ಹಣದ ಹಿಂದೆ ಬೀಳದಿರಿ; ನೀವೀ ಕೆಲಸ ಮಾಡಿದರೆ ಕಾಂಚಾಣ ತಾನಾಗೇ ಬರುತ್ತೆ: ಇಲಾನ್ ಮಸ್ಕ್ ಮಸ್ತ್ ಟಿಪ್ಸ್

Elon Musk at Nikhil Kamath's WTF podcast: ನಿಖಿಲ್ ಕಾಮತ್ ಅವರ ಪೋಡ್​ಕ್ಯಾಸ್ಟ್​ನಲ್ಲಿ ಪಾಲ್ಗೊಂಡು ಇಲಾನ್ ಮಸ್ಕ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಭಾರತೀಯರ ಪೋಡ್​ಕ್ಯಾಸ್ಟ್​ನಲ್ಲಿ ಇಲಾನ್ ಮಸ್ಕ್ ಭಾಗವಹಿಸಿದ್ದು ಇದೇ ಮೊದಲು. ಹಣ ಗಳಿಸುವುದು ಹೇಗೆ, ಭವಿಷ್ಯದ ದಿನಗಳು ಹೇಗಿರಲಿವೆ ಎಂಬಿತ್ಯಾದಿ ವಿಚಾರಗಳನ್ನು ಮಸ್ಕ್ ಚರ್ಚಿಸಿದ್ದಾರೆ.

ಹಣದ ಹಿಂದೆ ಬೀಳದಿರಿ; ನೀವೀ ಕೆಲಸ ಮಾಡಿದರೆ ಕಾಂಚಾಣ ತಾನಾಗೇ ಬರುತ್ತೆ: ಇಲಾನ್ ಮಸ್ಕ್ ಮಸ್ತ್ ಟಿಪ್ಸ್
ಇಲಾನ್ ಮಸ್ಕ್

Updated on: Dec 01, 2025 | 12:54 PM

ಬೆಂಗಳೂರು, ಡಿಸೆಂಬರ್ 1: ಝೀರೋಧ ಸಂಸ್ಥಾಪಕ ನಿಖಿಲ್ ಕಾಮತ್ ಅವರ ಡಬ್ಲ್ಯುಟಿಎಫ್ ಪೋಡ್​ಕ್ಯಾಸ್ಟ್​ನಲ್ಲಿ ವಿಶ್ವದ ನಂಬರ್ ಒನ್ ಶ್ರೀಮಂತ ಇಲಾನ್ ಮಸ್ಕ್ (Elon Musk) ಬಹುತೇಕ ಎರಡು ಗಂಟೆ ಕಾಲ ಸಂದರ್ಶನ ಕೊಟ್ಟಿದ್ದಾರೆ. ಎಕ್ಸ್ ಹೆಸರು ಯಾಕೆ ಇಷ್ಟ ಎಂಬುದರಿಂದ ಹಿಡಿದು, ತಮ್ಮ ವೈಯಕ್ತಿಕ ಬದುಕು, ಭಾರತೀಯರ ಕೊಡುಗೆ, ಹಣ ಗಳಿಸುವ ಮಾರ್ಗ, ಪರಿಶ್ರಮ, ವೈಫಲ್ಯ ಇತ್ಯಾದಿ ಅನೇಕ ವಿಚಾರಗಳ ಬಗ್ಗೆ ಇಲಾನ್ ಮಸ್ಕ್ ಮಾತನಾಡಿದ್ದಾರೆ. ಭಾರತೀಯರ ಪೋಡ್​ಕ್ಯಾಸ್ಟ್ ಇತಿಹಾಸದಲ್ಲೇ ಅತ್ಯಂತ ಮಹತ್ವಪೂರ್ಣ ಸಂದರ್ಶನಗಳಲ್ಲಿ ಇದೊಂದೆನಿಸಿದೆ.

ಹಣ ಗಳಿಸುವ ಇಲಾನ್ ಮಸ್ಕ್ ಐಡಿಯಾ

ಆಂಟ್ರಪ್ರನ್ಯೂರ್ ಅಥವಾ ನವೋದ್ಯಮಿಗಳಾಗಬಯಸುವ ಜನರಿಗೆ ಇಲಾನ್ ಮಸ್ಕ್ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಹಣ ಗಳಿಸಬೇಕೆಂದವರು ಹಣದ ಹಿಂದೆ ಬೀಳಬಾರದು. ಹಣವೇ ಅವರ ಹಿಂದೆ ಬರುವಂತೆ ಮಾಡಬೇಕು. ಸಂತೋಷದ ಹಿಂದೆ ಹೋದರೆ ಹಣ ತಾನೇ ಬರುತ್ತೆ ಎಂದಿದ್ದಾರೆ.

ಇದನ್ನೂ ಓದಿ: ವಿಶ್ವದ ಅತೀ ಶ್ರೀಮಂತ ಇಲಾನ್ ಮಸ್ಕ್ ಮಗನ ಹೆಸರು ಶೇಖರ್; ಈ ಭಾರತೀಯ ಹೆಸರಿಡಲು ಏನು ಕಾರಣ ಗೊತ್ತಾ?

‘ಆಂಟ್ರಪ್ರನ್ಯೂರ್​ಗಳಾಗಬಯಸುವವರು ಸಮಾಜದಿಂದ ಪಡೆದುದಕ್ಕಿಂತ ಹೆಚ್ಚಿನದನ್ನು ಕೊಡಬೇಕು. ನೀವು ಹಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಮೌಲ್ಯಯುತವಾದುದನ್ನು ಸೃಷ್ಟಿಸುವ ಬದಲು, ಉಪಯುಕ್ತವಾದ ಉತ್ಪನ್ನಗಳು ಅಥವಾ ಸೇವೆಗಳನ್ನು ಒದಗಿಸುವ ಗುರಿ ಹೊಂದಿರಬೇಕು. ಹಾಗೆ ಮಾಡಿದಾಗ ಹಣವು ಸಹಜವಾಗಿ ಹರಿದುಬರುತ್ತದೆ’ ಎಂದು ಇಲಾನ್ ಮಸ್ಕ್ ಅವರು ವಿವರಿಸಿದ್ದಾರೆ.

ಇನ್ಪುಟ್​ಗಿಂತ ಔಟ್​ಪುಟ್ ಮೌಲ್ಯಯುತವಾಗಿರಬೇಕು…

ಒಂದು ಬ್ಯುಸಿನೆಸ್ ಯಶಸ್ವಿಯಾಗಬೇಕಾದರೆ ಬಹಳ ಶ್ರಮ ಪಡಬೇಕು. ಈ ಹಾದಿಯಲ್ಲಿ ವೈಫಲ್ಯ ಎದುರಾಗವುದು ಸಹಜ. ನೀವು ಹಾಕಿದ ಶ್ರಮಕ್ಕಿಂತ ಉತ್ತಮವಾದ ಉತ್ಪನ್ನ ಹೊರತರುವುದು ನಿಮ್ಮ ಗಮನದಲ್ಲಿರಲಿ. ಹಾಗಾದಾಗ ನೀವು ಮೌಲ್ಯ ಸೃಷ್ಟಿಕರ್ತ ಎನಿಸುತ್ತೀರಿ. ನಿಜವಾಗಿಯೂ ಬೇಕಾಗಿರುವುದು ಅದೆಯೇ ಎಂದು ನಿಖಿಲ್ ಕಾಮತ್ ಅವರ ಪೋಡ್​ಕ್ಯಾಸ್ಟ್​ನಲ್ಲಿ ಇಲಾನ್ ಮಸ್ಕ್ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಮೂಲದ ಸ್ಟಾರ್ಟ್‌ಅಪ್​​ನಿಂದ ದೇಶದ ಮೊಟ್ಟ ಮೊದಲ ರಕ್ಷಣಾ AI ತಂತ್ರಜ್ಞಾನ ಅಭಿವೃದ್ಧಿ

ಸಾಮರ್ಥ್ಯ ಮೀರಿದ ಸಾಧನೆ ಮಾಡಿದವರಿಗೆ ನನ್ನ ಗೌರವ

ಪ್ರಾಬಲ್ಯ ತೋರಲು ಯಾರಾದರೂ ಬಯಸಿದರೆ ಅವರಿಗೆ ನಾನು ಬಿಗ್ ಫ್ಯಾನ್. ತಾನು ಗಳಿಸಲು ಸಾಧ್ಯವಾಗುವುದಕ್ಕಿಂತ ಹೆಚ್ಚಿನದನ್ನು ಪಡೆಯಲು ಬಯಸಿದರೆ ಅವರನ್ನು ನಾನು ಗೌರವಿಸುತ್ತೇನೆ ಎಂದೂ ಹೇಳಿರುವ ಇಲಾನ್ ಮಸ್ಕ್ ಅವರು ಭಾರತೀಯ ಆಂಟ್ರಪ್ರನ್ಯೂರ್​ಗಳು ಆಕ್ರಮಣಕಾರಿ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎನ್ನುವ ಸಲಹೆಯನ್ನು ಪರೋಕ್ಷವಾಗಿ ನೀಡಿದ್ದಾರೆ.

ಇಲಾನ್ ಮಸ್ಕ್ ಸಂದರ್ಶನದ ಪೂರ್ಣ ವಿಡಿಯೋ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ