್ದ ಮ್ಯಾಪ್​​ಮೈಇಂಡಿಯಾ ಷೇರು ರೂ. 1565ಕ್ಕೆ ಬಂಪರ್ ಲಿಸ್ಟಿಂಗ್