New Twitter Policy: ದ್ವೇಷ ಹರಡುವ ಸಂದೇಶಗಳಿಗೆ ಕಡಿವಾಣ; ಹೊಸ ಟ್ವಿಟರ್ ನೀತಿಯ ವಿವರ ಇಲ್ಲಿದೆ

| Updated By: Ganapathi Sharma

Updated on: Nov 19, 2022 | 12:17 PM

New Twitter Policy; ಕಂಪನಿಯ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿರುವ ಬೆಳವಣಿಗೆಗಳ ಮಧ್ಯೆಯೇ ಹೊಸ ನೀತಿ, ನಿಯಮಗಳನ್ನು ಮಸ್ಕ್ ಪ್ರಕಟಿಸಿದ್ದಾರೆ.

New Twitter Policy: ದ್ವೇಷ ಹರಡುವ ಸಂದೇಶಗಳಿಗೆ ಕಡಿವಾಣ; ಹೊಸ ಟ್ವಿಟರ್ ನೀತಿಯ ವಿವರ ಇಲ್ಲಿದೆ
ಎಲಾನ್ ಮಸ್ಕ್ ಮತ್ತು ಟ್ವಿಟರ್ ಲೋಗೊ
Follow us on

ನವದೆಹಲಿ: ನಕಾರಾತ್ಮಕ ಹಾಗೂ ದ್ವೇಷ ಹರಡುವ ಸಂದೇಶಗಳಿಗೆ ಟ್ವಿಟರ್ (Twitter) ಅವಕಾಶ ನೀಡುವುದಿಲ್ಲ ಎಂದು ಮೈಕ್ರೊಬ್ಲಾಗಿಂಗ್ ತಾಣದ ನೂತನ ಮಾಲೀಕ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ. ಟ್ವಿಟರ್​ನ ಇತ್ತೀಚಿನ ನೀತಿ, ನಿಯಮಗಳ ಬಗ್ಗೆ ಅವರು ಸರಣಿ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ. ಹೊಸ ಟ್ವಿಟರ್ ನೀತಿ ‘ಫ್ರೀಡಂ ಆಫ್ ಸ್ಪೀಚ್​​ಗೆ ಸಂಬಂಧಿಸಿದ್ದೇ ವಿನಃ ಫ್ರೀಡಂ ಆಫ್​ ರೀಚ್​ನದ್ದಲ್ಲ’ ಎಂದು ಅವರು ಹೇಳಿದ್ದಾರೆ. ಕಂಪನಿಯ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿರುವ ಬೆಳವಣಿಗೆಗಳ ಮಧ್ಯೆಯೇ ಹೊಸ ನೀತಿ, ನಿಯಮಗಳನ್ನು ಮಸ್ಕ್ ಪ್ರಕಟಿಸಿದ್ದಾರೆ. ಕಂಪನಿಯ ಕಠಿಣ ಕೆಲಸದ ನೀತಿಯನ್ನು ಧಿಕ್ಕರಿಸಿ ನೂರಾರು ಉದ್ಯೋಗಿಗಳು ಕಳೆದ ಕೆಲವು ದಿನಗಳಲ್ಲಿ ರಾಜೀನಾಮೆ ನೀಡಿದ್ದಾರೆ.

ನಕಾರಾತ್ಮಕ ಹಾಗೂ ದ್ವೇಷದ ಸಂದೇಶ ಹೊಂದಿರುವ ಟ್ವೀಟ್​ಗಳನ್ನು ಗರಿಷ್ಠ ಮಟ್ಟದಲ್ಲಿ ಡಿಬೂಸ್ಟ್ ಹಾಗೂ ಡಿಮಾನಿಟೈಸ್ ಮಾಡಲಾಗುವುದು. ಆದ್ದರಿಂದ ಟ್ವಿಟರ್​ಗೆ ಯಾವುದೇ ಜಾಹೀರಾತು ಅಥವಾ ಆದಾಯ ಇರುವುದಿಲ್ಲ. ನೀವು ನಿರ್ದಿಷ್ಟವಾಗಿ ಹುಡುಕಿ ನೋಡದ ಹೊರತು ಅಂಥ ಟ್ವೀಟ್​ಗಳು ಕಾಣಿಸಲಾರವು. ಇದು ಆಯಾ ಟ್ವೀಟ್​ಗೆ ಅನ್ವಯಿಸುತ್ತದೆಯೇ ವಿನಃ ಇಡೀ ಟ್ವಿಟರ್ ಖಾತೆಗೆ ಅಲ್ಲ ಎಂದು ಮಸ್ಕ್ ತಿಳಿಸಿದ್ದಾರೆ.


ಅಮೆರಿಕದ ಹಾಸ್ಯನಟ ಕ್ಯಾಥಿ ಗ್ರಿಫಿನ್ ಮತ್ತು ಶಿಕ್ಷಣ ತಜ್ಞ ಜೋರ್ಡಾನ್ ಪೀಟರ್ಸನ್ ಮತ್ತು ಸಂಪ್ರದಾಯವಾದಿ ಬ್ಯಾಬಿಲೋನ್ ಬೀ ಅವರ ಖಾತೆಗಳನ್ನು ಕಂಪನಿಯು ಮರುಸ್ಥಾಪಿಸಿದೆ. ಆದರೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಇನ್ನೂ ಮರುಸ್ಥಾಪಿಸಿಲ್ಲ ಎಂದು ಮಸ್ಕ್ ತಿಳಿಸಿದ್ದಾರೆ.

ಟ್ವಿಟರ್​ನಲ್ಲಿ ಸಾಮೂಹಿಕ ರಾಜೀನಾಮೆ

ಎಲಾನ್ ಮಸ್ಕ್ ಅವರು ಮಾಲೀಕತ್ವ ವಹಿಸಿದ ಬೆನ್ನಲ್ಲೇ ಟ್ವಿಟರ್​​ನಿಂದ ಸುಮಾರು 3,500 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು. ಆ ಬಳಿಕ ಉದ್ಯೋಗದ ನಿಯಮಗಳಲ್ಲಿ ಕಠಿಣ ಬದಲಾವಣೆಗಳನ್ನು ಮಾಡಲಾಗಿತ್ತು. ಇದರ ಬೆನ್ನಲ್ಲೇ ನೂರಾರು ಟ್ವಿಟ್ಟರ್​ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆ ಎಲ್ಲೆಡೆ ಟ್ವಿಟ್ಟರ್ ಕಚೇರಿಗಳನ್ನು ಮುಚ್ಚಲಾಗುತ್ತಿದೆ. ಒಂದು ವಾರದ ಮಟ್ಟಿಗೆ ಎಲ್ಲ ಕಚೇರಿಗಳನ್ನು ಮುಚ್ಚುವುದಾಗಿ ಕೆಲವು ದಿನಗಳ ಹಿಂದೆ ಟ್ವಿಟರ್ ಘೋಷಿಸಿತ್ತು. #GoodByeTwitter, #RIPTwitter, #TwitterDown ಹ್ಯಾಶ್​ಟ್ಯಾಗ್​ಗಳು ಟ್ವಿಟರ್​​ನಲ್ಲಿ ಶುಕ್ರವಾರ ಟ್ರೆಂಡ್ ಆಗಿದ್ದವು. ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ದಿನಕ್ಕೆ ಕನಿಷ್ಠ 12 ಗಂಟೆ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ನಿರ್ದೇಶನ ನೀಡಿದ್ದಾರೆ. ಕಠಿಣವಾಗಿ ಕೆಲಸ ಮಾಡುವುದಿದ್ದರೆ ಇರಿ ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂಬ ಆಯ್ಕೆಯನ್ನು ಉದ್ಯೋಗಿಗಳ ಮುಂದಿಟ್ಟಿದ್ದರು ಎಂದು ವರದಿಯಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:15 pm, Sat, 19 November 22