Gautam Adani; ಉದ್ಯಮಶೀಲತೆಯಲ್ಲಿ ಮುಂಚೂಣಿಗೆ ಬರಲಿದೆ ಭಾರತ; ಗೌತಮ್ ಅದಾನಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಉಪಕ್ರಮಗಳನ್ನು ಅದಾನಿ ಶ್ಲಾಘಿಸಿದ್ದಾರೆ. ಇದರಿಂದಾಗಿ ಭಾರತದ ಆರ್ಥಿಕತೆ ಬೆಳವಣಿಗೆ ಹೊಂದಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Gautam Adani; ಉದ್ಯಮಶೀಲತೆಯಲ್ಲಿ ಮುಂಚೂಣಿಗೆ ಬರಲಿದೆ ಭಾರತ; ಗೌತಮ್ ಅದಾನಿ
ಗೌತಮ್ ಅದಾನಿ (ಸಂಗ್ರಹ ಚಿತ್ರ)Image Credit source: PTI
Follow us
TV9 Web
| Updated By: Ganapathi Sharma

Updated on:Nov 19, 2022 | 3:00 PM

ಮುಂಬೈ: ಮುಂದಿನ ಮೂರು ದಶಕಗಳಲ್ಲಿ ಉದ್ಯಮಶೀಲತೆಯಲ್ಲಿ ಭಾರತ (India) ಮುಂಚೂಣಿಗೆ ಬರಲಿದೆ. 2030ರ ವೇಳೆಗೆ ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಅದಾನಿ ಸಮೂಹ(Adani Group) ಸ್ಥಾಪಕ ಹಾಗೂ ಅಧ್ಯಕ್ಷ ಗೌತಮ್ ಅದಾನಿ (Gautam Adani) ಹೇಳಿದ್ದಾರೆ. 2050ರ ವೇಳೆಗೆ ದೇಶವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿ ಗುರುತಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಮುಂಬೈಯಲ್ಲಿ ನಡೆದ ‘ವರ್ಲ್ಡ್ ಕಾಂಗ್ರೆಸ್ ಆಫ್ ಅಕೌಂಟೆಂಟ್ಸ್ 2022’ ಸಮಾವೇಶದಲ್ಲಿ ‘ಆರ್ಥಿಕ ಮಹಾಶಕ್ತಿಯಾಗಿ ಹೊರಹೊಮ್ಮುವಲ್ಲಿ ಭಾರತದ ಹಾದಿ’ ಎಂಬ ವಿಷಯದ ಕುರಿತು ಅವರು ವಿಚಾರ ಮಂಡಿಸಿದ್ದಾರೆ.

2021ರಲ್ಲಿ ಭಾರತದ ಯುನಿಕಾರ್ನ್ ಕಂಪನಿಗಳು ವಿಶ್ವದಲ್ಲೇ ಅತಿವೇಗದ ಬೆಳವಣಿಗೆ ದಾಖಲಿಸಿದ್ದವು. 2021ರಲ್ಲಿ ಭಾರತವು ಜಾಗತಿಕವಾಗಿ ನೈಜ-ಸಮಯದ ವಹಿವಾಟುಗಳನ್ನು ಕಾರ್ಯಗತಗೊಳಿಸಿದೆ. ಇದು ಅಮೆರಿಕ, ಫ್ರಾನ್ಸ್, ಕೆನಡಾ ಹಾಗೂ ಜರ್ಮನಿಯ ಒಟ್ಟು ವಹಿವಾಟಿಗಿಂತಲೂ ದೊಡ್ಡ ಪ್ರಮಾಣದ್ದಾಗಿದೆ. ಇವೆಲ್ಲ ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Gautam Adani: ಹೆಚ್ಚುತ್ತಿರುವ ಸಂಪತ್ತು ನಿರ್ವಹಣೆಗೆ ವಿದೇಶದಲ್ಲಿ ಕಚೇರಿ ತೆರೆಯಲಿದ್ದಾರೆ ಗೌತಮ್ ಅದಾನಿ

‘ಅನೇಕ ಸಂಖ್ಯೆಯ ಸ್ಟಾರ್ಟಪ್​ಗಳು ಭಾರತಕ್ಕೆ ವೆಂಚರ್ ಕ್ಯಾಪಿಟಲ್ ನಿಧಿ (ಸಾಹಸೋದ್ಯಮ ಬಂಡವಾಳ) ಒದಗಿಸಲಿವೆ ಎಂಬುದಾಗಿ ಭಾವಿಸಿದ್ದೇನೆ. ಭಾರತದಲ್ಲಿ ಈಗಾಗಲೇ ವೆಂಚರ್ ಕ್ಯಾಪಿಟಲ್ ನಿಧಿ ವೇಗ ಪಡೆದುಕೊಂಡಿದ್ದು, ಎಂಟು ವರ್ಷಗಳಲ್ಲಿ 50 ಶತಕೋಟಿ ಡಾಲರ್​ಗೆ ತಲುಪಿದೆ’ ಎಂದು ಅದಾನಿ ತಿಳಿಸಿದ್ದಾರೆ.

ಸೌರ ಮತ್ತು ಹಸಿರು ಇಂಧನದ ಸಂಯೋಜನೆಯು ಗ್ರೀನ್ ಹೈಡ್ರೋಜನ್ ಜತೆ ಸೇರಿ ಭವಿಷ್ಯದಲ್ಲಿ ದೇಶದಲ್ಲಿ ಮಹಾನ್ ಅವಕಾಶಗಳನ್ನು ಸೃಷ್ಟಿಸಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 2050ರ ವೇಳೆಗೆ ಹಸಿರು ಇಂಧನ ರಫ್ತಿನಲ್ಲಿ ಭಾರತದ ಸಾಮರ್ಥ್ಯ ಗಣನೀಯವಾಗಿ ವೃದ್ಧಿಸಲಿದೆ ಎಂದು ಅವರು ಹೇಳಿದ್ದಾರೆ.

ಮೋದಿ ಸರ್ಕಾರದ ಕ್ರಮಗಳನ್ನು ಕೊಂಡಾಡಿದ ಅದಾನಿ

ಸುಮಾರು 30 ನಿಮಿಷಗಳ ಕಾಲ ಮಾತನಾಡಿದ ಅದಾನಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಉಪಕ್ರಮಗಳನ್ನು ಶ್ಲಾಘಿಸಿದ್ದಾರೆ. ಇದರಿಂದಾಗಿ ಭಾರತದ ಆರ್ಥಿಕತೆ ಬೆಳವಣಿಗೆ ಹೊಂದಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

1947ರಲ್ಲಿ ಭಾರತದ ಪ್ರಜಾಪ್ರಭುತ್ವ ಹೆಚ್ಚು ಕಾಲ ಬಾಳದು ಎಂಬ ಅಭಿಪ್ರಾಯ ಕೇಳಿಬಂದಿತ್ತು. ಆದರೆ, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದದ್ದು ಮಾತ್ರವಲ್ಲದೆ, ಶಾಂತಿಯುತ ಅಧಿಕಾರ ಹಸ್ತಾಂತರದಲ್ಲಿ ವಿಶ್ವಕ್ಕೇ ಮಾದರಿಯಾಗಿ ನಿಂತಿದೆ ಎಂದು ಅದಾನಿ ಬಣ್ಣಿಸಿದ್ದಾರೆ. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ನಮ್ಮದೇ ಬಹುಮತದ ಸರ್ಕಾರ ಹೊಂದಿದ್ದೇವೆ. ಇದು ನಮ್ಮ ದೇಶಕ್ಕೆ ಹಲವಾರು ರಚನಾತ್ಮಕ ಸುಧಾರಣೆಗಳನ್ನು ಪ್ರಾರಂಭಿಸುವ ಸಾಮರ್ಥ್ಯವನ್ನು ನೀಡಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Sat, 19 November 22