Elon Musk: ಟ್ವಿಟರ್​ಗೆ ಹೊಸ ಸಿಇಒ ಹುಡುಕಾಟದಲ್ಲಿದ್ದಾರೆ ಎಲಾನ್​ ಮಸ್ಕ್

Twitter ಟೆಸ್ಲಾ ಮತ್ತು ಸ್ಪೇಸ್​ಎಕ್ಸ್ ಸಿಇಒ ಕೂಡ ಆಗಿರುವ ಮಸ್ಕ್, ಟ್ವಿಟರ್​ ಹುದ್ದೆಯಿಂದ ಕೆಳಗಿಳಿಯುವ ಯೋಚನೆ ಹೊಂದಿರುವುದಾಗಿ ಮಂಗಳವಾರ ರಾತ್ರಿ ಟ್ವೀಟ್ ಮೂಲಕ ತಿಳಿಸಿದ್ದರು.

Elon Musk: ಟ್ವಿಟರ್​ಗೆ ಹೊಸ ಸಿಇಒ ಹುಡುಕಾಟದಲ್ಲಿದ್ದಾರೆ ಎಲಾನ್​ ಮಸ್ಕ್
ಎಲಾನ್ ಮಸ್ಕ್​
Updated By: Ganapathi Sharma

Updated on: Dec 21, 2022 | 10:43 AM

ನವದೆಹಲಿ: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್​ಗೆ (Twitter) ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ನೇಮಕ ಮಾಡಲು ಎಲಾನ್ ಮಸ್ಕ್ (Elon Musk) ಉದ್ದೇಶಿಸಿದ್ದು, ಹುಡುಕಾಟದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಸ್ಕ್ ಅವರು 44 ಶತಕೋಟಿ ಡಾಲರ್​ಗೆ ಟ್ವಿಟರ್​​ ಅನ್ನು ಅಕ್ಟೋಬರ್​​ನಲ್ಲಿ ಖರೀದಿಸಿದ್ದರು. ತಾವು ಸದ್ಯಕ್ಕಷ್ಟೇ ಸಿಇಒ ಆಗಿರುವುದಾಗಿಯೂ ಅವರು ಹೇಳಿದ್ದರು. ಟ್ವಿಟರ್​ನಲ್ಲಿ ನನ್ನ ಸಮಯವನ್ನು ಕಡಿಮೆ ಮಾಡಬೇಕಿದೆ. ಟ್ವಿಟರ್​ನ ಜವಾಬ್ದಾರಿಯನ್ನು ಯಾರಿಗಾದರೂ ವಹಿಸಬೇಕಿದೆ ಎಂದು ನವೆಂಬರ್​​ನಲ್ಲಿ ಮಸ್ಕ್ ಹೇಳಿದ್ದರು. ಇದೀಗ ಅವರು ಅಧಿಕೃತವಾಗಿ ಹೊಸ ಸಿಇಒ ಹುಡುಕಾಟದಲ್ಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಸಿಎನ್​ಬಿಸಿ’ ವರದಿ ಮಾಡಿದೆ.

ಟೆಸ್ಲಾ ಮತ್ತು ಸ್ಪೇಸ್​ಎಕ್ಸ್ ಸಿಇಒ ಕೂಡ ಆಗಿರುವ ಮಸ್ಕ್, ಟ್ವಿಟರ್​ ಹುದ್ದೆಯಿಂದ ಕೆಳಗಿಳಿಯುವ ಯೋಚನೆ ಹೊಂದಿರುವುದಾಗಿ ಮಂಗಳವಾರ ರಾತ್ರಿ ಟ್ವೀಟ್ ಮೂಲಕ ತಿಳಿಸಿದ್ದರು. ಟ್ವಿಟರ್​ ಸಿಇಒ ಸ್ಥಾನಕ್ಕೆ ಬೇರೊಬ್ಬರು ಸಿಕ್ಕಿದ ಕೂಡಲೇ ಸದ್ಯದಲ್ಲೇ ರಾಜೀನಾಮೆ ನೀಡಲಿದ್ದೇನೆ. ಆ ನಂತರ ಸಾಫ್ಟ್​ವೇರ್ ಹಾಗೂ ಸರ್ವರ್​​ ತಂಡಗಳನ್ನಷ್ಟೇ ನೋಡಿಕೊಳ್ಳಲಿದ್ದೇನೆ ಎಂದು ಅವರು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ: ಎಲಾನ್ ಮಸ್ಕ್ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕಂದ ಶೇ. 57ರಷ್ಟು ಜನ, ಈ ಟ್ವಿಟ್ಟರ್ ಸಮೀಕ್ಷೆಯ ಒಳ ಮರ್ಮವೇನು?


ಟ್ವಿಟರ್ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕಾ? ಈ ಸಮೀಕ್ಷೆಯ ಫಲಿತಾಂಶಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಮಸ್ಕ್ ಅವರು ಟ್ವಿಟರ್​​ನಲ್ಲಿ ಇತ್ತೀಚೆಗೆ ಪೋಲ್ ಕ್ರಿಯೇಟ್ ಮಾಡಿದ್ದರು. ಮಸ್ಕ್ ಪ್ರಶ್ನೆಗೆ ಹೌದು ಎಂದು ಶೇಕಡಾ 57.5ರಷ್ಟು ಮಂದಿ ಉತ್ತರಿಸಿದ್ದರೆ, ಶೇಕಡಾ 42.5ರಷ್ಟು ಮಂದಿ ಸ್ಥಾನದಲ್ಲಿ ಮುಂದುವರಿಯುವಂತೆ ಉತ್ತರಿಸಿದ್ದಾರೆ. ಹೆಚ್ಚು ಮಂದಿ ಸ್ಥಾನದಿಂದ ಕೆಳಗಿಳಿಯುವುದು ಸೂಕ್ತ ಎಂದಿರುವುದರಿಂದ ಮಸ್ಕ್ ಸಿಇಒ ಸ್ಥಾನ ತ್ಯಜಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಮೊದಲೇ ಬೇರೆ ಸಿಇಒ ಹುಡುಕಾಟ ಆರಂಭಿಸಿದ್ದ ಎಲಾನ್ ಮಸ್ಕ್

ಟ್ವಿಟರ್​ ಪೋಲ್ ಕ್ರಿಯೇಟ್ ಮಾಡುವುದಕ್ಕೂ ಮುನ್ನವೇ ಮಸ್ಕ್ ಅವರು ಬೇರೆ ಸಿಇಒ ಹುಡುಕಾಟ ಆರಂಭಿಸಿದ್ದರು ಎಂದು ಮೂಲಗಳು ಹೇಳಿವೆ. ಒಂದು ವೇಳೆ ಹೊಸ ಸಿಇಒ ನೇಮಕವಾದರೂ ಟ್ವಿಟರ್ ಮಾಲೀಕತ್ವ ಮಸ್ಕ್ ಬಳಿಯೇ ಇರಲಿದೆ. ಮಸ್ಕ್ ಅವರು ಟ್ವಿಟರ್ ಖರೀದಿಸಿದ ಬಳಿಕ ವಿಶ್ವಮಟ್ಟದಲ್ಲಿ ಹಲವು ಬಾರಿ ಸುದ್ದಿಗೆ ಗ್ರಾಸವಾಗಿದ್ದಾರೆ. ಟ್ವಿಟರ್ ಖರೀದಿಸಿದ ಕೂಡಲೇ ಸಿಇಒ ಪರಾಗ್ ಅಗರ್​ವಾಲ್ ಸೇರಿದಂತೆ ಪ್ರಮುಖ ಹುದ್ದೆಯಲ್ಲಿದ್ದ ಅನೇಕರನ್ನು ವಜಾಗೊಳಿಸಿದ್ದರು. ಬಳಿಕ ಸುಮಾರು 3,500ಕ್ಕೂ ಹೆಚ್ಚು ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದ್ದರು. ನಂತರ ಟ್ವಿಟರ್​ ಸಿಇಒ ಸ್ಥಾನದಲ್ಲಿ ಮುಂದುವರಿಯಬೇಕೇ ಅಥವಾ ಬೇಡವೇ ಎಂದು ಪೋಲ್ ಕ್ರಿಯೇಟ್ ಮಾಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ