Coal Imports: ಭಾರತದಿಂದ ಕಲ್ಲಿದ್ದಲು ಆಮದು ಗಣನೀಯ ಏರಿಕೆ; ಭಾರತ ಅಗ್ರಗಣ್ಯ ಕಲ್ಲಿದ್ದಲು ಉತ್ಪಾದಕ ದೇಶವಾದರೂ ಇಷ್ಟೊಂದು ಆಮದು ಯಾಕೆ?

|

Updated on: Apr 09, 2023 | 1:02 PM

Why India Imports Coal? ಕಳೆದ ಹಣಕಾಸು ವರ್ಷದಲ್ಲಿ ಭಾರತ 148.58 ಮಿಲಿಯನ್ ಟನ್ ಕಲ್ಲಿದ್ದಲು ಆಮದು ಮಾಡಿಕೊಂಡಿದೆ. ಕಲ್ಲಿದ್ದಲು ಉತ್ಪಾದನೆಯಲ್ಲಿ ಚೀನಾ ಬಿಟ್ಟರೆ ಭಾರತವೇ ಹೆಚ್ಚು. ಆದರೂ ಭಾರತ ಶೇ. 30ರಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತದೆ. ಇದು ಯಾಕೆ ಎಂಬ ವಿವರ ಈ ವರದಿಯಲ್ಲಿದೆ.

Coal Imports: ಭಾರತದಿಂದ ಕಲ್ಲಿದ್ದಲು ಆಮದು ಗಣನೀಯ ಏರಿಕೆ; ಭಾರತ ಅಗ್ರಗಣ್ಯ ಕಲ್ಲಿದ್ದಲು ಉತ್ಪಾದಕ ದೇಶವಾದರೂ ಇಷ್ಟೊಂದು ಆಮದು ಯಾಕೆ?
ಕಲ್ಲಿದ್ದಲು ಗಣಿಗಾರಿಕೆ
Follow us on

ನವದೆಹಲಿ: 2022 ಏಪ್ರಿಲ್​ನಿಂದ 2023 ಫೆಬ್ರುವರಿಯವರೆಗೆ ಭಾರತ ಆಮದು ಮಾಡಿಕೊಂಡಿರುವ ಕಲ್ಲಿದ್ದಲು ಪ್ರಮಾಣ 148.58 ಮಿಲಿಯನ್ ಟನ್ (ಎಂಟಿ) ಎಂದು ಹೇಳಲಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 112.38 ಎಂಟಿಯಷ್ಟು ಕಲ್ಲಿದ್ದಲನ್ನು ಭಾರತ ಆಮದು ಮಾಡಿಕೊಂಡಿತ್ತು. ಅಂದರೆ ಕಲ್ಲಿದ್ದಲು ಆಮದಿನಲ್ಲಿ (Coal Imports) ಶೇ. 32ರಷ್ಟು ಹೆಚ್ಚಳವಾಗಿದೆ. ಕರಿಕು ಕಲ್ಲಿದ್ದಲು (Coking Coal) ಆಮದು ಶೇ. 7.69ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷ ಕೋಕಿಂಗ್ ಕೋಲ್ 46.89 ಎಂಟಿಯಷ್ಟು ಆಮದಾಗಿದ್ದರೆ ಈ ಬಾರಿ ಅದು 50.60 ಎಂಟಿಗೆ ಏರಿದೆ. 2023 ಫೆಬ್ರುವರಿ ಒಂದೇ ತಿಂಗಳಲ್ಲಿ ಕೋಕಿಂಗ್ ಕೋಲ್ ಆಮದು 4.40 ಎಂಟಿಯಷ್ಟಿದೆ. ಇನ್ನು ನಾನ್ಕೋಕಿಂಗ್ ಕೋಲ್​ನ ಆಮದು 2023 ಫೆಬ್ರುವರಿಯಲ್ಲಿ 11.68 ಮಿಲಿಯನ್ ಟನ್​ಗಳಿಷ್ಟಿದೆ ಎಂದು ವರದಿಗಳು ಹೇಳುತ್ತಿವೆ. 2022 ಫೆಬ್ರುವರಿಯಲ್ಲಿ ಕರಿಕು ಕಲ್ಲಿದ್ದಲು ಆಮದು 4.03 ಎಂಟಿಯಾಗಿದ್ದರೆ, ಕರಿಕಲ್ಲದ ಕಲ್ಲಿದ್ದಲಿನ ಆಮದು 9.42 ಮಿಲಿಯನ್ ಟನ್​ಗಳಷ್ಟಿತ್ತು.

ಅತಿಹೆಚ್ಚು ಕಲ್ಲಿದ್ದಲು ಉತ್ಪಾದಕ ದೇಶವಾದರೂ ಭಾರತ ಯಾಕೆ ಹೆಚ್ಚು ಆಮದು ಮಾಡಿಕೊಳ್ಳುತ್ತದೆ?

ವಿಶ್ವದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಚೀನಾ ಬಿಟ್ಟರೆ ಭಾರತದಲ್ಲೇ ಹೆಚ್ಚು ಕಲ್ಲಿದ್ದಲು ಗಣಿಗಾರಿಕೆ ನಡೆಯುವುದು. ಹಾಗೆಯೇ, ಕಲ್ಲಿದ್ದಲು ಅತಿಹೆಚ್ಚು ಬಳಸುವ ದೇಶದಲ್ಲಿ ಚೀನಾ ಬಿಟ್ಟರೆ ಭಾರತವೇ ಹೆಚ್ಚು.

ಇದನ್ನೂ ಓದಿApple In Bengaluru: ಬೆಂಗಳೂರಿನಲ್ಲಿ ಕಚೇರಿ ತೆರೆದ ಆ್ಯಪಲ್; ಮುಂಬೈನ ಆ್ಯಪಲ್ ಸ್ಟೋರ್​ಗಿಂತ 6 ಪಟ್ಟು ಹೆಚ್ಚು ಬಾಡಿಗೆ

ಭಾರತ ಒಂದು ವರ್ಷದಲ್ಲಿ ಸಾಮಾನ್ಯವಾಗಿ 700-800 ಮಿಲಿಯನ್ ಟನ್​ಗಳಷ್ಟು ಕಲ್ಲಿದ್ದಲನ್ನು ಉತ್ಪಾದಿಸುತ್ತದೆ. ಆದರೆ, ಭಾರತಕ್ಕೆ ಅಗತ್ಯ ಇರುವ ಕಲ್ಲಿದ್ದಲು ಇನ್ನೂ ಹೆಚ್ಚು. ಕಲ್ಲಿದ್ದಲನ್ನು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ. ಉಕ್ಕು ತಯಾರಿಕೆಗೆ ಕರಿಕು ಕಲ್ಲಿದ್ದಲು ಅಥವಾ ಕೋಕ್ ಕಲ್ಲಿದ್ದಲಿನ ಅವಶ್ಯಕತೆ ಇದೆ. ಭಾರತದಲ್ಲಿ ಉತ್ತಮ ಗುಣಮಟ್ಟದ ಕೋಕ್ ಕೋಲ್ ಲಭ್ಯ ಇಲ್ಲ. ಹೀಗಾಗಿ, ಕರಿಕು ಕಲ್ಲಿದ್ದಲನ್ನು ಭಾರತ ಆಮದು ಮಾಡಿಕೊಳ್ಳುವುದು ಅನಿವಾರ್ಯ. ಭಾರತದ ಒಟ್ಟಾರೆ ಕಲ್ಲಿದ್ದಲು ಬೇಡಿಕೆಯನ್ನು ಪೂರೈಸಲು ಶೇ. 30ರಷ್ಟು ಆಮದು ಮಾಡಿಕೊಳ್ಳಲಾಗುತ್ತದೆ. ಭಾರತದಲ್ಲಿ ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪಗಳಿರುವುದು ಜಾರ್ಖಂಡ್, ಒಡಿಶಾ ಮತ್ತು ಛತ್ತೀಸ್​ಗಡ ರಾಜ್ಯಗಳಲ್ಲಿ.

ಪರಿಸರಕ್ಕೆ ಹಾನಿ ತರುವ ಕಲ್ಲಿದ್ದಲು ಬಳಕೆ ಕಡಿಮೆ ಮಾಡಲು ಜಾಗತಿಕ ಒತ್ತಡ

ಕಲ್ಲಿದ್ದಲು ಸುಡುವುದರಿಂದ ಪರಿಸರಕ್ಕೆ ಕಾರ್ಬನ್ ಡೈಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್ ಇತ್ಯಾದಿ ಹಸಿರುಮನೆ ಅನಿಲಗಳು (Greenhouse Gases) ಸೇರಿಹೋಗುತ್ತದೆ. ಇವುಗಳಿಂದ ಪರಿಸರಕ್ಕೆ ಭಾರೀ ಹಾನಿಯಾಗಿ ಭೂಮಿಯ ಜೀವ ಸಂಕುಲದ ನಾಶಕ್ಕೆ ಕಾರಣವಾಗಬಹುದು ಎಂಬುದು ವಿಶ್ವಸಂಸ್ಥೆಯ ವಾದ.

ಇದನ್ನೂ ಓದಿIT Notice: ಆದಾಯ ತೆರಿಗೆ ನೋಟೀಸ್ ಯಾರಿಗೆ ಬರುತ್ತದೆ? ಯಾವ ತಪ್ಪಾಗಿದ್ದರೆ ಐಟಿ ಇಲಾಖೆ ಕ್ರಮ ಕೈಗೊಳ್ಳುತ್ತದೆ? ಕಾರಣ ತಿಳಿದಿರಿ

ಆದರೆ, ಈಗ ಮುಂದುವರಿದ ದೇಶಗಳೆಲ್ಲವೂ ಸಾಕಷ್ಟು ಕಲ್ಲಿದ್ದಲು ಬಳಕೆ ಮಾಡಿಕೊಂಡು ತಮ್ಮ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಿವೆ. ತಮ್ಮಲ್ಲಿರುವ ಕಲ್ಲಿದ್ದಲು ಸಂಪನ್ಮೂಲವನ್ನೆಲ್ಲಾ ಖಾಲಿ ಮಾಡಿವೆ. ಭಾರತದಲ್ಲಿ ಈಗ ಬಹಳಷ್ಟು ಕಲ್ಲಿದ್ದಲು ನಿಕ್ಷೇಪಗಳಿವೆ. ಈ ಹಂತದಲ್ಲಿ ಕಲ್ಲಿದ್ದಲು ಬಳಕೆಯನ್ನು ನಿಲ್ಲಿಸಿ ಎಂದು ಮುಂದುವರಿದ ದೇಶಗಳು ಭಾರತಕ್ಕೆ ತಾಕೀತು ಮಾಡುತ್ತಿವೆ. ಅದರೆ, ವಿದ್ಯುತ್, ಸ್ಟೀಲ್ ಇತ್ಯಾದಿ ಉತ್ಪಾದನೆಗೆ ಭಾರತ ಕಲ್ಲಿದ್ದಲಿನ ಮೇಲೆಯೇ ಹೆಚ್ಚು ಅವಲಂಬನೆ ಆಗಿದೆ. ಸೌರಶಕ್ತಿ, ವಾಯುಶಕ್ತಿ ಇತ್ಯಾದಿ ಪರ್ಯಾಯ ಇಂಧನ ವ್ಯವಸ್ಥೆ ಪರಿಪೂರ್ಣವಾಗಿ ರೂಪುಗೊಳ್ಳುವವರೆಗೂ ಭಾರತ ಕಲ್ಲಿದ್ದಲು ಬಳಕೆ ಮುಂದುವರಿಸುವ ಸಾಧ್ಯತೆ ಹೆಚ್ಚು. ಚೀನಾ ಕೂಡ ಇದೇ ಸ್ಥಿತಿಯಲ್ಲಿ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Sun, 9 April 23