ನವೆಂಬರ್ 10ರಿಂದ 15ರವರೆಗೆ ದೇಶಾದ್ಯಂತ ದೀಪಾವಳಿ ಹಬ್ಬದ (deepavali festival) ಸಡಗರ ಇದೆ. ಈ ಆರೂ ದಿನಗಳು ವಿವಿಧೆಡೆ ರಜೆಗಳಿವೆ. ಷೇರು ಮಾರುಕಟ್ಟೆ ಶನಿವಾರ ಮತ್ತು ಭಾನುವಾರ ಮುಚ್ಚಿರುತ್ತದೆ. ಆದರೆ, ಈ ಬಾರಿ ಭಾನುವಾರದಂದು ದೀಪಾವಳಿ ಪ್ರಯುಕ್ತ ವಿಶೇಷ ಮೂಹೂರತ್ ಟ್ರೇಡಿಂಗ್ (Muhurat Trading) ಅಥವಾ ಮುಹೂರ್ತ ವ್ಯಾಪಾರ ನಡೆಯಲಿದೆ. ಇನ್ನು, ದೀಪಾವಳಿ ಬಲಿಪಾಡ್ಯಮಿ ದಿನವಾದ ನವೆಂಬರ್ 14ಕ್ಕೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಮುಚ್ಚಿರುತ್ತವೆ.
ನವೆಂಬರ್ 14ರಂದು ದೇಶದ ಬಹುತೇಕ ಕಡೆ ದೀಪಾವಳಿ ರಜೆ ಇದೆ. ಷೇರುಪೇಟೆಯೂ ಬಂದ್ ಆಗಿರುತ್ತದೆ. ಆದರೆ, ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (ಎಂಸಿಎಕ್ಸ್) ಅರ್ಧದಿನ ಮಾತ್ರವೇ ತೆರೆದಿರುತ್ತದೆ. ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ದಿನವೂ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮೊದಲ ಸೆಷನ್ ಹಾಗೂ ಸಂಜೆ 5ಗಂಟೆಯಿಂದ ರಾತ್ರಿ 11:55ರವರೆಗೂ ಎರಡನೆ ಸೆಷನ್ ವಹಿವಾಟುಗಳು ನಡೆಯುತ್ತವೆ. ಆದರೆ, ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನವಾದ ನವೆಂಬರ್ 14ರಂದು ಎಂಸಿಎಕ್ಸ್ನ ಬೆಳಗಿನ ಅವಧಿ ರಜೆ ಇರುತ್ತದೆ. ಸಂಜೆ 5 ಗಂಟೆಯವರೆಗೂ ಯಾವುದೇ ವಹಿವಾಟು ನಡೆಯುವುದಿಲ್ಲ. ಸಂಜೆ 5ರ ನಂತರ ಅಲ್ಲಿ ಚಟುವಟಿಕೆ ಶುರುವಾಗುತ್ತದೆ.
ಇದನ್ನೂ ಓದಿ: ದೀಪಾವಳಿ ಸೀಸನ್ನಲ್ಲಿ ಹೆಚ್ಚಿದ ವೋಕಲ್ ಫಾರ್ ಲೋಕಲ್ ಕೂಗು; ಚೀನಾಗೆ ಲಕ್ಷಕೋಟಿ ರೂ ನಷ್ಟ ಸಾಧ್ಯತೆ
ಈ ಬಾರಿಯ ದೀಪಾವಳಿ ಮುಹೂರ್ತ ವ್ಯಾಪಾರ ನವೆಂಬರ್ 12ರಂದು, ಸಂಜೆ 6ರಿಂದ 7:15ಕ್ಕೆ ನಡೆಯಲಿದೆ ಎಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ತಿಳಿಸಿದೆ. ಅಂದು ಭಾನುವಾದ್ದರಿಂದ ಷೇರುಪೇಟೆ ಬಂದ್ ಆಗಿರುತ್ತದಾದರೂ ಮುಹೂರತ್ ಟ್ರೇಡಿಂಗ್ ಮಾತ್ರವೇ ನಡೆಯುವುದು. ಅದಕ್ಕಾಗಿ ಒಂದು ಗಂಟೆ ಮಾತ್ರವೇ ಈ ಟ್ರೇಡಿಂಗ್ ಇರುತ್ತದೆ. ದೀಪಾವಳಿ ಹಬ್ಬದಂದು ವಿಕ್ರಮ್ ಸಂವತ್ಸರ 2080ರ ಹೊಸ ವರ್ಷ ಆರಂಭವಾಗುತ್ತದೆ. ಅದರ ಹಿನ್ನೆಲೆಯಲ್ಲಿ ಮುಹೂರ್ತ ವ್ಯಾಪಾರ ನಡೆಯುತ್ತದೆ.
ಇದನ್ನೂ ಓದಿ: ದೀಪಾವಳಿ ಹಬ್ಬದಂದು ಆರು ದಿನ ಬ್ಯಾಂಕುಗಳ ರಜೆ; ನಿಮ್ಮ ಪ್ರದೇಶದಲ್ಲಿ ಯಾವ್ಯಾವತ್ತು ಇದೆ ರಜೆ, ಇಲ್ಲಿದೆ ಪಟ್ಟಿ
ಹೊಸ ವರ್ಷಾರಂಭದ ಶುಭ ಮುಹೂರ್ತದಲ್ಲಿ ಖರೀದಿ ಮಾಡುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಷೇರು ಮಾರುಕಟ್ಟೆಯಲ್ಲೂ ಜನರು ಇದನ್ನು ನಂಬಿ ಷೇರು ಖರೀದಿಗೆ ಮುಂದಾಗುತ್ತಾರೆ. ಅದಕ್ಕಾಗಿ ಈ ಕಾಲಘಟ್ಟದಲ್ಲಿ ಒಂದು ಗಂಟೆಯನ್ನು ಟ್ರೇಡಿಂಗ್ಗಾಗಿ ಮೀಸಲಿಡಲಾಗುತ್ತದೆ. ಅಂದು ಷೇರುಗಳನ್ನು ಖರೀದಿಸಿದರೆ ಸಂಪತ್ತು ಹೆಚ್ಚುತ್ತದೆಂಬ ನಂಬಿಕೆ ಇದೆ. ಹೀಗಾಗಿ, ಮುಹೂರತ್ ಟ್ರೇಡಿಂಗ್ನ ಒಂದು ಗಂಟೆಯಲ್ಲಿ ಷೇರುವಹಿವಾಟು ಬಹಳ ಹೆಚ್ಚಿರುತ್ತದೆ. ಹಿಂದಿನ ಎರಡು ವರ್ಷಗಳಲ್ಲಿ ಷೇರುಪೇಟೆ ತುಸು ಹೆಚ್ಚಳ ಕಂಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ