
ಭಾರತದ ರಕ್ಷಣಾ ಇಲಾಖೆಯ ಆರ್ ಅಂಡ್ ಡಿ ಅಂಗವಾಗಿರುವ ಡಿಆರ್ಡಿಒ (DRDO) ಐದು ವರ್ಷದಲ್ಲಿ ಭಾರತದ ವೆಚ್ಚವನ್ನು 2.64 ಲಕ್ಷ ಕೋಟಿ ರೂನಷ್ಟು ಉಳಿಸಿದೆ ಎನ್ನುವ ಒಂದು ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಸಂಸದೀಯ ಸಮಿತಿಯೊಂದು ಇತ್ತೀಚೆಗೆ ಈ ವಿಚಾರವನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ದೇಶೀಯವಾಗಿ ರೂಪಿತವಾಗುತ್ತಿರುವ ಅನೇಕ ಶಸ್ತ್ರಾಸ್ತ್ರ ತಂತ್ರಜ್ಞಾನ ಹಾಗೂ ಮಿಲಿಟರಿ ಉತ್ಪನ್ನಗಳಲ್ಲಿ ಡಿಆರ್ಡಿಒ ಹೆಸರು ಬಹುತೇಕ ಇದ್ದೇ ಇರುತ್ತದೆ. ಬಹಳ ಕ್ಷಮತೆ ಹಾಗೂ ಹೊಸತನಕ್ಕೆ ಉದಾಹರಣೆಯಾಗಿ ಡಿಆರ್ಡಿಒ ಇದೆ.
ಡಿಆರ್ಡಿಒ ಅಥವಾ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ ದೇಶೀಯವಾಗಿ ಮಿಲಿಟರಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಡಿಆರ್ಡಿಒ ಕಾರ್ಯಚಟುವಟಿಕೆ ತೀರಾ ಗರಿಗೆದರಿದೆ. ಈ ಹಿಂದೆ ಶಸ್ತ್ರಾಸ್ತ್ರ ತಯಾರಿಕೆಗೆ ಬೇಕಾದ ತಂತ್ರಜ್ಞಾನದ ಕೊರತೆ ಇತ್ತು. ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳದೇ ವಿಧಿ ಇರಲಿಲ್ಲ. ಆದರೆ, ಡಿಆರ್ಡಿಒ ಅನೇಕ ತಂತ್ರಜ್ಞಾನಗಳನ್ನು ತಾನೇ ಸ್ವಂತವಾಗಿ ಆವಿಷ್ಕರಿಸಿದೆ. ಇದರ ಪರಿಣಾಮವಾಗಿ ಇಂದು ಹಲವಾರು ಶಸ್ತ್ರಾಸ್ತ್ರಗಳು ಭಾರತದಲ್ಲೇ ತಯಾರಾಗುತ್ತಿವೆ. ಇದರಿಂದ ಭಾರತಕ್ಕೆ ಶಸ್ತ್ರಾಸ್ತ್ರ ಆಮದು ವೆಚ್ಚ ಗಣನೀಯವಾಗಿ ತಗ್ಗಿದೆ.
ಹತ್ತು ಹದಿನೈದು ವರ್ಷಗಳ ಹಿಂದೆ ಭಾರತವು ಶಸ್ತ್ರಾಸ್ತ್ರಗಳ ಆಮದು ಅತಿಹೆಚ್ಚು ಮಾಡುತ್ತಿತ್ತು. ಈಗ ವಿಶ್ವದ ಅತಿದೊಡ್ಡ ಮಿಲಿಟರಿ ರಫ್ತುದಾರ ದೇಶಗಳ ಸಾಲಿಗೆ ಸೇರ್ಪಡೆಯಾಗುತ್ತಿದೆ.
ಇದನ್ನೂ ಓದಿ: ನ್ಯೂಜಿಲೆಂಡ್ ಜೊತೆಗೂ ಟ್ರೇಡ್ ಡೀಲ್ ಮುಗಿಸಿದ ಭಾರತ; ಈ ವರ್ಷದಲ್ಲೇ ಭಾರತಕ್ಕಿದು 3ನೇ ಎಫ್ಟಿಎ
ಡಿಆರ್ಡಿಒ ಅಭಿವೃದ್ಧಿಪಡಿಸಿದ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳಿಗೆ ಲೆಕ್ಕ ಇಲ್ಲ. ತೇಜಸ್ ಎಲ್ಸಿಎ, ಅಗ್ನಿ ಕ್ಷಿಪಣಿ, ಪೃಥ್ವಿ ಕ್ಷಿಪಣಿ, ಬ್ರಹ್ಮೋಸ್ ಕ್ಷಿಪಣಿ, ಆಕಾಶ್, ಅಸ್ತ್ರ ಕ್ಷಿಪಣಿಗಳು, ಪಿನಾಕಾ ರಾಕೆಟ್, ಆ್ಯಂಟಿ ಟ್ಯಾಂಕ್ ಸಿಸ್ಟಂ, ಹೈಪರ್ಸಾನಿಕ್ ಕ್ಷಿಪಣಿ, ಹಲವು ರಾಡಾರ್ ಸಿಸ್ಟಂಗಳು, ಎಲೆಕ್ಟ್ರಾನಿಕ್ ವಾರ್ಫೇರ್ ಟೆಕ್ನಾಲಜಿಗಳ ಆವಿಷ್ಕಾರದಲ್ಲಿ ಡಿಆರ್ಡಿಒದ ರಿಸರ್ಚ್ನ ಪಾತ್ರ ಬಹಳಷ್ಟಿದೆ.
ಡಿಆರ್ಡಿಒ ಬಳಿ ಹಲವು ಇಂಟೆಲೆಕ್ಷುಯಲ್ ಪ್ರಾಪರ್ಟಿ ರೈಟ್, ಡೀಪ್ ಟೆಕ್ಗಳು ಇವೆ. ಡಿಆರ್ಡಿಒ ಸ್ಥಳೀಯವಾಗಿ ಎಂಎಸ್ಎಂಇಗಳಿಂದ ಬಿಡಿಭಾಗಗಳನ್ನು ತಯಾರಿಸಿಕೊಂಡು ತರಿಸಿಕೊಳ್ಳುತ್ತದೆ. ಹೀಗಾಗಿ, ಸ್ಥಿರವಾದ ಮತ್ತು ಸುಲಭವಾದ ಸಪ್ಪೈ ಚೈನ್ ವ್ಯವಸ್ಥೆ ಇದೆ. ಸಣ್ಣ ಉದ್ದಿಮೆಗಳಿಗೆ ಅದು ತರಬೇತಿಯನ್ನೂ ನೀಡುತ್ತದೆ. ತಾನು ಆವಿಷ್ಕರಿಸಿದ ತಂತ್ರಜ್ಞಾನವನ್ನು ವಿವಿಧ ಉದ್ದಿಮೆಗಳಿಗೆ ಕೊಟ್ಟು ಆ ಮೂಲಕ ಉತ್ಪನ್ನಗಳ ತಯಾರಿಕೆಯ ಪ್ರಮಾಣ ಹೆಚ್ಚಾಗುವಂತೆ ಮಾಡುತ್ತದೆ. ಉದ್ಯಮ ವಲಯವೂ ಬೆಳೆಯುತ್ತದೆ.
ಡಿಆರ್ಡಿಒದ ಈ ಕಾರ್ಯವೈಖರಿಯು ಕಾರ್ಪೊರೇಟ್ ಕ್ಷೇತ್ರಕ್ಕೆ ಮಾದರಿಯಾಗಬಹುದು. ಹೆಚ್ಚಿನ ಕಾರ್ಪೊರೇಟ್ ಕಂಪನಿಗಳು ಆರ್ ಅಂಡ್ ಡಿಗೆ ಒತ್ತು ಕೊಡುತ್ತಿಲ್ಲ. ಇದರಿಂದ ಟೆಕ್ನಾಲಜಿ ಆಮದು ವೆಚ್ಚ ಹೆಚ್ಚುತ್ತದೆ. ಕಂಪನಿಗಳ ಅಂತಿಮ ಲಾಭದ ಮಾರ್ಜಿನ್ ಕಡಿಮೆ ಆಗುತ್ತದೆ. ಈ ಕಂಪನಿಗಳು ರಿಸರ್ಚ್ಗೆ ಒಂದಷ್ಟು ವೆಚ್ಚ ಮಾಡಿದರೆ ಅದರಿಂದ ಉತ್ತಮ ತಂತ್ರಜ್ಞಾನ ಆವಿಷ್ಕರಿಸಿ ಜಾಗತಿಕವಾಗಿ ಪೈಪೋಟಿ ನಡೆಸಲು ಸಾಧ್ಯವಾಗುತ್ತದೆ ಎಂಬುದು ತಜ್ಞರ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ