
ವಾಷಿಂಗ್ಟನ್, ಜೂನ್ 17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಟ್ಯಾರಿಫ್ ಬೆದರಿಕೆಯ ಪ್ರಲಾಪ ಮುಂದುವರಿದಿದೆ. ಫಾರ್ಮಾ ವಲಯಕ್ಕೂ ಟ್ಯಾರಿಫ್ ಬರೆ ಹಾಕುತ್ತೇನೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಅಧ್ಯಕ್ಷರಿಗೆಂದು ಸಿದ್ಧಪಡಿಸಲಾದ ಏರ್ ಫೋರ್ಸ್ ಒನ್ ವಿಶೇಷ ವಿಮಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಡೊನಾಲ್ಡ್ ಟ್ರಂಪ್, ಶೀಘ್ರದಲ್ಲೇ ಫಾರ್ಮಾ ಉತ್ಪನ್ನಗಳ ಆಮದು ಸುಂಕ ಹಾಕಲಾಗುವುದು ಎಂದಿದ್ದಾರೆ. ಇದರ ಬೆನ್ನಲ್ಲೇ ಭಾರತದಲ್ಲಿರುವ ವಿವಿಧ ಫಾರ್ಮಾ ಸೆಕ್ಟರ್ ಕಂಪನಿಗಳ ಷೇರುಗಳು ಇವತ್ತು ಹಿನ್ನಡೆ ಕಂಡಿವೆ.
ಭಾರತದ ಸರಕು ರಫ್ತಿನಲ್ಲಿ ಔಷಧೋದ್ಯಮದ ಪಾಲು ದೊಡ್ಡದಿದೆ. ಅಮೆರಿಕಕ್ಕೂ ಸಾಕಷ್ಟು ಔಷಧ ರಫ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಫಾರ್ಮಾ ಷೇರುಗಳು ಇವತ್ತು ಕುಸಿತ ಕಂಡಿವೆ. ಟ್ರಂಪ್ ಹೇಳಿಕೆ ಬಳಿಕ ನಿಫ್ಟಿ ಫಾರ್ಮಾ ಸೂಚ್ಯಂಕ ಶೇ. 2.5ರಷ್ಟು ಕುಸಿದಿದೆ. ಇವತ್ತು ಮಂಗಳವಾರ ಈ ಇಂಡೆಕ್ಸ್ ಒಟ್ಟಾರೆ ಶೇ. 1.89ರಷ್ಟು ಕುಸಿದಿದೆ.
ಭಾರತದ ಷೇರು ಮಾರುಕಟ್ಟೆ ಒಟ್ಟಾರೆ ಇವತ್ತು ಇಳಿಮುಖವಾದರೂ ಫಾರ್ಮಾ ಮತ್ತು ಲೋಹ ಹೊರತುಪಡಿಸಿ ಉಳಿದ ಹೆಚ್ಚಿನ ಸೆಕ್ಟರ್ಗಳು ಕುಸಿದಿರುವುದು ಶೇ. 1ಕ್ಕಿಂತಲೂ ಕಡಿಮೆ. ಫಾರ್ಮಾ ಸೆಕ್ಟರ್ನಲ್ಲಿ ಗ್ರಾನ್ಯೂಲ್ಸ್ ಇಂಡಿಯಾ ಷೇರುಮೌಲ್ಯ ಶೇ. 4ರಷ್ಟು ಕುಸಿತ ಕಂಡಿದೆ. ಅಬ್ಬಾಟ್ ಇಂಡಿಯಾ ಹೊರತುಪಡಿಸಿ ನಿಫ್ಟಿ ಫಾರ್ಮಾದಲ್ಲಿರುವ ಎಲ್ಲಾ ಷೇರುಗಳು ಹಿನ್ನಡೆ ಕಂಡಿವೆ.
ಇದನ್ನೂ ಓದಿ: ಈ ಕಂಪನಿ ಮೇಲೆ ಮಾಡಿದ 500 ಕೋಟಿ ರೂ ಹೂಡಿಕೆಯಿಂದ ಅಂಬಾನಿಗೆ ಸಿಕ್ಕ ಲಾಭ 9,000 ಕೋಟಿ ರೂ
ಅತಿಹೆಚ್ಚು ಹಿನ್ನಡೆ ಕಂಡ ಸ್ಟಾಕ್ಗಳಲ್ಲಿ ಗ್ರಾನ್ಯೂಲ್ಸ್ ಇಂಡಿಯಾ, ಡಿವಿಸ್ ಲ್ಯಾಬ್ಸ್, ಅರಬಿಂದೋ ಫಾರ್ಮ, ಲೌರುಸ್ ಲ್ಯಾಬ್, ಲುಪಿನ್ ಲ್ಯಾಬ್, ನ್ಯಾಟ್ಕೋ ಫಾರ್ಮ, ಸನ್ ಫಾರ್ಮ, ಝೈಡಸ್ ಲೈಫ್ ಮೊದಲಾದವು ಸೇರಿವೆ.
ತಿಂಗಳುಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಬಹುತೇಕ ಎಲ್ಲಾ ದೇಶಗಳ ಮೇಲೆ ಆಮದು ಸುಂಕ ಹೇರಿಕೆ ಘೋಷಿಸಿದ್ದರು. ಫಾರ್ಮಾ, ಎಲೆಕ್ಟ್ರಾನಿಕ್ಸ್ ಇತ್ಯಾದಿ ಕೆಲ ಸೆಕ್ಟರ್ಗಳನ್ನು ಮಾತ್ರ ಹೊರತುಪಡಿಸಲಾಗಿತ್ತು. ಆದರೆ, ಫಾರ್ಮಾ ಸೆಕ್ಟರ್ ಮೇಲೆ ಹಿಂದೆಂದೂ ಕಾಣದ ಮಟ್ಟದಲ್ಲಿ ತೆರಿಗೆ ವಿಧಿಸುವುದಾಗಿ ಟ್ರಂಪ್ ಎಚ್ಚರಿಕೆಯನ್ನಂತೂ ನೀಡಿದ್ದರು.
ಇದನ್ನೂ ಓದಿ: ಟಿಸಿಎಸ್ ಉದ್ಯೋಗಿಗಳಿಗೆ 35ಕ್ಕೂ ಹೆಚ್ಚು ದಿನ ಬೆಂಚ್ ಟೈಮ್ ಇಲ್ಲ; ಇದರಿಂದ ಅನುಕೂಲವೇನು?
ಈಗ ಆ ಸಮಯ ಸಮೀಪಿಸಿದೆ ಎಂದು ವರದಿಗಳು ಹೇಳುತ್ತಿವೆ. ಭಾರತದ ಫಾರ್ಮಾ ಕಂಪನಿಗಳ ಹೆಚ್ಚಿನ ಬ್ಯುಸಿನೆಸ್ ಆಫ್ರಿಕಾ, ಯೂರೋಪ್ ದೇಶಗಳಲ್ಲಿ ಇದೆ. ಅಮೆರಿಕಕ್ಕೂ ಜೆನೆರಿಕ್ ಔಷಧಗಳು ಸರಬರಾಜಾಗುತ್ತವೆಯಾದರೂ ಹೆಚ್ಚಿನ ಮಟ್ಟದಲ್ಲಿ ಇಲ್ಲ. ಅಮೆರಿಕದ ಟ್ಯಾರಿಫ್ ಕ್ರಮದಿಂದ ಭಾರತದ ಫಾರ್ಮಾ ಉದ್ಯಮಕ್ಕೆ ತೀರಾ ದೊಡ್ಡ ಆಘಾತವಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ