Data Protection Bill: ಡಿಜಿಟಲ್ ಜಗತ್ತಿಗೆ ಡಿಜಿಟಲ್ ಸಂವಿಧಾನ ಬರೆದಂತೆ; ದತ್ತಾಂಶ ಸುರಕ್ಷಾ ಕಾಯ್ದೆಯ ಬಗ್ಗೆ ರಾಜೀವ್ ಚಂದ್ರಶೇಖರ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 13, 2023 | 1:47 PM

’ಸುರಕ್ಷೆ ಎನ್ನುವುದು ಭಾರತೀಯರಿಗೆ ಸಂವಿಧಾನವು ಖಾತ್ರಿಪಡಿಸಿರುವ ಹಕ್ಕು. ಇದು ಸಾಧ್ಯವಾಗಬೇಕಾದರೆ ಆನ್​ಲೈನ್ ಜಗತ್ತಿನಲ್ಲಿರುವ ಖಾಸಗಿ ಕಂಪನಿಗಳ ಬಾಧ್ಯತೆಯನ್ನು ನಿಗದಿಪಡಿಸುವ ಜರೂರು ಇದೆ‘.

Data Protection Bill: ಡಿಜಿಟಲ್ ಜಗತ್ತಿಗೆ ಡಿಜಿಟಲ್ ಸಂವಿಧಾನ ಬರೆದಂತೆ; ದತ್ತಾಂಶ ಸುರಕ್ಷಾ ಕಾಯ್ದೆಯ ಬಗ್ಗೆ ರಾಜೀವ್ ಚಂದ್ರಶೇಖರ್
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
Follow us on

ದೆಹಲಿ: ದತ್ತಾಂಶ ಸುರಕ್ಷಾ ಮಸೂದೆಯು ಮತ್ತು ಸಂವಿಧಾನದಷ್ಟೇ ಪ್ರಾಮುಖ್ಯತೆ ಹೊಂದಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrashekhar) ಹೇಳಿದ್ದಾರೆ. ಎಎನ್​ಐ ಸುದ್ದಿಸಂಸ್ಥೆಗೆ ನೀಡಿರುವ ಸುದೀರ್ಘ ಸಂದರ್ಶನದಲ್ಲಿ ಇಂಟರ್ನೆಟ್ ಬಳಕೆದಾರರಿಗೆ ಸುರಕ್ಷಾ ಖಾತ್ರಿ ಒದಗಿಸುವುದು ಅತ್ಯಂತ ಪ್ರಾಮುಖ್ಯತೆ ಪಡೆದಿರುವ ಕೆಲಸ ಎಂದು ವಿವರಿಸಿದ್ದಾರೆ. ಡಿಜಿಟಲ್ ಜಗತ್ತಿನಲ್ಲಿ ಸಕ್ರಿಯರಾಗಿರುವ (ಡಿಜಿಟಲ್ ನಾಗರಿಕರು) ಎಲ್ಲರ ಹಕ್ಕು ಮತ್ತು ಬಾಧ್ಯತೆಗಳನ್ನು ‘ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಬಿಲ್’ (Digital Personal Date Protection Bill) ವಿವರಿಸುತ್ತದೆ. ಸಂಗ್ರಹವಾಗುವ ದತ್ತಾಂಶಗಳನ್ನು ಹೇಗೆ ಬಳಕೆ ಮಾಡಬೇಕು ಎಂಬ ಬಗ್ಗೆಯೂ ಈ ಮಸೂದೆಯಲ್ಲಿ ವಿವರಗಳಿವೆ. ಡಿಜಿಟಲ್ ಜಗತ್ತಿನಲ್ಲಿ ನಾಗರಿಕರ ಸುರಕ್ಷೆಗಾಗಿ ಇಂಥದ್ದೊಂದು ಕಾನೂನು ಅಗತ್ಯವಾಗಿತ್ತು ಎಂದು ಅವರು ಹೇಳಿದ್ದಾರೆ.

ಡಿಜಿಟಲ್ ಜಗತ್ತಿನಲ್ಲಿಯೂ ಜನರಿಗೆ ಹಲವು ಹಕ್ಕುಗಳಿವೆ. ಈ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರವು ಹಲವು ಪ್ರಚಾರಾಂದೋಲನಗಳನ್ನು ರೂಪಿಸಲಿದೆ. ಎಲ್ಲ ಹಂತ ಮತ್ತು ವರ್ಗದ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದರು. ದೇಶದ ಎಲ್ಲ ಶಾಲೆ, ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಇಂಟರ್ನೆಟ್ ಬಳಸುವ ಎಲ್ಲರಿಗೂ ಈ ಬಗ್ಗೆ ಮಾಹಿತಿ ಲಭ್ಯವಾಗುವಂತೆ ಮಾಡುತ್ತೇವೆ. ದತ್ತಾಂಶ ಸುರಕ್ಷಾ ಮಸೂದೆಯೂ ಡಿಜಿಟಲ್ ಜಗತ್ತಿನ ಸಂವಿಧಾನವಿದ್ದಂತೆ. ಅದಕ್ಕೆ ತನ್ನದೇ ಆದ ಪ್ರಾಮುಖ್ಯತೆಯಿದೆ ಎಂದು ಅವರು ಹೇಳಿದರು.

ದತ್ತಾಂಶ ಸುರಕ್ಷಾ ಕಾಯ್ದೆಯ ಕುರಿತು ಈ ಮೊದಲು ಪ್ರತಿಕ್ರಿಯಿಸಿದ್ದ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ‘ಆನ್​ಲೈನ್​ನಲ್ಲಿ ಸಕ್ರಿಯರಾಗಿರುವ ಎಲ್ಲ ಭಾರತೀಯರಿಗೂ ಡಿಜಿಟಲ್ ಜಗತ್ತಿನಲ್ಲಿ ಸುರಕ್ಷೆ ಒದಗಿಸುವುದು ಸರ್ಕಾರದ ಮುಖ್ಯ ಉದ್ದೇಶ. ಇತ್ತೀಚಿನ ದಿನಗಳಲ್ಲಿ ಭಾರತವು ಜಗತ್ತಿನ ಅತಿದೊಡ್ಡ ಡಿಜಿಟಲ್ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ. ಬದಲಾದ ಪರಿಸ್ಥಿತಿಗೆ ತಕ್ಕಂತೆ ಅಗತ್ಯ ಕಾನೂನು ರೂಪಿಸಬೇಕಿರುವ ಅನಿವಾರ್ಯತೆ ಇದೆ’ ಎಂದು ತಿಳಿಸಿದ್ದಾರೆ.

ಸುರಕ್ಷೆ ಎನ್ನುವುದು ಭಾರತೀಯರಿಗೆ ಸಂವಿಧಾನವು ಖಾತ್ರಿಪಡಿಸಿರುವ ಹಕ್ಕು. ಇದು ಸಾಧ್ಯವಾಗಬೇಕಾದರೆ ಆನ್​ಲೈನ್ ಜಗತ್ತಿನಲ್ಲಿರುವ ಖಾಸಗಿ ಕಂಪನಿಗಳ ಬಾಧ್ಯತೆಯನ್ನು ನಿಗದಿಪಡಿಸುವ ಜರೂರು ಇದೆ. ಯಾವುದೇ ಆನ್​ಲೈನ್ ವೇದಿಕೆಯು ತನ್ನ ಖಾಸಗಿ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಅನುಮಾನ ಬಳಕೆದಾರರಿಗೆ ಬಂದರೆ ಅದನ್ನು ಅವರು ದತ್ತಾಂಶ ಸುರಕ್ಷಾ ಮಂಡಳಿಯ (Data Protection Board) ಗಮನಕ್ಕೆ ತರಬಹುದು. ನಂತರ ಅದು ಎಂಥದ್ದೇ ದೊಡ್ಡ ಕಂಪನಿಯಾಗಿದ್ದರೂ ಭಾರತ ಸರ್ಕಾರ ಅದಕ್ಕೆ ನೊಟೀಸ್ ಕೊಟ್ಟು, ದಂಡ ವಿಧಿಸಲಿದೆ ಎಂದು ಭರವಸೆ ನೀಡಿದರು.

ಕಳೆದ ವರ್ಷ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ದತ್ತಾಂಶ ಸುರಕ್ಷಾ ಕಾಯ್ದೆಯನ್ನು ಮೊದಲ ಬಾರಿಗೆ ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಮೂರು ತಿಂಗಳ ನಂತರ ಸರ್ಕಾರ ಅದನ್ನು ಹಿಂಪಡೆದಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಸಚಿವ ಅಶ್ವಿನಿ ವೈಷ್ಣವ್, ‘ಸಂಸದೀಯ ಮಂಡಳಿಯು 81 ತಿದ್ದುಪಡಿಗಳನ್ನು ಸೂಚಿಸಿರುವುದರಿಂದ ಅಗತ್ಯ ಮಾರ್ಪಾಡು ಮಾಡಲು ಮಸೂದೆಯನ್ನು ಹಿಂಪಡೆದಿದ್ದೇವೆ. ಶೀಘ್ರದಲ್ಲಿಯೇ ಮತ್ತೊಮ್ಮೆ ಮಸೂದೆಯನ್ನು ಸಾರ್ವಜನಿಕರ ಪ್ರತಿಕ್ರಿಯೆಗಾಗಿ ಸಮಾಲೋಚನೆಗಾಗಿ ಬಹಿರಂಗಪಡಿಸಲಾಗುವುದು’ ಎಂದು ಹೇಳಿದ್ದರು.

ಭಾರತದಲ್ಲಿ ಪ್ರಸ್ತುತ ಸುಮಾರು 76 ಕೋಟಿ ಜನರು ಡಿಜಿಟಲ್ ಜಗತ್ತಿನಲ್ಲಿ ಸಕ್ರಿಯರಾಗಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ಪ್ರಮಾಣವು 120 ಕೋಟಿ ಮುಟ್ಟಬಹುದು ಎಂದು ನಿರೀಕ್ಷಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಆನ್​ಲೈನ್ ಮೋಸ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದತ್ತಾಂಶ ಸುರಕ್ಷಾ ಮಸೂದೆ ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ತಜ್ಞರು ಸಲಹೆ ಮಾಡಿದ್ದರು.

ಇದನ್ನೂ ಒದಿ: ತಪ್ಪು ಮಾಹಿತಿ ಹರಡುವಿಕೆ ವಿರುದ್ಧ ಹೊಸ ಐಟಿ ಕಾನೂನು ಪರಿಣಾಮಕಾರಿ: ರಾಜೀವ್ ಚಂದ್ರಶೇಖರ್

ಮತ್ತಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ