World’s Richest Person: ಟೆಸ್ಲಾ ಷೇರು ಝಗಮಗ; ಎಲಾನ್ ಮಸ್ಕ್ ಮತ್ತೆ ವಿಶ್ವ ನಂ. 1 ಶ್ರೀಮಂತ

|

Updated on: Feb 28, 2023 | 11:52 AM

Elon Musk's Tesla Shares Shine: ಕಳೆದ ತಿಂಗಳು 108.10 ಡಾಲರ್​ನಷ್ಟಿದ್ದ ಟೆಸ್ಲಾ ಷೇರು ಬೆಲೆ ಇದೀಗ 200 ಡಾಲರ್​ಗೂ ಹೆಚ್ಚಾಗಿದೆ. ಇದರಿಂದ ಎಲಾನ್ ಮಸ್ಕ್ ಆಸ್ತಿ ಮೌಲ್ಯ 187 ಬಿಲಿಯನ್ ಡಾಲರ್​ಗೆ ಏರಿದೆ. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಬೆರ್ನಾರ್ಡ್ ಆರ್ನಾಲ್ಟ್ ಅವರನ್ನು ಹಿಂದಿಕ್ಕಿ ಮಸ್ಕ್ ಅಗ್ರಸ್ಥಾನಕ್ಕೇರಿದ್ದಾರೆ.

Worlds Richest Person: ಟೆಸ್ಲಾ ಷೇರು ಝಗಮಗ; ಎಲಾನ್ ಮಸ್ಕ್ ಮತ್ತೆ ವಿಶ್ವ ನಂ. 1 ಶ್ರೀಮಂತ
ಇಲಾನ್ ಮಸ್ಕ್
Follow us on

ನವದೆಹಲಿ: ಟ್ವಿಟ್ಟರ್​ನ ಹೊಸ ಮಾಲೀಕ ಎಲಾನ್ ಮಸ್ಕ್ ಮತ್ತೆ ವಿಶ್ವದ ಅತಿಶ್ರೀಮಂತ ವ್ಯಕ್ತಿ (Elon Musk, World’s Richest Man) ಎನಿಸಿದ್ದಾರೆ. ಬ್ಲೂಮ್​ಬರ್ಗ್ ಬಿಡುಗಡೆ ಮಾಡಿದ ಸಿರಿವಂತರ ಪಟ್ಟಿಯಲ್ಲಿ (Bloomberg Billionaire’s Index) ಮಸ್ಕ್ ಅಗ್ರಸ್ಥಾನಕ್ಕೆ ಏರಿದ್ದಾರೆ. ಮಸ್ಕ್ ಮಾಲೀಕತ್ವದ ಟೆಸ್ಲಾ ಕಂಪನಿಯ ಷೇರುಗಳ ಬೆಲೆ ಈ ವರ್ಷ ಶೇ. 70ರಷ್ಟು ಏರಿದ ಹಿನ್ನೆಲೆಯಲ್ಲಿ ಮಸ್ಕ್ ಆಸ್ತಿ ಮೌಲ್ಯ ಹೆಚ್ಚಾಗಿದೆ. ಟ್ವಿಟ್ಟರ್ ಖರೀದಿಸುವಾಗ ಎಲಾನ್ ಮಸ್ಕ್ ಹಣ ಹೊಂದಿಸಲು ಟೆಸ್ಲಾದ ಷೇರುಗಳನ್ನು ಮಾರಿದ್ದರು. ಜೊತೆಗೆ ಒಂದಷ್ಟು ವಿವಾದಕ್ಕೂ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಟೆಸ್ಲಾ ಷೇರುಗಳೂ ಕುಸಿತ ಕಂಡಿದ್ದವು. ಜನವರಿ 3ರಂದು ಟೆಸ್ಲಾ ಷೇರು ಬೆಲೆ 108.10 ಡಾಲರ್​ಗೆ (8,940 ರೂ) ಕುಸಿತ ಕಂಡಿತ್ತು. ಸುದೀರ್ಘ ಕಾಲ ವಿಶ್ವದ ನಂಬರ್ ಒನ್ ಶ್ರೀಮಂತ ಎನಿಸಿಕೊಂಡಿದ್ದ ಎಲಾನ್ ಮಸ್ಕ್ ಎರಡನೇ ಸ್ಥಾನಕ್ಕೆ ಕುಸಿದಿದ್ದರು.

ಇದೀಗ ಟೆಸ್ಲಾ ಷೇರು ಬೆಲೆ 207.63 ಡಾಲರ್​ಗೆ (17,171 ರೂ) ಏರಿದೆ. ಪರಿಣಾಮವಾಗಿ ಎಲಾನ್ ಮಸ್ಕ್ ಆಸ್ತಿ ಮೌಲ್ಯ 187.1 ಬಿಲಿಯನ್ ಡಾಲರ್​ನಷ್ಟಾಗಿದೆ (ಸುಮಾರು 15.47 ಲಕ್ಷ ಕೋಟಿ ರುಪಾಯಿ). ಫ್ರಾನ್ಸ್ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್ ಅವರನ್ನು ಸ್ವಲ್ಪದರಲ್ಲಿ ಮಸ್ಕ್ ಹಿಂದಿಕ್ಕಿದ್ದಾರೆ. ಬ್ಲೂಂಬರ್ಗ್ ಮಾಹಿತಿ ಪ್ರಕಾರ ಆರ್ನಾಲ್ಟ್ ಆಸ್ತಿ ಮೌಲ್ಯ 185 ಬಿಲಿಯನ್ ಡಾಲರ್ (ಸುಮಾರು 15.30 ಲಕ್ಷ ಕೋಟಿ ರೂಪಾಯಿ) ಇದೆ.

ಇದನ್ನೂ ಓದಿ: CEO Salary: ಒಬ್ಬ ಸಿಇಒಗೆ 15 ಸಾವಿರ ರೂ ಸಂಬಳ; ಬೆರಗಾದ ನೆಟ್ಟಿಗರಿಗೆ ಇವರು ಕೊಟ್ಟ ಕಾರಣ ಏನು?

2021ರಲ್ಲಿ ಇಲಾನ್ ಮಸ್ಕ್ ಅವರ ಆಸ್ತಿ ಮೌಲ್ಯ ಬರೋಬ್ಬರಿ 300 ಬಿಲಿಯನ್ ಡಾಲರ್​ಗೂ (24.8ಲಕ್ಷ ಕೋಟಿ ರೂ) ಹೆಚ್ಚು ಇತ್ತು. ಎರಡನೇ ಸ್ಥಾನದಲ್ಲಿದ್ದ ಆರ್ನಾಲ್ಟ್ ಮತ್ತು ಮಸ್ಕ್ ನಡುವೆ ಆಸ್ತಿ ಅಂತರ ಬಹಳ ಹೆಚ್ಚಿತ್ತು. ಟ್ವಿಟ್ಟರ್ ಗೂಡಿಗೆ ಕೈಹಾಕಿದ ಬಳಿಕ ಮಸ್ಕ್ ಬಹಳಷ್ಟು ನಷ್ಟ ಮಾಡಿಕೊಂಡಿದ್ದಾರೆ. ಇದೀಗ ಚೇತರಿಕೆಯ ಹಾದಿಗೆ ಮಸ್ಕ್ ಬಂದಿದ್ದಂತೆ ತೋರುತ್ತಿದೆ.

ಇನ್ನೊಂದೆಡೆ, ಭಾರತದ ಗೌತಮ್ ಅದಾನಿ ಆಸ್ತಿ ಮೌಲ್ಯ 37.7 ಬಿಲಿಯನ್ ಡಾಲರ್​ಗೆ (3.12 ಲಕ್ಷ ಕೋಟಿ ರೂ) ಕುಸಿದಿದೆ. ಹಿಂಡನ್ಬರ್ಗ್ ರಿಸರ್ಚ್ ವರದಿ ಬಳಿಕ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಕುಸಿತ ಕಂಡಿರುವ ಪರಿಣಾಮ ಇದು. ಒಂದು ಸಮಯದಲ್ಲಿ ವಿಶ್ವದ ಎರಡನೇ ಅತೀ ಶ್ರೀಮಂತ ಎನಿಸಿದ್ದ ಅದಾನಿ ಇದೀಗ 25ಕ್ಕಿಂತ ಕೆಳಗಿನ ಸ್ಥಾನಕ್ಕೆ ಕುಸಿದಿದ್ದಾರೆ.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ