ಕೊರೊನಾ ಮಹಾಮಾರಿ ಅದೆಷ್ಟೋ ಜೀವಗಳನ್ನು ಬಲಿಪಡೆದಿದೆ. ಇನ್ನೆಷ್ಟೋ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈಗ ತಾನೆ ವಿದ್ಯಾಭ್ಯಾಸ ಮುಗಿಸಿದ ಅಂತಿಮ ವರ್ಷದ ವಿದ್ಯಾರ್ಥಿಗಳು ಉದ್ಯೋಗವಿಲ್ಲದೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮುಂದೇನು ಮಾಡೋದು? ಉದ್ಯೋಗ ಎಲ್ಲಿ ಹುಡುಕುವುದು ಎಂಬೆಲ್ಲಾ ಯೋಚನೆಗಳಿಂದ ಚಿಂತೆಗೀಡಾಗಿದ್ದಾರೆ. ಸ್ವಂತ ಉದ್ಯೋಗ ಪ್ರಾರಂಭಿಸಲು ಹಣವಿಲ್ಲ, ಉದ್ಯೋಗಕ್ಕೆ ಸಾಕಷ್ಟು ಭೂಮಿಯಿಲ್ಲ ಎಂಬೆಲ್ಲಾ ಯೋಚನೆಗಳಿಂದ ಬೇಸರ ಪಡಬೇಡಿ. ನಿಮ್ಮ ಮನೆಯ ಮೇಲಿನ ಟೆರೆಸ್ ಖಾಲಿ ಜಾಗ ನಿಮಗೆ ಲಾಭ ತಂದುಕೊಡಬಹುದು.
ಹೋರ್ಡಿಂಗ್ ಇರಿಸಲು ಮನೆಯ ಟೆರೆಸ್ ಬಾಡಿಗೆಗೆ ಕೊಡಬಹುದು
ನೀವು ಹೂಡಿಕೆ ಮಾಡದೆಯೇ ಉತ್ತಮ ಲಾಭ ಗಳಿಸಬೇಕು ಎಂದು ಯೋಚಿಸಿದ್ದರೆ ನಿಮ್ಮ ಮನೆಯ ಟೆರೆಸ್ನ ಖಾಲಿ ಜಾಗವನ್ನು ಬಾಡಿಗೆಗೆ ನೀಡಬಹುದು. ನಿಮ್ಮ ಮನೆಯು ಮುಖ್ಯರಸ್ತೆಯಲ್ಲಿದ್ದರೆ, ದೊಡ್ಡ ಕಂಪನಿಗಳು ತಮ್ಮ ಬ್ರಾಂಡ್ ಪ್ರಚಾರಕ್ಕಾಗಿ ಜಾಹಿರಾತು ನೀಡಲು ಮನೆಯ ಟೆಸ್ನ ಖಾಲಿ ಜಾಗವನ್ನು ಬಳಸಿಕೊಳ್ಳುತ್ತಾರೆ. ಹೋರ್ಡಿಂಗ್ ಬೋರ್ಡ್ ಗಾತ್ರದ ಮೇರೆಗೆ ನಿಮಗೆ ಶುಲ್ಕ ನಿಗದಿಯಾಗಿರುತ್ತದೆ. ದೊಡ್ಡ ದೊಡ್ಡ ಕಂಪನಿಗಳಿಗೆ ಹೋರ್ಡಿಂಗ್ ಇರಿಸಲು ಜಾಗನೀಡಿದರೆ ಉತ್ತಮ ಲಾಭ ಗಳಿಸಿಕೊಳ್ಳಬಹುದಾಗಿದೆ. ಹಾಗಾಗಿ ಉತ್ತಮ ಏಜೆನ್ಸಿ ಕಂಪನಿಗಳನ್ನು ಸಂಪರ್ಕಿಸಿ.
ಮೊಬೈಲ್ ಟವರ್ನಿಂದ ಗಳಿಕೆ ದ್ವಿಗುಣ
ನಿಮ್ಮ ಮನೆಯ ಟೆರೆಸ್ ಖಾಲಿ ಇದ್ದರೆ ಅದನ್ನು ಮೊಬೈಲ್ ಕಂಪನಿಗಳಿಗೆ ಬಾಡಿಗೆ ಕೊಡಬಹುದು. ಕಂಪನಿಗಳು ಮೊಬೈಲ್ ಟವರ್ಗಳನ್ನು ಟೆರೆಸ್ಮೇಲೆ ನಿರ್ಮಿಸುವ ಮೂಲಕ ನಿಮಗೆ ಉತ್ತಮ ಲಾಭ ಸಿಗುತ್ತದೆ. ಫೋನ್ ಕರೆಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಮೊಬೈಲ್ ಕಂಪನಿಗಳು ಹೆಚ್ಚು ಟವರ್ಗಳನ್ನು ನಿರ್ಮಿಸುತ್ತಿವೆ. ಆದರೆ, ಟವರ್ ಇರಿಸಲು ನೀವು ನೆರೆಹೊರೆಯವರಿಂದ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ. ಮತ್ತು ಸ್ಥಳೀಯ ಪುರಸಭೆಗಳಿಂದ ಪರವಾನಿಗೆ ಪತ್ರವಿದ್ದಲ್ಲಿ ಮೊಬೈಲ್ ಕಂಪನಿಗಳಿಗೆ ಟವರ್ ಇರಿಸಲು ನಿಮ್ಮ ಮನೆಯ ಖಾಲಿ ಟೆರೆಸ್ಅನ್ನು ಬಾಡಿಗೆ ನೀಡಬಹುದು.
ಟೆರೆಸ್ ಫಾರ್ಮಿಂಗ್ ಮೂಲಕ ಲಾಭಗಳಿಸಿ
ಕೃಷಿಗೆ ಭಾರತದಲ್ಲಿ ಪ್ರಮುಖ ಸ್ಥಾನವಿದೆ. ಟೆರೆಸ್ ಖಾಲಿ ಇದ್ದರೆ ಹಸಿರು ಮನೆ ನಿರ್ಮಿಸಬಹುದು. ವಿವಿಧ ತರಕಾರಿಗಳನ್ನು ಬೆಳೆಸಬಹುದು. ತರಕಾರಿ ಮಾರಾಟದ ಮೂಲಕ ಒಳ್ಳೆಯ ಲಾಭ ನಿಮ್ಮದಾಗುತ್ತದೆ. ಉತ್ತಮ ಮಣ್ಣು, ಸಾವಯುವ ಗೊಬ್ಬರ ಬಳಸಿ ಲಾಭ ತರುವ ತರಕಾರಿಗಳನ್ನು ಬೆಳೆದು ಮಾರಾಟ ಮಾಡಬಹುದು. ಸಾವಯವ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯೂ ಇದೆ.
ಸೋಲಾರ್ನಿಂದ ವಿದ್ಯುತ್ ಮಾರಾಟ ಮಾಡಿ
ನಿಮ್ಮ ಮನೆಯ ಟೆರೆಸ್ ಮೇಲೆ ಖಾಲಿ ಜಾಗವಿದ್ದರೆ, ಸೋಲಾರ್ ನಿರ್ಮಿಸಿ. ಇದರಿಂದ ನಿಮ್ಮ ಮನೆಯ ವಿದ್ಯುತ್ ಬಿಲ್ಅನ್ನು ಉಳಿಸಬಹುದು. ಜೊತೆಗೆ ಹೆಚ್ಚುವರಿ ವಿದ್ಯುತ್ ಮಾರಾಟ ಕೂಡಾ ಮಾಡಬಹುದು. ಆದರೆ ವಿದ್ಯುತ್ಚ್ಛಕ್ತಿ ನಿಗಮದಿಂದ ಪರವಾನಿಗೆ ಪಡೆದುಕೊಳ್ಳಬೇಕಾಗುತ್ತದೆ. ಇದರಿಂದ ನೀವು ಎಷ್ಟು ವಿದ್ಯುತ್ ಮಾರಾಟ ಮಾಡಿದ್ದೀರೀ ಎಂಬುದರ ಮಾಹಿತಿ ಪಡೆಯಬಹುದು.
ಇದನ್ನೂ ಓದಿ: ನಿಮ್ಮ ಮನೆಯಲ್ಲಿಯೇ ತುರ್ತು ನಿಗಾ ಘಟಕ ಅಂದ್ರೆ ICU ಸ್ಥಾಪಿಸಿಕೊಳ್ಳುವುದು ಹೇಗೆ? ಅದರ ಪಾಲನೆ ಹೇಗೆ?