ಕೋಲ್ಕತಾ ಮೂಲದ ಪಾಲಿಮರ್ ಉತ್ಪನ್ನಗಳ ತಯಾರಕ ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಲಿ ಸಂಸ್ಥೆ (Ddev Plastiks Industries) ಇದೀಗ ಅಪ್ಪಟ ಮಲ್ಟಿಬ್ಯಾಗರ್ ಆಗಿ ಪರಿಣಮಿಸಿದೆ. ಕಳೆದ 1 ವರ್ಷದಲ್ಲಿ ಇದರ ಷೇರುಬೆಲೆ ಶೇ. 387ರಷ್ಟು ಬೆಳೆದಿದೆ. 2022-23ರ ಹಣಕಾಸು ವರ್ಷದಲ್ಲಿ ಇದರ ವ್ಯಾವಹಾರಿಕ ಲಾಭದಲ್ಲೂ ಗಮನಾರ್ಹ ಏರಿಕೆ ಆಗಿದೆ. ಇದರ ಷೇರುದಾರರಿಗೆ ಡಬಲ್ ಧಮಾಕ ಸಿಕ್ಕಿದೆ. ಡಿದೇವ್ ಪ್ಲಾಸ್ಟಿಕ್ಸ್ನ ಷೇರುಬೆಲೆ ಒಂದು ವರ್ಷದಲ್ಲಿ ಶೇ. 429ರಷ್ಟು ಬೆಳೆದಿರುವ ಜೊತೆಗೆ ಕಂಪನಿಯು ಷೇರುದಾರರಿಗೆ ಬೋನಸ್ ಷೇರುಗಳನ್ನು ಪ್ರಕಟಿಸಿದೆ.
ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ನ ನಿರ್ದೇಶಕರ ಮಂಡಳಿ ತನ್ನ ಕಂಪನಿಯ ಷೇರುದಾರರಿಗೆ 1:10 ಅನುಪಾತದಲ್ಲಿ ಬೋನಸ್ ಷೇರುಗಳನ್ನು ವಿತರಿಸಲು ಅನುಮೋದನೆ ನೀಡಿರುವುದಾಗಿ ಜೂನ್ 19ರಂದು ತಿಳಿಸಲಾಗಿದೆ. ಅಂದರೆ ಪ್ರತೀ 10 ಷೇರಿಗೆ 1 ಹೆಚ್ಚುವರಿ ಷೇರು ಸಿಗುತ್ತದೆ. ಜುಲೈ 16ರಂದು ನಡೆಯುವ ಮಂಡಳಿ ಸಭೆ ಆಗಿ 2 ತಿಂಗಳೊಳಗೆ ಬೋನಸ್ ಷೇರುಗಳು ಜಮೆ ಆಗುತ್ತವೆ.
ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಬೋನ್ ಷೇರುಗಳ ವಿಶೇಷತೆ ಎಂದರೆ ಇದರ ಷೇರು ಮೌಲ್ಯದಲ್ಲಿ ಯಾವುದೇ ವ್ಯತ್ಯಯ ಮಾಡದೆಯೇ ಹೆಚ್ಚುವರಿ ಷೇರು ವಿತರಿಸಲಾಗುತ್ತದೆ. ಹಾಗೆ ಮಾಡುವ ಕೆಲವೇ ಕಂಪನಿಗಳಲ್ಲಿ ಡಿದೇವ್ ಒಂದು. ಈ ಬೋನಸ್ ಷೇರುಗಳ ವಿತರಣೆಯಿಂದ ಕಂಪನಿಯ ಷೇರುಗಳ ಸಂಖ್ಯೆ ಹೆಚ್ಚುತ್ತದೆ. ಷೇರುಗಳ ಹರಿವು ಹೆಚ್ಚಾಗುತ್ತದೆ.
ಇದನ್ನೂ ಓದಿ: Multibagger: ಮೂರು ವರ್ಷದಲ್ಲಿ 18 ಪಟ್ಟು ಲಾಭ; 1 ಲಕ್ಷಕ್ಕೆ 18 ಲಕ್ಷ ರಿಟರ್ನ್; ಮಲ್ಟಿಬ್ಯಾಗರ್ ಆಗಿದೆ ಆರಿಯಾನ್ಪ್ರೋ
2022ರ ಜುಲೈ ಕೊನೆಯ ವಾರದಲ್ಲಿ ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಬೆಲೆ 38.55 ರೂ ಇತ್ತು. ಕೇವಲ 1 ವರ್ಷದೊಳಗಾಗಿ ಅದರ ಬೆಲೆ 200 ರೂ ಗಡಿದಾಟಿದೆ. ನಿನ್ನೆ ಜೂನ್ 29ರಂದು 197 ರೂ ಇದ್ದ ಅದರ ಬೆಲೆ ಇಂದು 204.20 ರೂ ಆಗಿದೆ. ಅಂದರೆ, ಅದರ ಬೆಲೆ ಒಂದು ವರ್ಷದಲ್ಲಿ ಶೇ. 429ರಷ್ಟು ಹೆಚ್ಚಾಗಿದೆ.
ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಮುಖ್ಯಕಚೇರಿ ಹೊಂದಿರುವ ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಸಂಸ್ಥೆ ಪಾಲಿಮರ್ ಕೆಮಿಕಲ್ ಉತ್ಪನ್ನಗಳನ್ನು ತಯಾರಿಸುತ್ತದೆ. ಪಿಇ, ಪಿವಿಸಿ, ಫಿಲ್ಲರ್ ಕೌಂಪೌಂಡ್, ಮಾಸ್ಟರ್ ಬ್ಯಾಚಸ್, ಫೂಟ್ವೇರ್ ಕಾಂಪೌಂಡ್, ಪೈಪ್ ಕಾಂಪೌಂಡ್, ಪೆರಾಕ್ಸೈಡ್ ಕಾಂಪೌಂಡ್ ಇತ್ಯಾದಿ ಉತ್ಪನ್ನಗಳನ್ನು ಇದು ತಯಾರಿಸುತ್ತದೆ.
ಇದರ ಆದಾಯ 2022-23ರ ವರ್ಷದಲ್ಲಿ 667 ಕೋಟಿ ರೂ ಇದೆ. ನಿವ್ವಳ ಆದಾಯ 48 ಕೋಟಿ ರೂಗೂ ಹೆಚ್ಚಿದೆ. ಇದರ ಒಟ್ಟು ಷೇರುಸಂಪತ್ತು 1928 ಕೋಟಿ ರೂನಷ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ