ಬೆಂಗಳೂರು, ಜುಲೈ 18: ಖಾಸಗಿ ಕಂಪನಿಗಳಲ್ಲಿ ಕೆಲ ಸ್ತರದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪೂರ್ಣ ಮೀಸಲಾತಿ ಕೊಡುವ ಪ್ರಸ್ತಾಪಕ್ಕೆ ಹಲವು ಉದ್ಯಮಿಗಳ ಕಟು ವಿರೋಧ ವ್ಯಕ್ತವಾಗಿದೆ. ಈ ಸಾಲಿಗೆ ಫೋನ್ಪೆ ಸಂಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್ ಸೇರಿದ್ದಾರೆ. ನಿನ್ನೆ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಅವರು ರಾಜ್ಯ ಸರ್ಕಾರದ ನಡೆಯನ್ನು ಬಲವಾಗಿ ಟೀಕಿಸಿದ್ದಾರೆ. ತನ್ನ ಮಕ್ಕಳು ತಮ್ಮ ಸ್ವಂತ ಊರಿನಲ್ಲಿ ಕೆಲಸಕ್ಕೆ ಸೇರಲು ಅನರ್ಹರಾ ಎಂದು ಪ್ರಶ್ನಿಸಿದ ಅವರು ರಾಜ್ಯ ಸರ್ಕಾರ ರೂಪಿಸಿದ ಮಸೂದೆಯನ್ನು ನಾಚಿಕೆಗೇಡಿತನ ಎಂದು ಬಣ್ಣಿಸಿದ್ದಾರೆ.
‘ನನಗೆ 46 ವರ್ಷ ವಯಸ್ಸಾಗಿದೆ. ಯಾವುದೇ ರಾಜ್ಯದಲ್ಲಿ 15 ವರ್ಷಕ್ಕೂ ಹೆಚ್ಚು ಕಾಲ ವಾಸಿಸಿಲ್ಲ. ನನ್ನ ತಂದೆ ನೇವಿಯಲ್ಲಿ ಕೆಲಸ ಮಾಡಿದ್ದಾರೆ. ದೇಶಾದ್ಯಂತ ಅವರ ಪೋಸ್ಟಿಂಗ್ ಆಗಿದೆ. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗ ಗಳಿಸಲು ಅರ್ಹರಲ್ಲವಾ? ನಾನು ಕಂಪನಿಗಳನ್ನು ಸ್ಥಾಪಿಸಿದ್ದೇನೆ. ದೇಶಾದ್ಯಂತ 25,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿದ್ದೇನೆ. ನನ್ನ ಮಕ್ಕಳು ಅವರ ಸ್ವಂತ ನಗರದಲ್ಲಿ ಕೆಲಸ ಮಾಡಲು ಅನರ್ಹರಾ? ಇದು ನಾಚಿಕೆಗೇಡಿತನದ ಸಂಗತಿ,’ ಎಂದು ಸಮೀರ್ ನಿಗಮ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಯು ಟರ್ನ್ ಸರ್ಕಾರ ಎಂದು ಗುಡುಗಿದ ವಿಜಯೇಂದ್ರ
ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಖಾಸಗಿ ಕ್ಷೇತ್ರದಲ್ಲಿ ಸಿ ಮತ್ತು ಡಿ ದರ್ಜೆ ಉದ್ಯೋಗಗಳಿಗೆ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲಾತಿ ಕೊಡುವುದು ಸೇರಿದಂತೆ ವಿವಿಧ ಅಂಶಗಳಿರುವ ಮಸೂದೆಗೆ ಅಂಗೀಕಾರ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ ಕೂಡ ನಿನ್ನೆ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದರು. ಅದಾದ ಬಳಿಕ ಬೆಂಗಳೂರಿನ ಉದ್ಯಮ ವಲಯದಿಂದ ಕಟು ಟೀಕೆಗಳು ಕೇಳಿಬಂದವು. ಸಾಫ್ಟ್ವೇರ್ ಮತ್ತು ಸರ್ವಿಸ್ ಸೆಕ್ಟರ್ನ ಕಂಪನಿಗಳ ಸಂಘಟನೆಯಾದ ನಾಸ್ಕಾಮ್ ಕೂಡ ಟೀಕಿಸಿ, ಈ ಕ್ರಮದಿಂದ ಖಾಸಗಿ ಕಂಪನಿಗಳು ಕರ್ನಾಟಕದಿಂದ ಹೊರಗೆ ಹೋಗಬೇಕಾದೀತು ಎಂದು ಎಚ್ಚರಿಸಿತ್ತು.
ಉದ್ಯಮ ವಲಯದವರೊಂದಿಗೆ ಸಮಾಲೋಚನೆ ನಡೆಸಿ ಮುಂದುವರಿಯುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಆಶ್ವಾಸನೆ ನೀಡಿದರು. ಸಿದ್ದರಾಮಯ್ಯ ಮತ್ತೊಮ್ಮೆ ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಾಕಿ, ಮಸೂದೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದಿದ್ದಾರೆ.
‘ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಜಾರಿಗೆ ತರಲು ಉದ್ದೇಶಿಸಿದ್ದ ವಿಧೇಯಕವು ಇನ್ನೂ ಸಿದ್ಧತೆಯ ಹಂತದಲ್ಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕಂಪನಿಗಳು ಬಿಟ್ಟು ಹೋಗ್ತವೆ ಹುಷಾರ್..! ಕನ್ನಡಿಗರಿಗೆ ಮೀಸಲಾತಿ ಕೊಡುವ ಪ್ರಸ್ತಾವಕ್ಕೆ ನಾಸ್ಕಾಮ್ ಅಸಮಾಧಾನ
ಈ ಹಿಂದೆ ಹರ್ಯಾಣ ಮೊದಲಾದ ಕೆಲ ರಾಜ್ಯಗಳು ಇದೇ ರೀತಿಯಲ್ಲಿ ಸ್ಥಳೀಯರಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮೀಸಲಾತಿ ಕೊಡುವ ಪ್ರಯತ್ನ ಮಾಡಿದ್ದವು. ನ್ಯಾಯಾಲಯಗಳಲ್ಲಿ ಇವುಗಳಿಗೆ ಬೆಂಬಲ ಸಿಕ್ಕಿಲ್ಲ. ರಾಜ್ಯ ಸರ್ಕಾರ ಒಂದು ವೇಳೆ ವಿಧೇಯಕ ತಂದರೂ ಕೋರ್ಟ್ನಲ್ಲಿ ಅದು ರದ್ದುಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:44 am, Thu, 18 July 24