Post Office Savings: ಆನ್ಲೈನ್, ಆಫ್ಲೈನ್ನಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ
ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್ ಅನ್ನು ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಪರಿಶೀಲಿಸುವ ಸುಲಭ ವಿಧಾನಗಳ ಮಾಹಿತಿ ಇಲ್ಲಿದೆ.
ದೇಶದಲ್ಲಿ ಅನೇಕ ಮಂದಿ ಅಂಚೆ ಕಚೇರಿಯಲ್ಲಿ (Post Office) ಉಳಿತಾಯ ಖಾತೆ (Savings Account) ತೆರೆಯುತ್ತಾರೆ. ತೆರಿಗೆ ಉಳಿತಾಯ ಸೇರಿದಂತೆ ಅಂಚೆ ಕಚೇರಿ ಉಳಿತಾಯ ಖಾತೆಗಳಲ್ಲಿ ದೊರೆಯುವ ಅನೇಕ ಸೌಲಭ್ಯಗಳೇ ಇದಕ್ಕೆ ಕಾರಣ. ಕನಿಷ್ಠ 500 ರೂ. ಮೊತ್ತದೊಂದಿಗೆ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಬಹುದಾಗಿದೆ. ಆನ್ಲೈನ್ ಮತ್ತು ಆಫ್ಲೈನ್ ಮೂಲಕವೂ ಖಾತೆ ತೆರೆಯಬಹುದಾಗಿದೆ. ಅಂಚೆ ಕಚೇರಿಯ ಕೆಲವು ಉಳಿತಾಯ ಖಾತೆ ಯೋಜನೆಗಳಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ವಾರ್ಷಿಕ 10,000 ರೂ. ವರೆಗಿನ ಠೇವಣಿಯ ಬಡ್ಡಿಗೆ ತೆರಿಗೆ ವಿನಾಯಿತಿ ಪಡೆಯಲೂ ಅವಕಾಶವಿದೆ. ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್ ಅನ್ನು ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಪರಿಶೀಲಿಸುವ (Balance check) ಸುಲಭ ವಿಧಾನಗಳ ಮಾಹಿತಿ ಇಲ್ಲಿದೆ.
ಇ ಪಾಸ್ಬುಕ್ ವ್ಯವಸ್ಥೆ
ಅಂಚೆ ಕಚೇರಿ ಉಳಿತಾಯ ಯೋಜನೆಗೆ ಇ-ಪಾಸ್ಬುಕ್ ವ್ಯವಸ್ಥೆಯನ್ನು ಕಳೆದ ವರ್ಷ ಸರ್ಕಾರ ಜಾರಿಗೆ ತಂದಿದೆ. ಇದಕ್ಕೆ ಅಂಚೆ ಕಚೇರಿ ಆ್ಯಪ್ಗೆ ಸೈನ್ ಇನ್ ಆಗುವ ಮೂಲಕ ಬ್ಯಾಲೆನ್ಸ್ ಆ್ಯಂಡ್ ಸ್ಟೇಟ್ಮೆಂಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ‘ಗೋ’ ಮೇಲೆ ಕ್ಲಿಕ್ ಮಾಡಬೇಕು. ಆಗ ಮತ್ತೊಂದು ಡ್ಯಾಶ್ಬೋರ್ಡ್ಗೆ ರಿಡೈರೆಕ್ಟ್ ಆಗುತ್ತದೆ. ನಂತರ ನೀವು ಸ್ಟೇಟ್ಮೆಂಟ್ ನೋಡಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳಬಹುದು.
ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ತಿಳಿಯವುದು ಹೇಗೆ?
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7738062873 ಈ ಸಂಖ್ಯೆಗೆ REGISTER ಎಂದು ಎಸ್ಎಂಎಸ್ ಕಳುಹಿಸಬೇಕು. ಈಗ ನಿಮ್ಮ ಮೊಬೈಲ್ ಸಂಖ್ಯೆ ಎಸ್ಎಂಎಸ್ ಸೇವೆಗೆ ನೋಂದಾವಣೆಯಾಗುತ್ತದೆ. ನಂತರ ‘Bal’ ಎಂದು ಎಸ್ಎಂಎಸ್ ಕಳುಹಿಸಬೇಕು. ಮಿನಿ ಸ್ಟೇಟ್ಮೆಂಟ್ ಪಡೆಯಲು ‘Mini’ ಎಂದು ಎಸ್ಎಂಎಸ್ ಕಳುಹಿಸಬೇಕು.
ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ತಿಳಿಯುವುದು ಹೇಗೆ?
ಕಾಲ್ ಬ್ಯಾಂಕಿಂಗ್ಗೆ ನೋಂದಣಿ ಮಾಡುವುದಕ್ಕಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8424054994 ಈ ಸಂಖ್ಯೆಗೆ ಡಯಲ್ ಮಾಡಿ. ಕಾಲ್ ಬ್ಯಾಂಕಿಂಗ್ ನೋಂದಣಿಯಾದ ಬಳಿಕ ಈ ಸಂಖ್ಯೆಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಬ್ಯಾಲೆನ್ಸ್ ಹಾಗೂ ಮಿನಿ ಸ್ಟೇಟ್ಮೆಂಟ್ ಪಡೆಯಬಹುದು.
ಇಷ್ಟೇ ಅಲ್ಲದೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮೊಬೈಲ್ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು ಅದರ ಮೂಲಕವೂ ಬ್ಯಾಲೆನ್ಸ್, ಮಿನಿ ಸ್ಟೇಟ್ಮೆಂಟ್ ಪಡೆಯಬಹುದು. ಮೊದಲು ಒಟಿಪಿ ಮೂಲಕ ಮೊಬೈಲ್ ಆ್ಯಪ್ ರಿಜಿಸ್ಟರ್ ಮಾಡಿ ಎಂಪಿನ್ ಸೆಟ್ ಮಾಡಬೇಕಾಗುತ್ತದೆ. 155299 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕವೂ ಬ್ಯಾಲೆನ್ಸ್ ತಿಳಿಯಬಹುದಾಗಿದೆ. ಅಂಚೆ ಕಚೇರಿಗಳಲ್ಲಿ ಅಂಟಿಸಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ಬ್ಯಾಲೆನ್ಸ್ ತಿಳಿಯಲು, ಮಿನಿ ಸ್ಟೇಟ್ಮೆಂಟ್ ಪಡೆಯಲು ಅವಕಾಶವಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ