CEO Salary: ಒಬ್ಬ ಸಿಇಒಗೆ 15 ಸಾವಿರ ರೂ ಸಂಬಳ; ಬೆರಗಾದ ನೆಟ್ಟಿಗರಿಗೆ ಇವರು ಕೊಟ್ಟ ಕಾರಣ ಏನು?
CRED CEO Kunal Shah Gets Rs 15,000 Salary: ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯ ಪ್ಲಾಟ್ಫಾರ್ಮ್ ಎನಿಸಿರುವ ಕ್ರೆಡ್ನ ಸಿಇಒ ಕುನಾಲ್ ಶಾ ತಿಂಗಳಿಗೆ 15 ಸಾವಿರ ರೂ ಸಂಬಳ ಪಡೆಯುತ್ತಾರಂತೆ. ಇಷ್ಟು ಕಡಿಮೆ ಸಂಬಳ ಪಡೆಯಲು ಕಾರಣವೇನು? ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ ಈ ವಿಚಾರ.
ಸಿಇಒಗಳೆಂದರೆ ವರ್ಷಕ್ಕೆ ಕೋಟಿಗಿಂತಲೂ ಹೆಚ್ಚು ಸಂಬಳ ಎಣಿಸುತ್ತಾರೆ. ವಿಶ್ವದ ಟಾಪ್ ಗ್ರೇಡ್ ಸಿಇಒಗಳ ಸಂಬಳ (CEO Salaries) ವರ್ಷಕ್ಕೆ 50 ಕೋಟಿ ರೂಗಿಂತಲೂ ಅಧಿಕ ಇರುತ್ತದೆ. ಭಾರತದಲ್ಲಿ ಇನ್ಫೋಸಿಸ್ ಸಿಇಒ ಸಂಬಳ 71 ಕೋಟಿ ರೂ. ಇಂತಹ ಸ್ಥಿತಿಯಲ್ಲಿ ಉದಯೋನ್ಮುಖ ಎನಿಸಿರುವ ಸ್ಟಾರ್ಟಪ್ವೊಂದರ ಸಿಇಒ ಸಂಬಳ ಕೇಳಿದರೆ ನೀವು ಗಾಬರಿ ಬೀಳಬಹುದು. ಕ್ರೆಡ್ ಆ್ಯಪ್ ಹೆಸರು ಕೇಳಿರಬಹುದು, ಬಳಸುತ್ತಿರಬಹುದು. ಕ್ರೆಡ್ ಕಂಪನಿಯ ಸಿಇಒ ಕುನಾಲ್ ಶಾ (CRED CEO Kunal Shah) ಸಂಬಳ ತಿಂಗಳಿಗೆ ಕೇವಲ 15 ಸಾವಿರ ರೂ. ಅಂದರೆ ವರ್ಷಕ್ಕೆ 2 ಲಕ್ಷ ರೂಗಿಂತಲೂ ಕಡಿಮೆ.
ಇಷ್ಟು ಕಡಿಮೆ ಸಂಬಳ ತಾನು ಪಡೆಯುತ್ತಿರುವ ಸಂಗತಿಯನ್ನು ಕ್ರೆಡ್ ಸಿಇಒ ಕುನಾಲ್ ಅವರೇ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬಹಿರಂಗಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜನರ ಜೊತೆ ಮುಕ್ತ ಸಂವಾದದಲ್ಲಿ ತೊಡಗಿದ ಅವರು ತಾನು ಅಷ್ಟು ಕಡಿಮೆ ಸಂಬಳದಲ್ಲಿ ಹೇಗೆ ಬದುಕಲು ಸಾಧ್ಯ ಎಂಬುದನ್ನು ತಿಳಿಸಿದ್ದಾರೆ. ಈ ವಿಚಾರ ಟ್ವಿಟ್ಟರ್ನಂತಹ ಸಾಮಾಜಿಕ ತಾಣದಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಕ್ರೆಡ್ ಸಿಇಒ ಕುನಾಲ್ ಶಾ ಇನ್ಸ್ಟಾಗ್ರಾಮ್ನಲ್ಲಿ ಜನರೊಂದಿಗೆ ಪ್ರಶ್ನೋತ್ತರಕ್ಕೆ ಇಳಿದ ಸಂದರ್ಭದಲ್ಲಿ ಒಬ್ಬ ಬಳಕೆದಾರ ಕೇಳಿದ್ದು, ಕ್ರೆಡ್ನಲ್ಲಿ ನಿಮ್ಮ ಸಂಬಳ ಇಷ್ಟು ಕಡಿಮೆ ಇದೆ? ಹೇಗೆ ಬದುಕುತ್ತೀರಿ? ಎಂದು.
ಇದಕ್ಕೆ ಕುನಾಲ್ ನೀಡಿದ ಉತ್ತರ ಇದು: ಕಂಪನಿ ಲಾಭದಾಯಕವಾಗುವವರೆಗೂ ನನಗೆ ಒಳ್ಳೆಯ ಸಂಬಳ ಬರಬೇಕೆಂದು ಅನಿಸುವುದಿಲ್ಲ. ಕ್ರೆಡ್ನಲ್ಲಿ ನನ್ನ ಸಂಬಳ ತಿಂಗಳಿಗೆ 15 ಸಾವಿರ ರೂ ಇದೆ. ಹಿಂದಿನ ನನ್ನ ಕಂಪನಿ ಫ್ರೀಚಾರ್ಜ್ ಅನ್ನು ಮಾರಿದ್ದರಿಂದ ನಾನು ಬದಕಲು ಸಾಧ್ಯವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: PM Kisan: ಪಿಎಂ ಕಿಸಾನ್ ಯೋಜನೆ; ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ತಿಳಿಯುವುದು ಹೇಗೆ? ನೊಂದಣಿ ಹೇಗೆ? ಇಲ್ಲಿದೆ ವಿವರ
ಅಜೀತ್ ಪಟೇಲ್ ಎಂಬ ಟ್ವೀಟಿಗರೊಬ್ಬರು ಈ ಇನ್ಸ್ಟಾಗ್ರಾಮ್ ಸ್ಟೋರಿಯ ಸ್ಕ್ರೀನ್ಶಾಟ್ ತೆಗೆದು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡುತ್ತಾ, ಕೋಟಿಗಟ್ಟಲೆ ಸಂಬಳ ಪಡೆಯುವ ಸಿಇಒಗಳು ಇದ್ದಾರೆ. ಇವರ ಮಧ್ಯೆ ಕುನಾಲ್ ಶಾ ಭಿನ್ನ ಎನಿಸುತ್ತಾರೆ ಎಂದು ಬರೆದಿದ್ದಾರೆ.
There are CEOs who take salaries in crores then we have Kunal Shah. ? pic.twitter.com/aahaDJmdAm
— Ajeet Patel | Leetcode ⚡ (@Iampatelajeet) February 26, 2023
ಈ ಪೋಸ್ಟ್ ಬಹಳಷ್ಟು ಪರ ವಿರೋಧ ಚರ್ಚೆಗೆ ವೇದಿಕೆ ಒದಗಿಸಿದೆ. ಸಿಇಒಗಳು ಇಷ್ಟು ಕಡಿಮೆ ಸಂಬಳ ತೆಗೆದುಕೊಳ್ಳುತ್ತೇನೆಂದು ಹೇಳುವುದು ಬುದ್ಧಿವಂತಿಕೆಯ ಮಾತು ಹೊರತು ವಾಸ್ತವ ಅದಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಒಬ್ಬ ಸಿಇಒ ಜೀವನ 15 ಸಾವಿರ ರೂ ಸಂಬಳದಿಂದ ಬದಲಾಗಿಬಿಡುತ್ತದೆ ಎಂದು ಭಾವಿಸುವಷ್ಟು ಮೂರ್ಖರು ಇಲ್ಲಿದ್ದೀರಾ? ಈ ವ್ಯಕ್ತಿ ನೂರಾರು ಕೋಟಿ ರೂ ಮೌಲ್ಯದ ಸ್ಟಾರ್ಟಪ್ ಅನ್ನು ಮಾರಿದ್ದಾರೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಕೆಲವರು, ಇದು ತೆರಿಗೆ ಉಳಿಸಲು ಸಿಇಒ ಮಾಡುತ್ತಿರುವ ತಂತ್ರ. ಇವರು ಕೋಟಿಗಟ್ಟಲೆ ಖರ್ಚು ಮಾಡಿ ಐಷಾರಾಮಿ ಜೀವನ ನಡೆಸುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: Post Office Savings: ಆನ್ಲೈನ್, ಆಫ್ಲೈನ್ನಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ
ಕ್ರೆಡ್ ಎಂಬುದು ಕ್ರೆಡಿಟ್ ಕಾರ್ಡ್ಗಳ ಪೇಮೆಂಟ್ ಪ್ಲಾಟ್ಫಾರ್ಮ್ ಆಗಿದೆ. ಎಲ್ಲಾ ರೀತಿಯ ಕ್ರೆಡಿಟ್ ಕಾರ್ಡ್ಗಳ ಬಿಲ್ಗಳನ್ನು, ಎಲೆಕ್ಟ್ರಿಕ್ ಇತ್ಯಾದಿ ವಿವಿಧ ಬಗೆಯ ಬಿಲ್ಗಳನ್ನು ಕ್ರೆಡ್ನಲ್ಲಿ ಕಟ್ಟಬಹುದು. ಇಲ್ಲಿ ಬಿಲ್ ಪಾವತಿಗೆ ಇಂತಿಷ್ಟು ರಿಟರ್ನ್ಸ್ ಸಿಗುತ್ತದೆ. ಈ ಕಾರಣಕ್ಕೆ ಕ್ರೆಡ್ ಬಹಳ ಜನಪ್ರಿಯವಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕ್ರೆಡ್ ಏರುಗತಿ ಪಡೆದಿಲ್ಲ. ನಷ್ಟದಲ್ಲಿ ನಡೆಯುತ್ತಿರುವುದು ವಾಸ್ತವ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:45 am, Tue, 28 February 23