ಕಂಪನಿಗಳು ಬಿಟ್ಟು ಹೋಗ್ತವೆ ಹುಷಾರ್..! ಕನ್ನಡಿಗರಿಗೆ ಮೀಸಲಾತಿ ಕೊಡುವ ಪ್ರಸ್ತಾವಕ್ಕೆ ನಾಸ್ಕಾಮ್ ಅಸಮಾಧಾನ
Nasscom opposes Karnataka bill: ಖಾಸಗಿ ಕಂಪನಿಗಳ ಸಿ ಮತ್ತು ಡಿ ನೌಕರಿಗಳಿಗೆ ಪೂರ್ಣವಾಗಿ ಕನ್ನಡಿಗರನ್ನು ನೇಮಿಸಿಕೊಳ್ಳಬೇಕು ಎಂದು ನಿಯಮ ಹಾಕುವ ಕರ್ನಾಟಕ ಮಸೂದೆಗೆ ಬಹಳಷ್ಟು ವಿರೋಧ ವ್ಯಕ್ತವಾಗಿದೆ. ಕರ್ನಾಟಕ ಸರ್ಕಾರದ ಈ ನಡೆಯಿಂದ ರಾಜ್ಯ ಉದ್ಯಮ ವಲಯಕ್ಕೆ ಹಿನ್ನಡೆಯಾಗುತ್ತದೆ. ಕಂಪನಿಗಳು ಹೊರಗೆ ವಲಸೆ ಹೋಗಬಹುದು ಎಂದು ನಾಸ್ಕಾಮ್ ಹೇಳಿದೆ. ಸಾಫ್ಟ್ವೇರ್ ಮತ್ತು ಸರ್ವಿಸ್ ಸೆಕ್ಟರ್ ಕಂಪನಿಗಳ ಸಂಘಟನೆಯಾಗಿದೆ ಈ ನಾಸ್ಕಾಮ್.
ಬೆಂಗಳೂರು, ಜುಲೈ 17: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ನೂರಕ್ಕೆ ನೂರು ಮೀಸಲಾತಿ ಕೊಡಬೇಕೆಂಬ ಕರ್ನಾಟಕ ಸರ್ಕಾರದ ಮಸೂದೆ ಬಗ್ಗೆ ಉದ್ಯಮ ವಲಯ ತೀವ್ರ ಅಸಮಾಧಾನಗೊಂಡಿದೆ. ಕಿರಣ್ ಮಜುಮ್ದಾರ್, ಮೋಹನ್ ದಾಸ್ ಪೈ ಮೊದಲಾದ ಕೈಗಾರಿಕೋದ್ಯಮಿಗಳು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಉದ್ಯಮ ಸಂಘಟನೆಯಾದ ನಾಸ್ಕಾಮ್ ಕೂಡ ಕಳವಳ ವ್ಯಕ್ತಪಡಿಸಿದೆ. ಸಾಫ್ಟ್ವೇರ್ ಮತ್ತು ಸರ್ವಿಸ್ ಸೆಕ್ಟರ್ ಕಂಪನಿಗಳ ಸಂಘಟನೆಯಾದ ನಾಸ್ಕಾಮ್ ಕರ್ನಾಟಕ ಸರ್ಕಾರದ ಈ ನಿರ್ಧಾರವನ್ನು ಟೀಕಿಸಿದೆ. ರಾಜ್ಯ ಸರ್ಕಾರ ಮತ್ತು ಉದ್ಯಮ ಪ್ರತಿನಿಧಿಗಳ ಮಧ್ಯೆ ತುರ್ತಾಗಿ ಸಭೆ ನಡೆದು ಚರ್ಚೆಯಾಗಬೇಕು ಎಂದು ಆಗ್ರಹಿಸಿದೆ.
ಖಾಸಗಿ ಕಂಪನಿಗಳಲ್ಲಿ ಸಿ ಮತ್ತು ಡಿ ಮಟ್ಟದಲ್ಲಿ ಪೂರ್ಣವಾಗಿ ಕನ್ನಡಿಗರನ್ನು ನೇಮಿಸಿಕೊಳ್ಳಬೇಕು ಎಂಬಿತ್ಯಾದಿ ಅಂಶಗಳನ್ನು ಕರ್ನಾಟಕ ಮಸೂದೆಯಲ್ಲಿ ಒಳಗೊಳ್ಳಲಾಗಿದೆ. ಈ ಮಸೂದೆಗೆ ರಾಜ್ಯ ಸಂಪುಟದಿಂದ ಅಂಗೀಕಾರ ಕೂಡ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಈ ಮಸೂದೆ ಬಗ್ಗೆ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅದರ ಬೆನ್ನಲ್ಲೇ ವಿವಿಧ ಉದ್ಯಮಿಗಳಿಂದ ಕಟುವಾಗಿ ವಿರೋಧ ಬಂದಿದೆ. ನಂತರ ಮುಖ್ಯಮಂತ್ರಿಗಳು ಏಕಾಏಕಿ ಈ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು, ಈ ಕಾಯ್ದೆಯನ್ನು ಹಾಗೆಯೇ ಜಾರಿ ಮಾಡಲಾಗುವುದಿಲ್ಲ. ಎಲ್ಲರ ವಿಶ್ವಾಸ ತೆಗೆದುಕೊಂಡು ಮುಂದುವರಿಯುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾಸ್ಕಾಮ್ ಹೇಳಿದ್ದು ಇದು…
‘ಈ ರೀತಿಯ ಮಸೂದೆ ಕಳವಳಕಾರಿಯಾದುದು. ಇದು ಉದ್ಯಮದ ಬೆಳವಣಿಗೆಗೆ ಧಕ್ಕೆ ತರುತ್ತದೆ. ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯಕ್ಕೆ ಇರುವ ಜಾಗತಿಕ ಬ್ರ್ಯಾಂಡಿಂಗ್ಗೂ ಧಕ್ಕೆ ಆಗುತ್ತದೆ. ಈ ಮಸೂದೆಯಲ್ಲಿರುವ ಕಾನೂನುಗಳ ಬಗ್ಗೆ ನಾಸ್ಕಾಮ್ ಸದಸ್ಯರಿಗೆ ಆತಂಕ ಇದೆ. ಈ ಮಸೂದೆಯನ್ನು ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇವೆ,’ ಎಂದು ನಾಸ್ಕಾಮ್ ಎಕ್ಸ್ ಪೋಸ್ಟ್ನಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಟ್ವೀಟ್ ಡಿಲೀಟ್ ಮಾಡಿದ ಸಿಎಂ ಸಿದ್ದರಾಮಯ್ಯ, ಉದ್ಯಮಿಗಳ ವಿರೋಧಕ್ಕೆ ಮಣಿದ್ರಾ?
nasscom statement on Karnataka State Employment of Local Industries Factories Establishment Act Bill, 2024@debjani_ghosh_ @sangeetagupta29 @SrikanthNasscom @AA_speaks @NasscomPolicy @nasscomstartups @nasscomdeeptech @nasscom_member_ pic.twitter.com/9LDkRz7x2z
— nasscom (@nasscom) July 17, 2024
ಕಂಪನಿಗಳು ಬಿಟ್ಟು ಹೋಗ್ತವೆ…
ಕರ್ನಾಟಕ ರಾಜ್ಯ ಸಾಧಿಸಿರುವ ಬೆಳವಣಿಗೆ ಈಗ ಹಿಂದಕ್ಕೆ ಹೋಗುತ್ತದೆ. ಇಲ್ಲಿಂದ ಕಂಪನಿಗಳು ಹೊರಹೋಗಬಹುದು. ಸ್ಟಾರ್ಟಪ್ಗಳು ನಲುಗಬಹುದು. ಹೆಚ್ಚೆಚ್ಚು ಜಾಗತಿಕ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಲೋಚಿಸುತ್ತಿರುವ ಹೊತ್ತಲ್ಲೇ ಇದು ಆಗುತ್ತಿದೆ. ಸ್ಥಳೀಯ ಪ್ರತಿಭೆಗಳ ಲಭ್ಯತೆ ಕಡಿಮೆ ಇರುವುದರಿಂದ ಕಂಪನಿಗಳು ಸ್ಥಳಾಂತರಗೊಳ್ಳಬಹುದು ಎಂದು ನಾಸ್ಕಾಮ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Wed, 17 July 24