ನವದೆಹಲಿ: ದೇಶದಾದ್ಯಂತ 651 ಜಿಲ್ಲೆಗಳಲ್ಲಿ ಜನೌಷಧ ಕೇಂದ್ರ (Jan Aushadhi Kendra) ತೆರೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಕೋರಿದೆ. ಈ ಯೋಜನೆಯು ಸ್ಥಿರ ಮತ್ತು ನಿಯಮಿತ ಆದಾಯ ಗಳಿಕೆಯೊಂದಿಗೆ ಸ್ವ ಉದ್ಯೋಗಕ್ಕೆ ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. 651 ಜಿಲ್ಲೆಗಳಲ್ಲಿ ಜನೌಷಧ ಕೇಂದ್ರ ತೆರೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಗುರುವಾರವಷ್ಟೇ ಅನುಮೋದನೆ ನೀಡಿತ್ತು. ಇದರ ಬೆನ್ನಲ್ಲೇ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಕೋರಿ ಪ್ರಕಟಣೆ ಬಿಡುಗಡೆ ಮಾಡಿದೆ.
ಗುಣಮಟ್ಟದ ಔಷಧ ಕೈಗೆಟಕುವ ದರದಲ್ಲಿ ಎಲ್ಲರಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ 743 ಜಿಲ್ಲೆಗಳಲ್ಲಿ 9,000 ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು.
ಇದನ್ನೂ ಓದಿ: Jan Aushadhi Kendra: ಜನೌಷಧಿ ಕೇಂದ್ರ ಸ್ಥಾಪನೆಯಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 2ನೇ ಸ್ಥಾನ
ಭಾರತೀಯ ಜನೌಷಧ ಕೇಂದ್ರಗಳಲ್ಲಿ ಔಷಧಗಳನ್ನು ಮಾರುಕಟ್ಟೆ ಮಾರಾಟ ದರಕ್ಕಿಂತ ಶೇಕಡಾ 50ರಿಂದ 90ರ ವರೆಗೂ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. 1,759ರಷ್ಟು ಔಷಧಗಳು, 280 ಶಸ್ತ್ರಚಿಕಿತ್ಸೆ ಉಪಕರಣಗಳು ಜನೌಷಧ ಕೇಂದ್ರಗಳಲ್ಲಿ ಲಭ್ಯವಿವೆ.
ಜನೌಷಧ ಕೇಂದ್ರ ಯೋಜನೆಯು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜನರಿಗೆ ಉತ್ತಮ ಸೇವೆ ನೀಡುವುದರ ಜತೆಗೆ ಸ್ವ ಉದ್ಯೋಗಕ್ಕೂ ನೆರವಾಗುತ್ತಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ. ಈ ಯೋಜನೆಯಡಿ ಜನೌಷಧ ಕೇಂದ್ರ ಸ್ಥಾಪನೆಗೆ ಹಣಕಾಸು ನೆರವಿನ ರೂಪದಲ್ಲಿ 5 ಲಕ್ಷ ರೂ. ನೀಡಲಾಗುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಜನೌಷಧ ಕೇಂದ್ರ ತೆರೆಯುವವರಿಗಾಗಿ ಮೂಲಸೌಕರ್ಯ ಭತ್ಯೆಯಾಗಿ ಒಂದು ಬಾರಿಗೆ ಹೆಚ್ಚುವರಿಯಾಗಿ 2 ಲಕ್ಷ ರೂ. ನೀಡಲಾಗುತ್ತದೆ.
ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರಗಳ ಸಂಖ್ಯೆಯನ್ನು 2024ರ ಮಾರ್ಚ್ ಒಳಗಾಗಿ 10,000ಕ್ಕೆ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ. ಗುಣಮಟ್ಟದ ಔಷಧ ಕೈಗೆಟಕುವ ದರದಲ್ಲಿ ಎಲ್ಲರಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ತಿಳಿಸಿತ್ತು.