ವಿಶ್ವದ ಅತೀ ಶ್ರೀಮಂತ ಇಲಾನ್ ಮಸ್ಕ್ ಮಗನ ಹೆಸರು ಶೇಖರ್; ಈ ಭಾರತೀಯ ಹೆಸರಿಡಲು ಏನು ಕಾರಣ ಗೊತ್ತಾ?
Elon Musk speaks in podcast with Nikhil Kamath: ಇಲಾನ್ ಮಸ್ಕ್ ಅವರಿಗೆ ಶೇಖರ್ ಹೆಸರಿನ ಒಬ್ಬ ಮಗನಿದ್ದಾನಂತೆ. ಆ ಮಗುವನ್ನು ಹೆತ್ತಾಕೆಯೂ ಭಾರತ ಮೂಲದವಳಂತೆ. ನಿಖಿಲ್ ಕಾಮತ್ ಅವರ ಪೋಡ್ಕ್ಯಾಸ್ಟ್ವೊಂದರಲ್ಲಿ ಇಲಾನ್ ಮಸ್ಕ್ ತಮ್ಮ ವೈಯಕ್ತಿಕ ಜೀವನದ ಕುತೂಹಲಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ನೊಬೆಲ್ ಪುರಸ್ಕೃತ ಭಾರತೀಯ ವಿಜ್ಞಾನಿ ಸುಬ್ರಹ್ಮಣ್ಯಂ ಚಂದ್ರಶೇಖರ್ ಹೆಸರಿನ ಒಂದು ಭಾಗವನ್ನು ತಮ್ಮ ಮಗನಿಗೆ ಇಟ್ಟಿರುವುದಾಗಿ ಹೇಳಿದ್ದಾರೆ.

ಬೆಂಗಳೂರು, ನವೆಂಬರ್ 30: ಇಲಾನ್ ಮಸ್ಕ್ (Elon Musk) ಹೆಸರು ಈಗ ಹೆಚ್ಚು ಪರಿಚಿತ. ಇವರು ಎಕ್ಸ್, ಟೆಸ್ಲಾ ಇತ್ಯಾದಿ ಹಲವು ಕಂಪನಿಗಳ ಮುಖ್ಯಸ್ಥ. ಅದಕ್ಕಿಂತ ಹೆಚ್ಚಾಗಿ ವಿಶ್ವದ ಅತೀ ಶ್ರೀಮಂತ. ಮಂಗಳದಲ್ಲಿ ಮನುಷ್ಯ ಕಾಲೊನಿ ನಿರ್ಮಿಸುವ ಹೆಬ್ಬಯಕೆ ಇವರದ್ದು. ಮನುಷ್ಯರ ಸಂತತಿ ಕಡಿಮೆ ಆಗಬಾರದು ಎನ್ನುವ ಕಾಳಜಿ. ಜನರು ಹೆಚ್ಚೆಚ್ಚು ಮಕ್ಕಳನ್ನು ಹೊಂದಬೇಕು ಎನ್ನುವ ವಾದಿಗಳಲ್ಲಿ ಇವರೂ ಒಬ್ಬರು. ನಿಖಿಲ್ ಕಾಮತ್ (Nikhil Kamath) ಅವರ ಯೂಟ್ಯೂಬ್ ಪೋಡ್ಕ್ಯಾಸ್ಟ್ವೊಂದರಲ್ಲಿ ಮಾತನಾಡುತ್ತಿದ್ದ ಇಲಾನ್ ಮಸ್ಕ್ ಅವರು ತಮ್ಮ ಒಬ್ಬ ಮಗನ ಹೆಸರು ಹಾಗೂ ಆ ಮಗನ ತಾಯಿಯ ಪರಿಚಯವನ್ನು ಮಾಡಿಸಿದ್ದಾರೆ.
ಇಲಾನ್ ಮಸ್ಕ್ ಅವರಿಗೆ ಹಲವು ಮಕ್ಕಳಿದ್ಧಾರೆ. ಅವರಲ್ಲಿ ಶೇಖರ್ (Sekhar) ಒಬ್ಬ. ಈ ವಿಚಾರವನ್ನು ಪೋಡ್ಕ್ಯಾಸ್ಟ್ನಲ್ಲಿ ಮಸ್ಕ್ ಹಂಚಿಕೊಂಡಿದ್ದಾರೆ. ‘ಈ ವಿಷಯ ನಿಮಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ನನ್ನ ಪಾರ್ಟ್ನರ್ ಶಿವೋನ್ ಜಿಲಿಸ್ (Shivon Zilis) ಅರ್ಧ ಭಾರತೀಯೆ. ಅವಳಿಂದ ಪಡೆದ ಮಕ್ಕಳಲ್ಲಿ ಒಬ್ಬನ ಮಧ್ಯ ನಾಮ ಶೇಖರ್ ಎಂದಿಟ್ಟಿದ್ದೇವೆ’ ಎಂದು ವಿಶ್ವದ ನಂಬರ್ ಒನ್ ಶ್ರೀಮಂತ ಅಭಿಪ್ರಾಯಪಟ್ಟಿದ್ಧಾರೆ.
ಇದನ್ನೂ ಓದಿ: ಶ್ರೀಲಂಕಾ ಚಂಡಮಾರುತ; ಸಾವಿನ ಸಂಖ್ಯೆ 200ಕ್ಕೂ ಹೆಚ್ಚು; ಪಾಕಿಸ್ತಾನೀ ಸೇರಿ ವಿವಿಧ ದೇಶಗಳ ಜನರನ್ನು ರಕ್ಷಿಸಿದ ಭಾರತೀಯ ವಾಯುಪಡೆ
ಭಾರತ ಮೂಲದ ವಿಜ್ಞಾನಿಯೂ ಮತ್ತು ನೊಬೆಲ್ ಪುರಸ್ಕೃತರೂ ಆಗಿದ್ದ ಸುಬ್ರಹ್ಮಣ್ಯಂ ಚಂದ್ರಶೇಖರ್ ಅವರ ಹೆಸರಿನ ಒಂದು ಭಾಗವನ್ನು ಇಲಾನ್ ಮಸ್ಕ್ ತಮ್ಮ ಒಬ್ಬ ಮಗನಿಗೆ ಇಟ್ಟಿದ್ದಾರೆ.
ಶೇಖರ್ ತಾಯಿ ಹಾಗೂ ಇಲಾನ್ ಮಸ್ಕ್ ಅವರ ಪಾರ್ಟ್ನರ್ ಆಗಿರುವ ಶಿವೋನ್ ಜಿಲಿಸ್ ಅವರು ಕೆನಡಾದಲ್ಲಿ ಬೆಳೆದವರು. ಅವರ ತಂದೆ ಭಾರತೀಯ ಮೂಲದವರೆನ್ನಲಾಗಿದೆ. ತನ್ನ ಪಾರ್ಟ್ನರ್ ಕೆನಡಾದಲ್ಲಿ ಓದಿ ಬೆಳೆದದ್ದು ಎಂಬುದು ಬಿಟ್ಟರೆ ಹೆಚ್ಚಿನ ಮಾಹಿತಿ ಇಲಾನ್ ಮಸ್ಕ್ ಅವರಿಗೂ ಇದ್ದಂತಿಲ್ಲ.
ಇದನ್ನೂ ಓದಿ: ಭಾರತೀಯರಿಗೆ ಅವರ ಭಾಷೆಗಳೇ ಗೊತ್ತಿಲ್ಲ ಎನ್ನುವಂತಾಗಿದೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ಶಿವೋನ್ ಜಿಲಿಸ್ ಅವರು 2017ರಲ್ಲಿ ಇಲಾನ್ ಮಸ್ಕ್ ಅವರ ನ್ಯೂರಾಲಿಂಕ್ ಕಂಪನಿಗೆ ಕೆಲಸಕ್ಕೆ ಸೇರಿದ್ದರು. ಆಪರೇಷನ್ಸ್ ಮತ್ತು ಸ್ಪೆಷಲ್ ಪ್ರಾಜೆಕ್ಟ್ಸ್ ವಿಭಾಗದ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲಾನ್ ಮಸ್ಕ್ ಅವರಿಗೆ ಹೆಂಡತಿ ಅಲ್ಲ, ಸಂಗಾತಿಯಾಗಿದ್ದಾರೆ. ಅವರಿಂದ ನಾಲ್ವರು ಮಕ್ಕಳನ್ನು ಹಡೆದಿದ್ದಾರೆ. ನಾಲ್ಕೈದು ಪತ್ನಿಯರು, ಸಂಗಾತಿಯರಿಂದ ಇಲಾನ್ ಮಸ್ಕ್ 14ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




