ದೊಡ್ಡವರ ಮಕ್ಕಳು ಸಿಲ್ವರ್ ಸ್ಪೂನ್ ಬಾಯಲ್ಲಿಟ್ಟುಕೊಂಡು ಬೆಳೆಯುತ್ತಾರೆ, ಬಹಳ ಐಷಾರಾಮಿ ಜೀವನ ನಡೆಸುತ್ತಾರೆ ಎಂಬುದು ಜನಸಾಮಾನ್ಯರಲ್ಲಿ ಇರುವ ಒಟ್ಟಾರೆ ಅನಿಸಿಕೆ. ಆದರೆ ಬಹಳಷ್ಟು ಶ್ರೀಮಂತರು, ಅದರಲ್ಲೂ ಉದ್ಯಮಿಗಳು ಹಣದ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿರುತ್ತಾರೆ. ಹಣದ ಮಹತ್ವ ತಿಳಿದವರಾಗಿರುತ್ತಾರೆ. ಮುಕೇಶ್ ಅಂಬಾನಿ ತಮ್ಮ ಮಕ್ಕಳನ್ನು ರಾಯಲ್ ಆಗಿ ಬೆಳೆಸಲಿಲ್ಲ. ಸಾಧಾರಣ ರೀತಿಯಲ್ಲೇ ಮಕ್ಕಳನ್ನು ಬೆಳೆಸಿದರು. ವಿಶ್ವದ ಅತಿದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾದ ಮತ್ತು ಶ್ರೀಮಂತರಲ್ಲಿ ಶ್ರೀಮಂತ ಎನಿಸಿದ ವಾರನ್ ಬಫೆಟ್ ಕೂಡ ಇಂಥದ್ದೇ ಪ್ರವೃತ್ತಿಯವರು. ಅವರ ಮಗಳೊಬ್ಬಳು ವಾರನ್ ಬಫೆಟ್ ಬಗ್ಗೆ ಆಡುವ ಮಾತುಗಳು ಇದಕ್ಕೆ ಸಾಕ್ಷಿ.
ಅಮೆರಿಕದ ವಾರನ್ ಬಫೆಟ್ನ ಮಗಳು ಸೂಸನ್ ಬಫೆಟ್ ತನ್ನ ಅಪ್ಪನ ಬಗ್ಗೆ ಕುತೂಹಲ ಎನಿಸುವ ಹಲವು ವಿಚಾರಗಳನ್ನು ಸಂದರ್ಶನಗಳಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಜಿಡಿಪಿಗಿಂತ ಹೆಚ್ಚು ಹಣ ಹೊಂದಿರುವ ವಾರನ್ ಬಫೆಟ್ ಈಗಲೂ ಕೂಡ ಸಾಮಾನ್ಯರಂತೆಯೇ ಬದುಕುತ್ತಿದ್ದಾರೆ.
ತಮ್ಮ ತಂದೆ ಇಷ್ಟು ದೊಡ್ಡ ಶ್ರೀಮಂತಿಗೆ ಹೊಂದಿದ್ದಾರೆ ಎಂಬುದು ತನಗೆ 20 ವರ್ಷ ವಯಸ್ಸು ದಾಟುವವರೆಗೂ ಗೊತ್ತೇ ಇರಲಿಲ್ಲ. ಕುಟುಂಬದಲ್ಲಿ ಯಾರೂ ಕೂಡ ಈ ಬಗ್ಗೆ ಹೇಳಿಕೊಳ್ಳುತ್ತಿರಲಿಲ್ಲ. ತನಗೆ ವಾಲ್ ಸ್ಟ್ರೀಟ್ ಜರ್ನಲ್ನಲ್ಲಿ ಬಂದ ಲೇಖನವೊಂದರ ಮೂಲಕ ಅಪ್ಪ ಎಷ್ಟು ಶ್ರೀಮಂತ ಎನ್ನುವುದು ಗೊತ್ತಾಯಿತು ಎನ್ನುತ್ತಾರೆ ಸುಸಾನ್ ಬಫೆಟ್.
ಇದನ್ನೂ ಓದಿ: ಬೆಂಗಳೂರು, ರಿಯಾಧ್ ನಗರಗಳಲ್ಲಿ ಹೆಚ್ಚಾಗಲಿದ್ದಾರೆ ಶತ ಮಿಲಿಯನೇರ್ಗಳು; ಟಾಪ್-50 ಪಟ್ಟಿಯಲ್ಲಿ ಮುಂಬೈ, ದೆಹಲಿ
ಎಲ್ಲರಂತೆಯೇ ನಾವೂ ಇದ್ದೆವು. ಏನೂ ವಿಶೇಷ ಇರಲಿಲ್ಲ. ಮೇಲ್ಮಧ್ಯಮ ವರ್ಗದ ಶೈಲಿಯ ಜೀವನ ನಮ್ಮದಾಗಿತ್ತು. ಅಪ್ಪ ಈಗಲೂ ಕೂಡ ಅದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ವಾರನ್ ಬಫೆಟ್ ಮಗಳು ಹೇಳುತ್ತಾರೆ.
ಸುಸನ್ ಬಫೆಟ್ಗೆ ಮಗು ಹುಟ್ಟಿದಾಗ ಅಡುಗೆ ಕೋಣೆಯನ್ನು ಮಾರ್ಪಡಿಸುವ ಆಲೋಚನೆ ಬಂತಂತೆ. ಅದಕ್ಕಾಗಿ 41,000 ಡಾಲರ್ (ಸುಮಾರು 30 ಲಕ್ಷ ರೂ) ಹಣವನ್ನು ಸಾಲವಾಗಿ ಕೊಡುವಂತೆ ಅಪ್ಪನಿಗೆ ಕೇಳುತ್ತಾರೆ. ವಾರನ್ ಬಫೆಟ್ ಮಗಳಿಗೆ ಹಣ ಕೊಡಲು ಒಪ್ಪೋದಿಲ್ಲ. ಎಲ್ಲರಂತೆ ಬ್ಯಾಂಕ್ಗೆ ಹೋಗಿ ಸಾಲಕ್ಕೆ ಅರ್ಜಿ ಸಲ್ಲಿಸು ಎಂದು ಮಗಳಿಗೆ ತಿಳಿಸಿದರಂತೆ. ಹಾಗಂತ ಸುಸಾನ್ ಬಫೆಟ್ ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral: ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ ಇಂಜಿನಿಯರ್, ಕೆಲಸ ಸಿಕ್ಕ ಖುಷಿಯಲ್ಲಿ ಟೆಕ್ಕಿ ಹೇಳಿದ್ದೇನು?
ತಾನು ಹಣದ ನೆರವು ಕೇಳಿದ್ದಲ್ಲ. ಸಾಲ ಕೇಳಿದ್ದು. ಆದರೂ ಅಪ್ಪ ಹಾಗಂತ ಹೇಳಿ ಕಳುಹಿಸಿದ್ರು ಅಂತ ಹೆಮ್ಮೆ ಮತ್ತು ಬೇಸರ ಎರಡೂ ಮಿಶ್ರವಾಗಿರುವ ಭಾವದಲ್ಲಿ ಸುಸನ್ ಆ ಘಟನೆ ಸ್ಮರಿಸುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ