ಮುಳ್ಳಿಗೆ ಮುಳ್ಳು..! ಟ್ಯಾಕ್ಸ್ ಹಾಕುವ ಭಾರತದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳೋದಿದು…

|

Updated on: Dec 18, 2024 | 11:58 AM

Donald Trump on import taxes: ಅಮೆರಿಕ ಅಧ್ಯಕ್ಷ ಚುನಾಯಿತ ಡೊನಾಲ್ಡ್ ಟ್ರಂಪ್ ಅವರು ಅನುರೂಪ ತೆರಿಗೆ ಕ್ರಮವು ತಮ್ಮ ಆಡಳಿತದ ಪ್ರಮುಖ ನೀತಿಯಾಗಿರಲಿದೆ ಎಂದಿದ್ದಾರೆ. ಭಾರತ, ಬ್ರೆಜಿಲ್​ನಂತಹ ದೇಶಗಳು ಅಮೆರಿಕದ ಉತ್ಪನ್ನಗಳಿಗೆ ಹೆಚ್ಚು ತೆರಿಗೆ ಹಾಕುತ್ತವೆ. ಅದಕ್ಕೆ ಬದಲಾಗಿ ಅಮೆರಿಕ ಏನೂ ವಿಧಿಸುವುದಿಲ್ಲ. ಇದು ಬದಲಾಗಬೇಕು ಎಂದಿದ್ದಾರೆ. ಅವರು ಎಷ್ಟು ತೆರಿಗೆ ಹಾಕುತ್ತಾರೋ ನಾವೂ ಅಷ್ಟ ತೆರಿಗೆ ಹಾಕುತ್ತೇವೆ ಎಂದು ಟ್ರಂಪ್ ತಮ್ಮ ನೀತಿಯನ್ನು ಸ್ಪಷ್ಟಪಡಿಸಿದ್ದಾರೆ.

ಮುಳ್ಳಿಗೆ ಮುಳ್ಳು..! ಟ್ಯಾಕ್ಸ್ ಹಾಕುವ ಭಾರತದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳೋದಿದು...
ಡೊನಾಲ್ಡ್ ಟ್ರಂಪ್
Follow us on

ವಾಷಿಂಗ್ಟನ್, ಡಿಸೆಂಬರ್ 18: ಅಮೆರಿಕ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಭಾರತವನ್ನು ಸ್ನೇಹಿ ರಾಷ್ಟ್ರವೆಂದು ಪರಿಗಣಿಸಿದರಾದರೂ ಬಿಸಿನೆಸ್ ವಿಷಯಕ್ಕೆ ಬಂದರೆ ನಿಷ್ಠುರವಾದ ಮಂಡಿಸುತ್ತಾರೆ. ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುವ ಉತ್ಪನ್ನಗಳ ಮೇಲೆ ಭಾರತ ತೆರಿಗೆ ಹೇರುವುದರ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿರುವ ಅವರು, ತಮ್ಮ ದೇಶವೂ ಭಾರತೀಯ ಉತ್ಪನ್ನಗಳ ಮೇಲೆ ತೆರಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅವರು ಯಾವುದಕ್ಕೆ ಎಷ್ಟು ತೆರಿಗೆ ಹಾಕುತ್ತಾರೋ, ನಾವೂ ಅಷ್ಟೇ ತೆರಿಗೆ ಹಾಕಬೇಕಾಗುತ್ತದೆ. ಇದು ಅನುರೂಪ (reciprocal) ನಡೆಯಾಗಬೇಕು. ಅವರು ನಮಗೆಷ್ಟು ತೆರಿಗೆ ಹಾಕುತ್ತಾರೋ ನಾವೂ ಅಷ್ಟೇ ತೆರಿಗೆ ಹಾಕುತ್ತೇವೆ. ಹೆಚ್ಚಿನ ಸಂದರ್ಭಗಳಲ್ಲಿ ಅವರು ತೆರಿಗೆ ಹಾಕುತ್ತಾರೆ. ನಾವು ಅವರಿಗೆ ತೆರಿಗೆ ಹಾಕೋದಿಲ್ಲ. ಇದನ್ನು ಬದಲಾಯಿಸುತ್ತೇವೆ,’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್​ ಲಸಿಕೆ ಸಿದ್ಧ, ವೈದ್ಯಕೀಯ ವಿಜ್ಞಾನದಲ್ಲಿ ರಷ್ಯಾದ ಸಾಧನೆ, ಲಸಿಕೆ ಉಚಿತ

ಭಾರತ, ಬ್ರೆಜಿಲ್ ಮೊದಲಾದ ದೇಶಗಳು ಕೆಲ ಅಮೆರಿಕನ್ ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹಾಕುತ್ತಿವೆ ಎನ್ನುವುದು ಡೊನಾಲ್ಡ್ ಟ್ರಂಪ್ ಅಸಮಾಧಾನವಾಗಿದೆ. ಹಾರ್ಲೀ ಡೇವಿಡ್ಸನ್ ಕಂಪನಿಯ ಬೈಕುಗಳ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಈ ಹಿಂದೆ ಬಹಿರಂಗವಾಗಿಯೇ ಭಾರತವನ್ನು ತರಾಟೆಗೆ ತೆಗೆದುಕೊಂಡಿದ್ದಿದೆ. ಐದಾರು ವರ್ಷದ ಪೂರ್ವದಲ್ಲಿ ಅಮೆರಿಕದ ಹಾರ್ಲೀ ಡೇವಿಡ್ಸನ್ ಬೈಕುಗಳ ಮೇಲೆ ಭಾರತ ಶೇ. 100ರಷ್ಟು ಸುಂಕ ವಿಧಿಸುತ್ತಿತ್ತು. ಬಳಿಕ ಅದನ್ನು ಶೇ. 50ರಷ್ಟು ಕಡಿತಗೊಳಿಸಲಾಯಿತು. ಆದರೂ ಕೂಡ ಅದು ಅತಿಯಾಯಿತು ಎನ್ನುವುದು ಟ್ರಂಪ್ ಅನಿಸಿಕೆ. ಕೆಲ ತಿಂಗಳ ಹಿಂದೆ ಭಾರತದ ಸಚಿವರು ಹಾರ್ಲೀ ಡೇವಿಡ್ಸನ್ ಬೈಕುಗಳ ಮೇಲಿನ ಆಮದು ಸುಂಕವನ್ನು ಮತ್ತಷ್ಟು ಇಳಿಸುವ ಕುರಿತು ಮಾತುಗಳನ್ನಾಡಿದ್ದರು.

‘ಭಾರತದಂತಹ ದೇಶವು ನಮಗೆ ಶೇ. 100ರಷ್ಟು ತೆರಿಗೆ ವಿಧಿಸುತ್ತದೆ. ಅದಕ್ಕೆ ಬದಲಾಗಿ ನಾವು ಅವರಿಗೆ ಏನೂ ಹಾಕಬಾರದಾ? ಅವರು ಬೈಸಿಕಲ್ ಕಳುಹಿಸಿದರೆ ನಾವೂ ಬೈಸಿಕಲ್ ಕಳುಹಿಸುತ್ತೇವೆ. ಅವರು ನಮಗೆ 100 ಮತ್ತು 200 ಚಾರ್ಜ್ ಮಾಡುತ್ತಾರೆ. ಭಾರತ ಸಾಕಷ್ಟು ತೆರಿಗೆ ವಿಧಿಸುತ್ತದೆ. ಬ್ರೆಜಿಲ್ ಸಾಕಷ್ಟು ತೆರಿಗೆ ವಿಧಿಸುತ್ತದೆ. ಅವರು ಬೇಕಾದರೆ ತೆರಿಗೆ ವಿಧಿಸಲಿ ಪರವಾಗಿಲ್ಲ, ಆದರೆ ನಾವೂ ಕೂಡ ಅಷ್ಟೇ ತೆರಿಗೆ ವಿಧಿಸುತ್ತೇವೆ,’ ಎಂದು ಅಮೆರಿಕದ ಫ್ಲೋರಿಡಾ ರಾಜ್ಯದ ಪಾಮ್ ಬೀಚ್ ಕೌಂಟಿಯಲ್ಲಿರುವ ಮಾರ್ ಎ ಲಾಗೋ ಎಂಬಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡುತ್ತಾ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಎರಡನೇ ಕ್ವಾರ್ಟರ್​ನಲ್ಲಿ ಜಿಡಿಪಿ ದರ ಕಡಿಮೆಗೊಂಡಿರುವುದು ತಾತ್ಕಾಲಿಕ ಹಿನ್ನಡೆ ಮಾತ್ರ: ನಿರ್ಮಲಾ ಸೀತಾರಾಮನ್

ಡೊನಾಲ್ಟ್ ಟ್ರಂಪ್ ಅನಿಸಿಕೆಯನ್ನು ಪುನರುಚ್ಚರಿಸಿದ ಅವರ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ‘ಅನುರೂಪತೆ (reciprocity) ಎಂಬುದು ಟ್ರಂಪ್ ಆಡಳಿತದ ಒಂದು ಪ್ರಮುಖ ನೀತಿಯಾಗಿರುತ್ತದೆ. ನೀವು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತೀರೋ, ನಾವೂ ಕೂಡ ನಿಮ್ಮನ್ನು ಹಾಗೇ ನಡೆಸಿಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ