Diwali festive: ದೀಪಾವಳಿಗೆ ಬಂಪರ್ ಬೋನಸ್ ಮತ್ತು ನಗದು ಉಡುಗೊರೆಗಳಿಗೂ ಕಟ್ಟಬೇಕು ತೆರಿಗೆ
Income Tax: ಹಬ್ಬದ ಸಂದರ್ಭದಲ್ಲಿ ಅದರಲ್ಲೂ ದೀಪಾವಳಿ ಹಬ್ಬದಂದು ಹೆಚ್ಚಿನ ಕಂಪನಿಗಳು ನಗದು ಬೋನಸ್ ನೀಡುತ್ತವೆ. ತೆರಿಗೆ ನಿಯಮ ಮೀರಿದ ಬೋನಸ್ ಅನ್ನು ನೀವು ಪಡೆದರೆ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ.
ಬೆಳಕಿನ ಹಬ್ಬ ಎಂದೇ ಕರೆಯಲಾಗುವ ದೀಪಾವಳಿ (Diwali) ಹಬ್ಬ ಸಮೀಪಿಸುತ್ತಿದೆ. ಕಂಪನಿಗಳಲ್ಲಿ ಉದ್ಯೋಗ ಮಾಡಿಕೊಂಡಿರುವ ನೌಕರರು ಬೋನಸ್ ಸಿಗುವ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಭಾರತದ ಆದಾಯ ತೆರಿಗೆ (Income Tax) ಕಾನೂನುಗಳ ಪ್ರಕಾರ, ಪಡೆಯುವ ಬೋನಸ್ ಹಾಗೂ ನಗದು ಉಡುಗೊರೆಗಳು (Bonus And Cash Gifts) ತೆರಿಗೆಗೆ ಒಳಪಟ್ಟಿದೆ. ಆದಾಯ ತೆರಿಗೆ ಇಲಾಖೆಯ ಪ್ರಕಾರ, ಪರಿಗಣನೆಯಿಲ್ಲದೆ ಸ್ವೀಕರಿಸಿದ ಯಾವುದೇ ಹಣದ ಮೊತ್ತವನ್ನು (ರಸೀದಿ ಅಥವಾ ಬೆಲೆಬಾಳುವ ಯಾವುದೇ ವಸ್ತುವಿನ ವಿನಿಮಯದಲ್ಲಿ) ‘ವಿತ್ತೀಯ ಉಡುಗೊರೆ’ ಎಂದು ಕರೆಯಬಹುದು. ಪರಿಗಣನೆಯಿಲ್ಲದೆ ಸ್ವೀಕರಿಸಲಾದ ನಿರ್ದಿಷ್ಟ ಚರ ಆಸ್ತಿಗಳನ್ನು ‘ಚರ ಆಸ್ತಿಯ ಉಡುಗೊರೆ’ ಎಂದು ಕರೆಯಬಹುದು. ನಗದು, ಚೆಕ್, ಡ್ರಾಫ್ಟ್ ಇತ್ಯಾದಿಗಳನ್ನು ಒಳಗೊಂಡ ‘ವಿತ್ತೀಯ ಉಡುಗೊರೆ’ ಒಂದು ವರ್ಷದಲ್ಲಿ 50,000 ರೂ.ಗಳನ್ನು ಮೀರಿದರೆ ತೆರಿಗೆಗೆ ಒಳಪಟ್ಟಿರುತ್ತದೆ.
ಆದರೆ, ವ್ಯಕ್ತಿಯ ವಿವಾಹದ ಸಂದರ್ಭದಲ್ಲಿ ಸ್ವೀಕರಿಸಿದ ಉಡುಗೊರೆಗೆ ತೆರಿಗೆ ವಿಧಿಸಲಾಗುವುದಿಲ್ಲ. ವಿವಾಹವನ್ನು ಹೊರತುಪಡಿಸಿ ಒಬ್ಬ ವ್ಯಕ್ತಿಯು ಸ್ವೀಕರಿಸಿದ ವಿತ್ತೀಯ ಉಡುಗೊರೆಗೆ ತೆರಿಗೆ ವಿಧಿಸಲಾಗುತ್ತದೆ. ಜನ್ಮದಿನ, ವಾರ್ಷಿಕೋತ್ಸವ ಮುಂತಾದ ಸಂದರ್ಭಗಳಲ್ಲಿ ಸ್ವೀಕರಿಸಿದ ವಿತ್ತೀಯ ಉಡುಗೊರೆಗೆ ತೆರಿಗೆ ವಿಧಿಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಉಡುಗೊರೆಯ ತೆರಿಗೆಯ ಸಾಮರ್ಥ್ಯವನ್ನು ವರ್ಷದಲ್ಲಿ ಸ್ವೀಕರಿಸಿದ ಉಡುಗೊರೆಯ ಒಟ್ಟು ಮೌಲ್ಯದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆಯೇ ಹೊರತು ವೈಯಕ್ತಿಕ ಉಡುಗೊರೆಯ ಆಧಾರದ ಮೇಲೆ ಅಲ್ಲ ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ಗಮನಿಸಬೇಕು. ಆದ್ದರಿಂದ ವರ್ಷದಲ್ಲಿ ಸ್ವೀಕರಿಸಿದ ಉಡುಗೊರೆಗಳ ಒಟ್ಟು ಮೌಲ್ಯವು 50,000 ರೂಪಾಯಿಗಿಂದ ಹೆಚ್ಚಿದ್ದರೆ ತೆರಿಗೆ ವಿಧಿಸಲಾಗುತ್ತದೆ.
ಕಂಪನಿಗಳಿಂದ ದೀಪಾವಳಿ ಬೋನಸ್
ದೀಪಾವಳಿ ಹಬ್ಬದಂದು ಒಂದಷ್ಟು ಕಂಪನಿಗಳು ತನ್ನ ನೌಕರರಿಗೆ ನಗದು ಬೋನಸ್ ಅಥವಾ ವೋಚರ್ ನೀಡುತ್ತದೆ. ನೆನಪಡಿಡಬೇಕಾದ ಅಂಶವೆಂದರೆ, 5,000 ರೂ.ಗಿಂತ ಹೆಚ್ಚಿನ ಯಾವುದೇ ಉಡುಗೊರೆ ವೋಚರ್ ಅನ್ನು ನಿಮ್ಮ ಸಂಬಳದ ಭಾಗವಾಗಿ ಪರಿಗಣಿಸಲಾಗುತ್ತದೆ. ಅಲ್ಲದೆ ಇದಕ್ಕೆ ಅನ್ವಯವಾಗುವ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ. ಕಂಪನಿಯು ನಿಮ್ಮ ಖಾತೆಗೆ ಜಮೆ ಮಾಡುವ ಯಾವುದೇ ಹಣವನ್ನು ಸಂಬಳದ ಒಂದು ಭಾಗವೆಂದು ಪರಿಗಣಿಸಲಾಗುತ್ತದೆ ಮತ್ತು ತೆರಿಗೆ ವಿಧಿಸಲಾಗುತ್ತದೆ.
ಕಂಪನಿಯ ಯಾವುದೇ ನಗದು ಉಡುಗೊರೆಯು 5,000 ರೂ.ಗಿಂತ ಕಡಿಮೆಯಿದ್ದರೂ ಸಹ ಅದು ತೆರಿಗೆಗೆ ಒಳಪಟ್ಟಿರುತ್ತದೆ. ಏಕೆಂದರೆ ಅದನ್ನು ನಿಮ್ಮ ಸಂಬಳದ ಭಾಗವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ವೋಚರ್ ಅಥವಾ ಕೂಪನ್ ರೂಪದಲ್ಲಿನ 4,999 ರೂ.ಗಳಿಗೆ ತೆರಿಗೆ ವಿಧಿಸಲಾಗುವುದಿಲ್ಲ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:56 am, Mon, 3 October 22