Debt Limit: ಒಬ್ಬ ವ್ಯಕ್ತಿ ಎಷ್ಟು ಸಾಲ ಮಾಡಬಹುದು? ಮಿತಿ ಎಷ್ಟಿರಬೇಕು?
Debt limit formula: ಸಾಲ ಮಾಡಿ ತುಪ್ಪ ತಿನ್ನು ಅಂತಾರೆ. ಸಾಲ ಶೂಲಕ್ಕೆ ಸಮ ಎಂತಾರೆ. ಯಾವುದು ಸರಿ? ತಜ್ಞರ ಪ್ರಕಾರ, ಸಾಲ ಒಂದು ಮಿತಿ ಮೀರಿ ಹೋದರೆ ಶೂಲವಾಗಬಹುದು. ಎಷ್ಟು ಮಿತಿ ಇರಬೇಕು ಎನ್ನುವುದಕ್ಕೆ ಒಂದು ಸಿಂಪಲ್ ಸೂತ್ರ ಇದೆ. ನಿಮ್ಮ ಒಟ್ಟು ಸಾಲವು ಆ ಸೂತ್ರ ನೀಡುವ ಮಿತಿ ದಾಟದಂತೆ ನೋಡಿಕೊಳ್ಳುವುದು ವೈಯಕ್ತಿಕ ಹಣಕಾಸು ದೃಷ್ಟಿಯಿಂದ ಒಳ್ಳೆಯದು.

ಹಣ ಮತ್ತು ಅನುಭೋಗ (Money and Consumption) ವಿಚಾರಕ್ಕೆ ಬಂದರೆ ಎರಡು ರೀತಿಯ ಜಿಜ್ಞಾಸೆ ಕಾಣಬಹುದು. ಇರುವುದಿಷ್ಟೇ ಜೀವನ. ನಿನ್ನೆ ಮತ್ತು ನಾಳೆ ಏನಾದರಾಗಲೀ ಇವತ್ತು ಖುಷಿಯಾಗಿರಿ. ಸಾಲ ಮಾಡಿಯಾದರೂ ತುಪ್ಪ ತಿನ್ನಿ ಎಂದು ಒಂದು ವರ್ಗ ಹೇಳುತ್ತದೆ. ನೀವು ಇವತ್ತೂ ಖುಷಿಯಾಗಿರಿ, ನಾಳೆಯೂ ಖುಷಿಯಾಗಿರಿ. ಸಾಲವೆಂಬ ಶೂಲಕ್ಕೆ ಅಪ್ಪಿತಪ್ಪಿಯೂ ಸಿಲುಕಬೇಡಿ ಎಂದು ಮತ್ತೊಂದು ವರ್ಗದ ಜಾಣರು ಹೇಳುತ್ತಾರೆ.
ಎಷ್ಟು ಮಾಡಬಹುದು ಸಾಲ?
ಸಂಬಳದ ಜೀವನ ನಡೆಸುತ್ತಿರುವವರಲ್ಲಿ ಹೆಚ್ಚಿನವರು ಸಾಲ ಮಾಡದೇ ವಿಧಿ ಇಲ್ಲ ಎನ್ನುವ ಸ್ಥಿತಿಯಲ್ಲಿರುವವರೇ. ಆಸ್ಪತ್ರೆ ವೆಚ್ಚವೋ, ಮನೆ ಖರೀದಿಯೋ, ವಾಹನ ಖರೀದಿಯೋ ಹೀಗೆ ಬೇರೆ ಬೇರೆ ಕಾರಣಕ್ಕೆ ಸಾಲ ಮಾಡಬಹುದು. ಈಗ ಇಎಂಐಗಳ ಕಾಲವಾದ್ದರಿಂದ ತಿಂಗಳಿಗೆ ಕಂತುಗಳಲ್ಲಿ ಕಟ್ಟಿದರಾಯಿತು ಎಂದು ಸಾಲಕ್ಕೆ ಹೆದರದವರು ಬಹಳ ಮಂದಿ ಇದ್ದಾರೆ.
ಇದನ್ನೂ ಓದಿ: ಕೈಯಲ್ಲಿ ಹಣ ನಿಲ್ಲೊಲ್ಲವಾ? ಹಣವಂತರಾಗಲು ಈ ಸಿಂಪಲ್ ಟ್ರಿಕ್ಸ್ ಉಪಯೋಗಿಸಿ
ಕೆಲ ತಜ್ಞರ ಪ್ರಕಾರ ನಿಮ್ಮ ಒಟ್ಟಾರೆ ಸಾಲವು ನಿಮ್ಮ ಆದಾಯದ ಶೇ. 36ಕ್ಕಿಂತ ಕಡಿಮೆ ಇರಬೇಕು. ಇದು ಗೃಹಸಾಲದ ಇಎಂಐ, ಕಾರ್ ಲೋನ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿ ಒಳಗೊಂಡಿರುತ್ತದೆ.
ಉದಾಹರಣೆಗೆ, ತಿಂಗಳಿಗೆ ನಿಮಗೆ 50,000 ರೂ ಆದಾಯ ಇದೆ ಎಂದಿಟ್ಟುಕೊಳ್ಳಿ. ಅದರ ಶೇ. 36 ಎಂದರೆ 18,000 ರೂ ಆಗುತ್ತದೆ. ನೀವು ಕಟ್ಟುವ ಎಲ್ಲಾ ಇಎಂಐ ಅಥವಾ ಕಂತು 18,000 ರೂ ಒಳಗೆ ಇರಬೇಕು. ಇದು ಶೇ. 43 ಅನ್ನು ಮೀರಬಾರದು. ಅಂದರೆ, 22,500 ರೂಗಿಂತ ಹೆಚ್ಚಿಗೆ ಆಗುವಂತಿಲ್ಲ.
ಇದು ಎಲ್ಲರಿಗೂ ಅನ್ವಯಿಸಬೇಕೆಂದಿಲ್ಲ. ಸಾಮಾನ್ಯವಾಗಿ ಇರುವ ಭಾವನೆ. ನಿಮ್ಮ ಆದಾಯ ಹೆಚ್ಚಿದ್ದಷ್ಟೂ ಮತ್ತು ನಿಮ್ಮ ವೆಚ್ಚ ಕಡಿಮೆ ಇದ್ದಷ್ಟೂ ನೀವು ಹೆಚ್ಚು ಸಾಲ ಮಾಡುವ ರಿಸ್ಕ್ ತೆಗೆದುಕೊಳ್ಳಬಹುದು. ಇದೆಲ್ಲವೂ ನಿಮ್ಮ ಸಾಲದ ಮಹತ್ವ ಮತ್ತು ನಿಮ್ಮ ಗುರಿ ಏನು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಇದನ್ನೂ ಓದಿ: ಅಡವಿಟ್ಟ ಚಿನ್ನ, ಲಾಕರ್ನಲ್ಲಿಟ್ಟ ಚಿನ್ನ ಕಳುವಾದರೆ ಏನಾಗುತ್ತದೆ? ಗ್ರಾಹಕರಿಗೆ ಏನು ಪರಿಹಾರ? ಇಲ್ಲಿದೆ ಡೀಟೇಲ್ಸ್
ಯಾರಿಗೆ ಬೇಕು ಸಾಲ?
ನೀವು ಸಾಲ ತೆಗೆದುಕೊಂಡರೆ ಅದರಿಂದ ನಿಮಗೆ ದೀರ್ಘಾವಧಿಯಲ್ಲಿ ಒಳ್ಳೆಯ ರಿಟರ್ನ್ ಬರುವಂತಿರಬೇಕು. ಉದಾಹರಣೆಗೆ, ಬ್ಯುಸಿನೆಸ್ ಮಾಡುತ್ತಿದ್ದರೆ ಆಗ ಸಾಲ ಪಡೆಯುವುದರಲ್ಲಿ ಅರ್ಥ ಇದೆ ಎನ್ನುತ್ತಾರೆ ತಜ್ಞರು. ಅಗತ್ಯವೇ ಇಲ್ಲದ ಐಷಾರಾಮಿ ವಸ್ತು ಖರೀದಿಸಲು ನೀವು ಸಾಲ ಮಾಡಿದರೆ ಅದು ಶೂಲಕ್ಕೆ ಸಿಲುಕಿದಂತಾಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




