ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಅಕ್ಟೋಬರ್ 9 ರಂದು ನಿಧನರಾದರು. ಇವರ ಮರಣದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಸುಳ್ಳು ಸುದ್ದಿಗಳು ವೈರಲ್ ಆಗುತ್ತಿವೆ. ರತನ್ ಟಾಟಾ ಅವರ ಫೇಕ್ ಕೋಟ್ಸ್, ಇವರ ಮುದ್ದು ನಾಯಿ ಗೋವಾ ಕೂಡ ನಿಧನವಾಗಿದೆ ಎಂಬ ಸುದ್ದಿ ಹರಿದಾಡಿದ್ದವು. ಇದೀಗ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಸಮಾಧಿಯ ಬಳಿ ನಾಯಿಯನ್ನು ಕಾಣಬಹುದು. ಸಮಾಧಿಯ ಮೇಲೆ ರತನ್ ಟಾಟಾ ಅವರ ಚಿತ್ರವಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ‘‘ಇದು ರತನ್ ಟಾಟಾ ಅವರ ಸಮಾಧಿಯ ಮೇಲೆ ಕಣ್ಣೀರು ಸುರಿಸುತ್ತಿರುವ ನಾಯಿ. ಮಾಲೀಕರಿಗಾಗಿ ಅಳುತ್ತಲೇ ಇದೆ,’’ ಎಂದು ಹೇಳಲಾಗುತ್ತಿದೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ವಿಡಿಯೋ ಮತ್ತು ಹೇಳಿಯೊಂದಿಗೆ ಇದು ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಮೂಲ ವಿಡಿಯೋದಲ್ಲಿ ರತನ್ ಟಾಟಾ ಅವರ ಸಮಾಧಿಯ ಚಿತ್ರ ಇಲ್ಲ ಮತ್ತು ಈ ವಿಡಿಯೋ ಅವರ ಸಾವಿಗೂ ಮುನ್ನವೇ ಅಂತರ್ಜಾಲದಲ್ಲಿ ಲಭ್ಯವಿತ್ತು.
ನಿಜಾಂಶವನ್ನು ತಿಳಿಯಲು ನಾವು ಮೊದಲನೆಯದಾಗಿ ವಿಡಿಯೋವನ್ನು ಎಚ್ಚರಿಕೆಯಿಂದ ವೀಕ್ಷಿಸಿದ್ದೇವೆ. ಕ್ಲಿಪ್‌ನಲ್ಲಿ ರತನ್ ಟಾಟಾ ಅವರ ಚಿತ್ರ ಸ್ಥಿರವಾಗಿಲ್ಲ ಮತ್ತು ಅದನ್ನು ಮೇಲಿನಿಂದ ಅಂಟಿಸಿರುವುದು ಗೋಚರಿಸುತ್ತದೆ. ಈ ವಿಡಿಯೋವನ್ನು ಎಡಿಟ್ ಮಾಡಿರಬಹುದು ಮತ್ತು ಮೂಲ ವಿಡಿಯೋದಲ್ಲಿ ಬೇರೆ ಯಾವುದಾದರೂ ಚಿತ್ರ ಇರಬಹುದು ಎಂದು ನಾವು ಶಂಕಿಸಿದ್ದೇವೆ.
ಇದಕ್ಕಾಗಿ ನಾವು ವಿಡಿಯೋದ ಕೀಫ್ರೇಮ್‌ಗಳನ್ನು ಗೂಗಲ್ನಲ್ಲಿ ಹಿಮ್ಮುಖ ಚಿತ್ರಗಳ ಮೂಲಕ ಹುಡುಕಿದ್ದೇವೆ. ಆಗ ಈ ವೀಡಿಯೊವನ್ನು ಅಕ್ಟೋಬರ್ 1, 2024 ರಂದು ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊದಲ್ಲಿ, ಸಮಾಧಿಯ ಮೇಲೆ ಇನ್ನೊಬ್ಬ ವ್ಯಕ್ತಿಯ ಚಿತ್ರವನ್ನು ಕಾಣಬಹುದು.
ರತನ್ ಟಾಟಾ ಅವರು 9 ಅಕ್ಟೋಬರ್ 2024 ರಂದು ನಿಧನರಾದರು ಮತ್ತು ಈ ವೈರಲ್ ವಿಡಿಯೋ 1 ಅಕ್ಟೋಬರ್ 2024 ರಿಂದ ಅಂತರ್ಜಾಲದಲ್ಲಿ ಪ್ರಸ್ತುತವಾಗಿದೆ. ಈ ವಿಡಿಯೋದ ಮೂಲವನ್ನು ಸ್ವತಂತ್ರವಾಗಿ ಪರಿಶೀಲಿಸಲು ನಮಗೆ ಸಾಧ್ಯವಾಗದಿದ್ದರೂ, ಈ ವಿಡಿಯೋ ಸ್ಪಷ್ಟವಾಗಿ ಹಳೆಯದಾಗಿದೆ ಮತ್ತು ರತನ್ ಟಾಟಾ ಅವರ ಸಾವಿನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಅಲ್ಲದೆ ಅಕ್ಟೋಬರ್ 11 ರಂದು ಮುಂಬೈನ ವಿದ್ಯುತ್ ಚಿತಾಗಾರದಲ್ಲಿ ರತನ್ ಟಾಟಾ ಅವರ ಅಂತ್ಯಕ್ರಿಯೆಗಳನ್ನು ನಡೆಸಲಾಯಿತು. ಹೀಗಾಗಿ ಅವರಿಗೆ ಯಾವುದೇ ಸಮಾಧಿ ಇಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ