ನವದೆಹಲಿ: ಮಾಜಿ ನ್ಯಾಯಾಧೀಶರೊಬ್ಬರ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಜೋಡಿತವಾಗಿರುವ ಅಕ್ರಮ ಹಣ ವರ್ಗಾವಣೆ (Money Laundering) ಆರೋಪ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂ3ಎಂ (M3M Group) ಸಂಸ್ಥೆಯ ಇಬ್ಬರು ನಿರ್ದೇಶಕರನ್ನು ಬಂಧಿಸಿದ್ದಾರೆ. ಬಸಂತ್ ಬನ್ಸಾಲ್ ಮತ್ತು ಪಂಕಜ್ ಬನ್ಸಾಲ್ ಬಂಧಿತರಾಗಿರುವ ಇಬ್ಬರು ವ್ಯಕ್ತಿಗಳು. ಇದೇ ಎಂ3ಎಂ ಸಂಸ್ಥೆಯ ಮತ್ತೊಬ್ಬ ಡೈರೆಕ್ಟರ್ ಆಗಿರುವ ರೂಪ್ ಕುಮಾರ್ ಬನ್ಸಾಲ್ ಅವರನ್ನು ಮತ್ತೊಂದು ಪ್ರಕರಣದಲ್ಲಿ ಜೂನ್ 1ರಂದು ಬಂಧಿಸಲಾಗಿತ್ತು. ಜೂನ್ 14ರಂದು ಅಕ್ರಮ ಹಣ ವರ್ಗಾವಣೆ ಕಾಯ್ದೆ (PMLA) ಅಡಿಯಲ್ಲಿ ಇಡಿ ಅಧಿಕಾರಿಗಳು ಪಂಕಜ್ ಬನ್ಸಾಲ್ ಮತ್ತು ಬಸಂತ್ ಬನ್ಸಾಲ್ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಹರ್ಯಾಣ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಏಪ್ರಿಲ್ನಲ್ಲಿ ವಿಶೇಷ ಕೋರ್ಟ್ ನ್ಯಾಯಾಧೀಶರು ಹಾಗೂ ಎಂ3ಎಂ ಸಂಸ್ಥೆಯ ಪ್ರೊಮೋಟರ್ಗಳ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಎಂ3ಎಂ ಗ್ರೂಪ್ನ ನಿರ್ದೇಶಕರುಗಳು ಹಾಗೂ ಐರಿಯೋ (IREO) ಎಂಬ ರಿಯಲ್ ಎಸ್ಟೇಟ್ ಗ್ರೂಪ್ ಸಂಸ್ಥೆ ವಿರುದ್ಧ ಇಡಿ ಮತ್ತು ಸಿಬಿಐ ಪ್ರಕರಣಗಳಲ್ಲಿ ಈ ನ್ಯಾಯಾಧೀಶರು ಅಪ್ರಾಮಾಣಿಕತೆ ತೋರುತ್ತಿರುವ ಆರೋಪ ಇದೆ. ಈ ನ್ಯಾಯಾಧೀಶರು ಮತ್ತು ಎಂ3ಎಂ ಗ್ರೂಪ್ನ ನಿರ್ದೇಶಕರುಗಳು ಸಂಬಂಧಿಗಳೇ ಆಗಿರುವುದರಿಂದ ಜಡ್ಜ್ ತಮ್ಮ ತೀರ್ಪಿನಲ್ಲಿ ತಾರತಮ್ಯತೆ ತೋರುತ್ತಿದ್ದಾರೆ ಎಂದು ಹರ್ಯಾಣದ ಎಸಿಬಿ ತಾನು ದಾಖಲಿಸಿದ ಎಫ್ಐಆರ್ನಲ್ಲಿ ಆರೋಪಿಸಿದೆ.
ಇದನ್ನೂ ಓದಿ: Indian Riches: ಈ ವರ್ಷ ಭಾರತದಿಂದ ಹೊರಬೀಳುತ್ತಿದ್ದಾರೆ 6,500 ಕೋಟ್ಯಾಧಿಪತಿಗಳು; ಇವರು ಹೋಗುತ್ತಿರುವುದಾದರೂ ಯಾವ ದೇಶಗಳತ್ತ?
ಇದಾದ ಬೆನ್ನಲ್ಲೇ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆ ವಿಶೇಷ ಜಡ್ಜ್ ಅನ್ನು ಅಮಾನತುಗೊಳಿಸಿದೆ. ಜೂನ್ 1ರಂದು ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ3ಎಂನ ಪ್ರೊಮೋಟರ್ಗಳ ಹಾಗು ಇತರರ ಮೇಲೆ ಇಡಿ ರೇಡ್ ಮಾಡಿತ್ತು. ಇದು ಐರಿಯೋ ಗ್ರೂಪ್ ಮತ್ತು ಅದರ ಪ್ರೊಮೋಟರ್ ಲಲಿತ್ ಗೋಯಲ್ ಅವರಿಗೆ ಜೋಡಿತವಾಗಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿತ್ತು. ಜೂನ್ 1ರಂದು ಇಡಿ ನಡೆಸಿದ ರೇಡ್ನಲ್ಲಿ ಎಂ3ಎಂನ ಪ್ರೊಮೋಟರ್ ಮತ್ತು ಡೈರೆಕ್ಟರ್ ಆದ ರೂಪ್ ಕುಮಾರ್ ಬನ್ಸಾಲ್ ಅವರನ್ನು ಬಂಧಿಸಿತ್ತು. ಆದರೆ, ಇತರ ಇಬ್ಬರು ನಿರ್ದೇಶಕರಾದ ಬಸಂತ್ ಮತ್ತು ಪಂಜಕ್ ಬನ್ಸಾಲ್ ಅವರು ಈ ಪ್ರಕರಣದಲ್ಲಿ ಜುಲೈ 5ರವರೆಗೆ ಬಂಧನದಿಂದ ತಾತ್ಕಾಲಿಕ ರಕ್ಷಣೆ ಪಡೆದಿದ್ದರಿಂದ ಅವರನ್ನು ಕಸ್ಟಡಿಗೆ ತೆಗೆದುಕೊಂಡಿರಲಿಲ್ಲ.
ಈಗ ಎಸಿಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸಂತ್ ಬನ್ಸಾಲ್ ಮತ್ತು ಪಂಜಕ್ ಬನ್ಸಾಲ್ ಅವರನ್ನೂ ಇಡಿ ಅಧಿಕಾರಿಗಳು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಜೂನ್ 1ರಂದು ಎಂ3ಎಂ ಪ್ರೊಮೋಟರ್ಗಳ ಮೇಲೆ ನಡೆದ ಇಡಿ ದಾಳಿಯಲ್ಲಿ ಹಲವು ಮಹತ್ವದ ದಾಖಲೆಗಳು ಸಿಕ್ಕಿದ್ದು ವರದಿಯಾಗಿದೆ. ಐರಿಯೋ ಗ್ರೂಪ್ನ ವಿರುದ್ಧದ ಪ್ರಕರಣದಲ್ಲಿ ಎಂ3ಎಂ ಗ್ರೂಪ್ ಮೂಲಕ ನೂರಾರು ಕೋಟಿ ರೂ ಮೊತ್ತದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದು ಕಂಡು ಬಂದಿದೆ. ಹಲವು ವಹಿವಾಟುಗಳ ಪೈಕಿ ಒಂದರಲ್ಲಿ ಐರಿಯೋ ಗ್ರೂಪ್ನಿಂದ ವಿವಿಧ ಸ್ತರಗಳಲ್ಲಿ ಹಲವು ಶೆಲ್ ಕಂಪನಿಗಳ ಮೂಲಕ ಎಂ3ಎಂ 400 ಕೋಟಿ ರೂ ಪಡೆದಿತ್ತು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ಆದರೆ, ಅಮಾನತುಗೊಂಡಿರುವ ಮಾಜಿ ನ್ಯಾಯಾಧೀಶರಾಗಲೀ, ಎಂ3ಎಂ ಪ್ರೊಮೋಟರ್ಗಳಾಗಲೀ ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:35 am, Thu, 15 June 23