Investment: ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹಲವು ಕಂಪನಿಗಳ ಆಸಕ್ತಿ; ಡಾವೋಸ್ ಶೃಂಗಸಭೆಯಲ್ಲಿ 7 ಕಂಪನಿಗಳೊಂದಿಗೆ ಸರ್ಕಾರ ಒಡಂಬಡಿಕೆ

|

Updated on: Jan 17, 2024 | 6:14 PM

Davos WEF Summit: ಡಾವೋಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ನಿಯೋಗವು ಸಾಕಷ್ಟು ಹೂಡಿಕೆಗಳನ್ನು ಸೆಳೆಯಲು ಯಶಸ್ವಿಯಾಗಿದೆ. ರಾಜ್ಯ ಸರ್ಕಾರದೊಂದಿಗೆ ಏಳು ಕಂಪನಿಗಳು ಎಂಒಯುಗೆ ಸಹಿ ಹಾಕಿದ್ದು ಒಟ್ಟು 22,000 ಕೋಟಿ ರೂ ಹೂಡಿಕೆ ಮಾಡಲು ಇಚ್ಛಿಸಿವೆ. ಸಚಿವ ಎಂಬಿ ಪಾಟೀಲ್ ತಮ್ಮ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Investment: ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹಲವು ಕಂಪನಿಗಳ ಆಸಕ್ತಿ; ಡಾವೋಸ್ ಶೃಂಗಸಭೆಯಲ್ಲಿ 7 ಕಂಪನಿಗಳೊಂದಿಗೆ ಸರ್ಕಾರ ಒಡಂಬಡಿಕೆ
ಸಚಿವ ಎಂಬಿ ಪಾಟೀಲ್
Follow us on

ಬೆಂಗಳೂರು, ಜನವರಿ 17: ಸ್ವಿಟ್ಜರ್​ಲ್ಯಾಂಡ್​ನ ಡಾವೋಸ್​ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಂನ ವಾರ್ಷಿಕ ಸಭೆಯಲ್ಲಿ (World Economic Forum Annual Summit) ಏಳು ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಒಡಂಬಡಿಕೆ (ಎಂಒಯು) ಮಾಡಿಕೊಂಡಿವೆ ಎಂದು ರಾಜ್ಯ ಸರ್ಕಾರ ಇಂದು ಬುಧವಾರ (ಜ. 17) ಹೇಳಿದೆ. ವೆಬ್ ವೆರ್ಕ್ಸ್, ಲುಲು ಗ್ರೂಪ್, ಟಕೆಡಾ ಫಾರ್ಮಾಸ್ಯೂಟಿಕಲ್ಸ್ ಸೇರಿದಂತೆ ಏಳು ಸಂಸ್ಥೆಗಳು ರಾಜ್ಯ ಸರ್ಕಾರದೊಂದಿಗೆ ಎಂಒಯುಗೆ ಸಹಿ ಹಾಕಿರುವ ವಿಚಾರವನ್ನು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ. ಇವುಗಳಿಂದ ಒಟ್ಟು 2.6 ಬಿಲಿಯನ್ ಡಾಲರ್​ನಷ್ಟು ಹೂಡಿಕೆ ಆಗಲಿದೆ ಎಂದು ಸಚಿವರು ವಿವರಿಸಿದ್ದಾರೆ. ಅಂದರೆ, ಸುಮಾರು 22,000 ಕೋಟಿ ರೂನಷ್ಟು ಹೂಡಿಕೆ ಕರ್ನಾಟಕಕ್ಕೆ ಹರಿದುಬರಲಿದೆ.

ಮೂರು ದಿನಗಳ ಶೃಂಗಸಭೆಯಲ್ಲಿ ಕರ್ನಾಟಕ ಅಮೋಘ 2.6 ಬಿಲಿಯನ್ ಡಾಲರ್​ನಷ್ಟು ಮೌಲ್ಯದ ಒಪ್ಪಂದಗಳನ್ನು ಗಿಟ್ಟಿಸಿಕೊಂಡಿದೆ. ವೆಬ್ ವೆರ್ಕ್ಸ್, ಮೈಕ್ರೋಸಾಫ್ಟ್, ಹಿಟಾಚಿ, ಲುಲು ಗ್ರೂಪ್, ಹ್ಯೂಲೆಟ್ ಪ್ಯಾಕಾರ್ಡ್ (ಎಚ್​ಪಿ), ಹನಿವೆಲ್, ಐನಾಕ್ಸ್, ವೋಲ್ವೋ, ನೆಸ್ಲೆ, ಕಾಯಿನ್​ಬೇಸ್, ಟಕೆಡಾ ಫಾರ್ಮಾ, ಬಿಎಲ್ ಆಗ್ರೋ ಹಾಗೂ ಇನ್ನೂ ಹಲವು ಸಂಸ್ಥೆಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿವೆ ಎಂದು ಹೇಳಿರುವ ಸಚಿವ ಎಂಬಿ ಪಾಟೀಲ್, ಉದ್ಯಮ ನಾಯಕರ ಜೊತೆ ಮಾತುಕತೆ ಮುಂದುವರಿದಿದ್ದು, ಇನ್ನಷ್ಟು ಒಪ್ಪಂದಗಳನ್ನು ಪಡೆಯುವ ಸಂಭಾವ್ಯತೆ ಇದೆ ಎಂದಿದ್ದಾರೆ.

ಇದನ್ನೂ ಓದಿ: News Alert: ಶುಭ ಸುದ್ದಿ; ಪಿಎಂ ಕಿಸಾನ್ ಫಲಾನುಭವಿಗಳು, ಕಟ್ಟಡ ಕಾರ್ಮಿಕರಿಗೆ 10 ಲಕ್ಷ ರೂವರೆಗೆ ವಿಮಾ ಕವರೇಜ್?

ವೋಲ್ವೋದಿಂದ ಕರ್ನಾಟಕದಲ್ಲಿ ಟ್ರಕ್ ಘಟಕ

ವಿಶ್ವದ ಪ್ರಮುಖ ವಾಹನ ಸಂಸ್ಥೆಯಾದ ವೋಲ್ವೋ ಕರ್ನಾಟಕದಲ್ಲಿ ಹೊಸ ಟ್ರಕ್ ಉತ್ಪಾದನಾ ಘಟಕ ತೆರೆಯಲು ಯೋಜಿಸಿರುವ ವಿಚಾರವನ್ನು ಎಂಬಿ ಪಾಟೀಲ್ ಇದೇ ವೇಳೆ ತಿಳಿಸಿದ್ದಾರೆ. ಡಾವೋಸ್ ಶೃಂಗಸಭೆಯಲ್ಲಿ ತಾನು ವೋಲ್ವೋ ಗ್ರೂಪ್ ಸಿಟಿಒ ಶ ಲಾರ್ಸ್ ಸೆನ್​ಕ್ವಿಸ್ಟ್ ಜೊತೆ ಚರ್ಚೆ ನಡೆಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಭಾರತದ ಪ್ರಮುಖ ಡಾಟಾ ಸರ್ವರ್ ಸಂಸ್ಥೆಯಾದ ವೆಬ್ ವೆರ್ಕ್ಸ್ ಡಾಟಾ ಸೆಂಟರ್ ಪಾರ್ಕ್ ಸ್ಥಾಪಿಸಲು 20,000 ಕೋಟಿ ರೂ ಹೂಡಿಕೆ ಮಾಡಲಿದೆ. ಲುಲು ಗ್ರೂಪ್ ಸೇರಿದಂತೆ ಇತರ ನಾಲ್ಕು ಕಂಪನಿಗಳಿಂದ 2,000 ಕೋಟಿ ರೂನಷ್ಟು ಹೂಡಿಕೆ ಆಗಲಿದೆ.

ಇದನ್ನೂ ಓದಿ: Economy: ಭಾರತ ಮುಂದುವರಿದ ದೇಶವಾಗಲು ಖಾಸಗಿ ವಲಯದಿಂದ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಹೂಡಿಕೆ ಹೆಚ್ಚಬೇಕು; ಬಜೆಟ್​ನಲ್ಲಿ ನಿರೀಕ್ಷೆ ಏನು?

ಬೆಂಗಳೂರು ಸೇರಿದಂತೆ ದೇಶದ ಕೆಲವೆಡೆ ಬೃಹತ್ ಮಾಲ್​ಗಳನ್ನು ಹೊಂದಿರುವ ಯುಎಇ ಮೂಲದ ಲುಲು ಗ್ರೂಪ್ ವಿಜಯಪುರ ಜಿಲ್ಲೆಯಲ್ಲಿ ಆಹಾರ ಸಂಸ್ಕರಣೆ ಘಟಕ ಸ್ಥಾಪಿಸಲಿದೆ. ಅದಕ್ಕಾಗಿ 300 ಕೋಟಿ ರೂ ಹೂಡಿಕೆ ಆಡಲಿದೆ. ಟಕೆಡಾ ಫಾರ್ಮಸ್ಯೂಟಿಕಲ್ಸ್ ಸಂಸ್ಥೆ ಬೆಂಗಳೂರಿನಲ್ಲಿ ಗ್ಲೋಬಲ್ ಇನೋವೇಶನ್ ಸೆಂಟರ್ ಸ್ಥಾಪಿಸಲು ಯೋಜಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ