ಖಾಸಗಿ ಡಿಟಿಎಚ್ ಕಂಪನಿಗಳಿಗೆ ಬೆವರಿಳಿಸುತ್ತಿರುವ ಡಿಡಿ ಫ್ರೀ ಡಿಶ್; ಉಚಿತವಾಗಿ ಚಾನಲ್ಸ್ ವೀಕ್ಷಿಸಿ…
DD Free Dish, India's number one DTH service: ಹಲವು ಉಚಿತ ವಾಹಿನಿಗಳನ್ನು ಮಾಸಿಕ ಸಬ್ಸ್ಕ್ರಿಪ್ಷನ್ ಇಲ್ಲದೇ ಉಚಿತವಾಗಿ ನೀಡುತ್ತಿದೆ ಡಿಡಿ ಫ್ರೀ ಡಿಶ್. ಬೇರೆ ಎಲ್ಲಾ ಡಿಟಿಎಚ್ ನೀಡುಗರದ್ದನ್ನು ಒಟ್ಟಿಗೆ ಸೇರಿಸಿದರೆ ಗ್ರಾಹಕರ ಸಂಖ್ಯೆ 5.7 ಕೋಟಿ ಆಗುತ್ತದೆ. ಡಿಡಿ ಡಿಶ್ವೊಂದೇ ಒಂದು ಅಂದಾಜು ಪ್ರಕಾರ 6 ಕೋಟಿ ಮನೆಗಳಲ್ಲಿ ಸ್ಥಾಪನೆಯಾಗಿದೆ.

ನವದೆಹಲಿ, ಆಗಸ್ಟ್ 18: ಸರ್ಕಾರಿ ಸ್ವಾಮ್ಯದ ಪ್ರಸಾರ್ ಭಾರತಿ ಸಂಸ್ಥೆಯಿಂದ ಉಚಿತವಾಗಿ ನೀಡಲಾಗುತ್ತಿರುವ ಡಿಟಿಎಚ್ ಸರ್ವಿಸ್ ಹಲವೆಡೆ ಜನಪ್ರಿಯವಾಗುತ್ತಿದೆ. ಉತ್ತರ ಭಾರತದ ಅನೇಕ ಮಾರುಕಟ್ಟೆಗಳಲ್ಲಿ ಡಿಡಿ ಫ್ರೀ ಡಿಶ್ (DD Free Dish) ಪಾರಮ್ಯ ಮೆರೆಯತೊಡಗಿದೆ. ಭಾರತದ ಅತಿದೊಡ್ಡ ಡಿಟಿಎಚ್ ಸರ್ವಿಸ್ (DTH service) ಎನಿಸಿದೆ. ವರದಿಯೊಂದರಲ್ಲಿ ಮಾಡಲಾಗಿರುವ ಅಂದಾಜು ಪ್ರಕಾರ ದೇಶಾದ್ಯಂತ 6 ಕೋಟಿ ಮನೆಗಳಲ್ಲಿ ಡಿಡಿ ಡಿಶ್ ಅನ್ನು ಹಾಕಿಸಿಕೊಳ್ಳಲಾಗಿದೆ.
2004ರಲ್ಲೇ ಆರಂಭವಾದ ಡಿಡಿ ಡಿಶ್ ದೇಶದಲ್ಲಿರುವ ಏಕಮಾತ್ರ ಉಚಿತ ಡಿಟಿಎಚ್ ಸರ್ವಿಸ್ ಎನಿಸಿದೆ. ಅಧಿಕೃತ ದತ್ತಾಂಶದ ಪ್ರಕಾರ 2018ರಲ್ಲಿ 1.8 ಕೋಟಿ ಮನೆಗಳಲ್ಲಿ ಈ ಉಚಿತ ಡಿಶ್ ಅನ್ನು ಹಾಕಲಾಗಿತ್ತು. 2024ರಲ್ಲಿ ಈ ಸಂಖ್ಯೆ 4.9 ಕೋಟಿ ಮನೆಗಳಿಗೆ ಏರಿದೆ. ಕೆಲ ಅಂದಾಜು ಪ್ರಕಾರ 6 ಕೋಟಿ ಮನೆಗಳಲ್ಲಿ ಈ ಡಿಶ್ ಅಳವಡಿಸಿರಬಹುದು.
ಕುತೂಹಲ ಎಂದರೆ, ಡಿಡಿ ಡಿಶ್ ಹೊರತಪಡಿಸಿ ಉಳಿದ ಎಲ್ಲಾ ಡಿಟಿಎಚ್ಗಳನ್ನು ಸೇರಿಸಿದರೂ ಸಂಖ್ಯೆ 6 ಕೋಟಿ ದಾಟದು. ಡಿಡಿ ಡಿಶ್ ಹೊಂದಿರುವವರ ಸಂಖ್ಯೆ ಬಹಳ ಹೆಚ್ಚಿರಬಹುದು ಎಂಬುದು ಹಲವರ ವಾದ. ಅದಕ್ಕೆ ಕಾರಣ, ಡಿಡಿ ಡಿಶ್ನ ಸಿಗ್ನಲ್ಗಳು ಎನ್ಕ್ರಿಪ್ಟ್ ಆಗಿರುವುದಿಲ್ಲ. ಎಂಪೆಗ್-2 ಡಿವೈಸ್ಗಳನ್ನು ಅಳವಡಿಸಲಾಗಿದ್ದರೂ ಅವು ಎನ್ಕ್ರಿಪ್ಟ್ ಆಗದೇ ಇರುವುದರಿಂದ ಟ್ರ್ಯಾಕ್ ಮಾಡುವುದಕ್ಕೆ ಆಗುವುದಿಲ್ಲ. ಇದರಿಂದಾಗಿ ಎಷ್ಟು ಡಿಶ್ಗಳನ್ನು ಅಳವಡಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕುವುದೇ ಇಲ್ಲ. ಎನ್ಕ್ರಿಪ್ಟ್ ಮಾಡಲಾದ ಎಂಪೆಗ್-4 ಸೆಟಪ್ ಬಾಕ್ಸ್ಗಳನ್ನು ಬಿಡುಗಡೆ ಮಾಡುವ ಯೋಜನೆ ಫಲಪ್ರದವಾಗಿಲ್ಲ. ಹೀಗಾಗಿ, ಡಿಡಿ ಡಿಶ್ಗಳನ್ನು ಎಷ್ಟು ಮನೆಗಳಿಗೆ ಹಾಕಲಾಗಿದೆ ಎನ್ನುವ ನಿಖರ ದತ್ತಾಂಶ ಯಾರಿಗೂ ಗೊತ್ತಾಗುತ್ತಿಲ್ಲ. ಸ್ವತಃ ಪ್ರಸಾರ ಭಾರತಿ ಸಂಸ್ಥೆಗೂ ಇದು ತಿಳಿದಿಲ್ಲ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸಾವಿರ ಕೋಟಿ ರೂಗೆ ಕಚೇರಿ ಸ್ಥಳ ಬಾಡಿಗೆಗೆ ಪಡೆದ ಆ್ಯಪಲ್ ಕಂಪನಿ
ಡಿಡಿ ಫ್ರೀ ಡಿಶ್ ಪಡೆಯುವುದು ಹೇಗೆ?
ರೆಗ್ಯುಲರ್ ಡಿಟಿಎಚ್ಗಳು ಮಾಸಿಕವಾಗಿ ಸಬ್ಸ್ಕ್ರಿಪ್ಷನ್ ಫೀ ಸಂಗ್ರಹಿಸುತ್ತವೆ. ಬೇಸಿಕ್ ಪ್ಲಾನ್ಗಳಲ್ಲಿ ಫ್ರೀ ಚಾನಲ್ಗಳು ಇರುತ್ತವೆ. ಆದರೆ, ಡಿಡಿ ಡಿಶ್ನಲ್ಲಿ ಮಾಸಿಕ ಸಬ್ಸ್ಕ್ರಿಪ್ಷನ್ ಇರುವುದಿಲ್ಲ. ಎಲ್ಲಾ ಉಚಿತ ಚಾನಲ್ಗಳನ್ನು ಉಚಿತವಾಗಿ ವೀಕ್ಷಿಸಬಹುದು.
ಡಿಡಿ ಡಿಶ್ ಪಡೆಯಲು ಸೆಟಪ್ ಬಾಕ್ಸ್ ಮತ್ತು ಡಿಶ್ ಆಂಟೆನಾವನ್ನು ಮಾರುಕಟ್ಟೆಯಲ್ಲಿ ಖರೀದಿಸಬೇಕಾಗುತ್ತದೆ. ಇದಕ್ಕೆ ಸುಮಾರು 2,000 ರೂ ವೆಚ್ಚವಾಗುತ್ತದೆ. ನೀವು ಒಮ್ಮೆ ಖರೀದಿಸಿ ಇವುಗಳನ್ನು ಸ್ಥಾಪಿಸಿದರೆ ನೂರಾರು ಚಾನಲ್ಗಳನ್ನು ಉಚಿತವಾಗಿ ವೀಕ್ಷಿಸಬಹುದು.
ಸ್ಟಾರ್ ಪ್ಲಸ್, ಕಲರ್ಸ್, ಝೀ ಟಿವಿ, ಸೋನಿ ಇತ್ಯಾದಿ ಚಾನಲ್ಗಳನ್ನು ವೀಕ್ಷಿಸಲು ಶುಲ್ಕ ಇರುತ್ತದೆ. ಆದರೆ, ಇವುಗಳ ಹಳೆಯ ಕಾರ್ಯಕ್ರಮಗಳನ್ನೇ ಕಲಸಿರುವಂತಹ ಸ್ಟಾರ್ ಉತ್ಸವ್, ಕಲರ್ಸ್ ರಿಶ್ತೆ, ಝೀ ಅನ್ಮೋಲ್, ಸೋನಿ ಪಾಲ್ನಂತಹ ಚಾನಲ್ಗಳು ಫ್ರೀಯಾಗಿ ಸಿಗುತ್ತವೆ. ಡಿಡಿ ಡಿಶ್ನಲ್ಲಿ ಈ ಚಾನಲ್ಗಳಿಗೆ ಬೇಡಿಕೆ ಇದೆ. ಡಿಡಿ ಡಿಶ್ನಲ್ಲಿ ಬರಬೇಕಾದರೆ ಚಾನಲ್ಗಳು 15-20 ಕೋಟಿ ರೂ ಕ್ಯಾರಿಯೇಜ್ ಫೀ ತೆರಬೇಕು. ಆದರೆ, ನಾಲ್ಕೈದು ಕೋಟಿ ಮನೆಗಳ ದೊಡ್ಡ ಮಾರುಕಟ್ಟೆ ಸಿಗುವುದರಿಂದ ಈ ಚಾನಲ್ಗಳಿಗೆ ಅದು ದೊಡ್ಡ ಮೊತ್ತವೆನಿಸುವುದಿಲ್ಲ. ಪ್ರಸಾರಭಾರತಿ ಸಂಸ್ಥೆಗೆ ವಾರ್ಷಿಕವಾಗಿ ಕ್ಯಾರಿಯೇಜ್ ಶುಲ್ಕದಿಂದಲೇ 800 ಕೋಟಿ ರೂ ಆದಾಯ ಬರುತ್ತದೆ.
ಇದನ್ನೂ ಓದಿ: ಒಂದು ವರ್ಷ, 3,000 ರೂ, 200 ಟ್ರಿಪ್; ಬಂದಿದೆ ಫಾಸ್ಟ್ಯಾಗ್ ವಾರ್ಷಿಕ ಪಾಸ್; ಪಡೆಯುವ ಕ್ರಮ ತಿಳಿದಿರಿ
ದಕ್ಷಿಣ ಭಾಷೆಗಳತ್ತ ಡಿಡಿ ಡಿಶ್ ಗಮನ
ಸದ್ಯ ಡಿಡಿ ಫ್ರೀ ಡಿಶ್ನಲ್ಲಿ ಹಿಂದಿ ಕಾರ್ಯಕ್ರಮಗಳೇ ಇವೆ. ಮಧ್ಯಪ್ರದೇಶ ಇತ್ಯಾದಿ ಹಿಂದಿ ಭಾಷಿಕ ಪ್ರದೇಶಗಳಲ್ಲಿ ಡಿಡಿ ಡಿಶ್ಗಳು ಹೆಚ್ಚಿವೆ. ಈಗ ಬೇರೆ ಪ್ರದೇಶಗಳ ಮಾರುಕಟ್ಟೆಗೂ ತರಲು ಸರ್ಕಾರ ಯತ್ನಿಸುತ್ತಿದೆ. ದಕ್ಷಿಣ ಭಾಷೆಯ ಚಾನಲ್ಗಳಿಗೆ ಇ-ಹರಾಜುಗಳಲ್ಲಿ ರಿಸರ್ವ್ಡ್ ಸ್ಲಾಟ್ ಇಡುವ ಪ್ಲಾನ್ ಹಾಕಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




