ಟೆಸ್ಲಾ ಸಿಇಒ ಆಗಿ ಇಲಾನ್ ಮಸ್ಕ್​ಗೆ 89000000000000 ರೂ ಸಂಭಾವನೆ; ಬೇರೆ ಸಿಇಒಗಳಿಗಿಂತ ಸಾವಿರ ಪಟ್ಟು ಹೆಚ್ಚು ಹಣ

1 trillion USD compensation plan for Elon Musk: ವಿಶ್ವದ ಮೊದಲ ಟ್ರಿಲಿಯನೇರ್ ಆಗುವ ಹಾದಿಯಲ್ಲಿದ್ದಾರೆ ಇಲಾನ್ ಮಸ್ಕ್. ಟೆಸ್ಲಾದ ಸಿಇಒ ಆಗಿ ಇಲಾನ್ ಮಸ್ಕ್ ಅವರಿಗೆ 1 ಟ್ರಿಲಿಯನ್ ಡಾಲರ್ ಪೇ ಪ್ಯಾಕೇಜ್ ನೀಡಲಾಗುತ್ತದೆ. ಈ ಕಾಂಪೆನ್ಸೇಶನ್ ಪ್ಲಾನ್​ಗೆ ಟೆಸ್ಲಾದ ಶೇ. 75ರಷ್ಟು ಷೇರುದಾರರ ಅನುಮೋದನೆ ಸಿಕ್ಕಿದೆ.

ಟೆಸ್ಲಾ ಸಿಇಒ ಆಗಿ ಇಲಾನ್ ಮಸ್ಕ್​ಗೆ 89000000000000 ರೂ ಸಂಭಾವನೆ; ಬೇರೆ ಸಿಇಒಗಳಿಗಿಂತ ಸಾವಿರ ಪಟ್ಟು ಹೆಚ್ಚು ಹಣ
ಇಲಾನ್ ಮಸ್ಕ್

Updated on: Nov 07, 2025 | 3:09 PM

ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿರುವ ಇಲಾನ್ ಮಸ್ಕ್ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವದ ಮೊದಲ ಟ್ರಿಲಿಯನೇರ್ ಆಗುವ ಹಾದಿಯತ್ತ ದಾಪುಗಾಲಿಡುತ್ತಿದ್ದಾರೆ. ಅವರು ಸಿಇಒ ಆಗಿರುವ ಟೆಸ್ಲಾ ಕಂಪನಿಯಲ್ಲಿ ಇಲಾನ್ ಮಸ್ಕ್ (Elon Musk) ಅವರಿಗೆ 1 ಟ್ರಿಲಿಯನ್ ಡಾಲರ್ ಮೊತ್ತದ ಸಂಭಾವನೆ ಸಿಗಲಿದೆ. ವಿಶ್ವದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಸಂಭಾವನೆಯ ಪ್ಯಾಕೇಜ್​ಗೆ ಟೆಸ್ಲಾದ ಶೇ. 75ರಷ್ಟು ಷೇರುದಾರರು ಸಮ್ಮತಿ ಕೊಟ್ಟಿದ್ದಾರೆ.

ಇಲಾನ್ ಮಸ್ಕ್​ಗೆ ಇಷ್ಟು ಭಾರೀ ಸಂಭಾವನೆ ಸಿಗಲು ಷರತ್ತುಗಳಿವೆ…

ಇಲಾನ್ ಮಸ್ಕ್ ಅವರಿಗೆ 1 ಟ್ರಿಲಿಯನ್ ಡಾಲರ್ ಸಂಭಾವನೆಯನ್ನು ಒಂದು ವರ್ಷಕ್ಕೆ ನೀಡುವುದಲ್ಲ. ಸ್ಟಾಕ್​ಗಳ ರೂಪದಲ್ಲಿ ನೀಡಲಾಗಿರುತ್ತದೆ. 1 ಟ್ರಿಲಿಯನ್ ಡಾಲರ್ ಅನ್ನು ರುಪಾಯಿಗೆ ಪರಿವರ್ತಿಸಿದರೆ 89 ಲಕ್ಷ ಕೋಟಿ ರೂ ಆಗುತ್ತದೆ. ಈ ದೊಡ್ಡ ಮೊತ್ತವನ್ನು ಪಡೆಯಬೇಕಾದರೆ ಇಲಾನ್ ಮಸ್ಕ್ ಅವರು ಕೆಲ ನಿಗದಿತ ಟಾರ್ಗೆಟ್​ಗಳನ್ನು ಮುಟ್ಟಬೇಕು.

ಇದನ್ನೂ ಓದಿ: ಕರ್ನಾಟಕದಿಂದ ಮಹತ್ವಾಕಾಂಕ್ಷಿ ಹೆಜ್ಜೆ; ಮುಂದಿನ 5 ವರ್ಷದಲ್ಲಿ 25,000 ಸ್ಟಾರ್ಟಪ್​ಗಳ ಸ್ಥಾಪನೆಗೆ ಗುರಿ

ಇಲಾನ್ ಮಸ್ಕ್ ಅವರಿಗೆ ನೀಡಲಾಗಿರುವ ಕೆಲ ಗುರಿಗಳು

  • ಮುಂದಿನ 10 ವರ್ಷಗಳಲ್ಲಿ 2 ಕೋಟಿ ಟೆಸ್ಲಾ ವಾಹನಗಳ ಮಾರಾಟವಾಗಬೇಕು
  • ಟೆಸ್ಲಾದ ಮಾರುಕಟ್ಟೆ ಸಂಪತ್ತು 8.5 ಟ್ರಿಲಿಯನ್ ಡಾಲರ್ ದಾಟಬೇಕು
  • 10 ಲಕ್ಷ ರೋಬೋ ಟ್ಯಾಕ್ಸಿಗಳ ಮಾರಾಟವಾಗಬೇಕು

ಈ ಮೇಲಿನವರು ಇಲಾನ್ ಮಸ್ಕ್ ಅವರಿಗೆ ನೀಡಲಾಗಿರುವ ಕೆಲ ಗುರಿಗಳಾಗಿವೆ. ಮಸ್ಕ್ ಅವರಿಗೆ ಸಂಭಾವನೆಯನ್ನು ಹಂತ ಹಂತವಾಗಿ ನೀಡಲಾಗುತ್ತದೆ. ಕಾಂಪೆನ್ಸೇಶನ್ ಪ್ಯಾಕೇಜ್ ಅನ್ನು 12 ಟ್ರ್ಯಾಂಚ್​ಗಳಲ್ಲಿ ನೀಡಲಾಗುತ್ತದೆ. ಎಲ್ಲಾ ಗುರಿಗಳನ್ನು ಮುಟ್ಟಬೇಕೆಂದಿಲ್ಲ. ಗುರಿ ಮುಟ್ಟಲು ವಿಫಲರಾದರೂ ಕೆಲ ಬಿಲಿಯನ್ ಡಾಲರ್​ಗಳಷ್ಟಾದರೂ ಹಣವನ್ನು ಇಲಾನ್ ಮಸ್ಕ್ ಪಡೆಯುತ್ತಾರೆ.

ಟೆಸ್ಲಾದಲ್ಲಿ ಇಲಾನ್ ಮಸ್ಕ್ ಸದ್ಯ ಶೇ. 13ರಷ್ಟು ಷೇರುಪಾಲು ಹೊಂದಿದ್ದಾರೆ. ಈ ಕಾಂಪೆನ್ಸೇಶನ್ ಪ್ಲಾನ್ ಪೂರ್ಣವಾಗಿ ಈಡೇರಿದರೆ ಮಸ್ಕ್ ಅವರ ಷೇರುಪಾಲು ಶೇ. 25ಕ್ಕೆ ಏರುತ್ತದೆ. ಇವೆಲ್ಲವೂ ಕೂಡ ಇಲಾನ್ ಮಸ್ಕ್ ಅವರ ಶ್ರೀಮಂತಿಕೆಯನ್ನು ಊಹಾತೀತ ಮಟ್ಟಕ್ಕೆ ಹೊತ್ತೊಯ್ಯುತ್ತವೆ.

ಇದನ್ನೂ ಓದಿ: ಕೇವಲ 30 ರೂಗೆ ರಾಕೆಟ್ ಸರ್ವಿಸ್; ಚೆನ್ನೈ ಕಂಪನಿಯಿಂದ ಮರುಬಳಕೆಯ ಎಲೆಕ್ಟ್ರಿಕ್ ರಾಕೆಟ್ ಆವಿಷ್ಕಾರ

ಇತರ ಸಿಇಒಗಳ ಪ್ಯಾಕೇಜ್ ಹೇಗಿದೆ?

ಇಲಾನ್ ಮಸ್ಕ್ ಅವರಿಗೆ ನೀಡಲು ಉದ್ದೇಶಿಸಲಾಗಿರುವ ಕಾಂಪೆನ್ಸೇಶನ್ ಪ್ಯಾಕೇಜ್ 1 ಟ್ರಿಲಿಯನ್ ಡಾಲರ್ ಮೊತ್ತದ್ದಿದೆ. ವಿಶ್ವದ 500 ಅತಿದೊಡ್ಡ ಕಂಪನಿಗಳ (ಫಾರ್ಚೂನ್ 500) ಸಿಇಒಗಳ ಕಾಂಪೆನ್ಸೇಶನ್ ಅನ್ನು ಒಟ್ಟುಸೇರಿಸಿದರೆ, ಅದರ ಹತ್ತು ಪಟ್ಟು ಹೆಚ್ಚು ಸಂಭಾವನೆಯನ್ನು ಮಸ್ಕ್ ಪಡೆಯುತ್ತಾರೆ.

ಮೈಕ್ರೋಸಾಫ್ಟ್​ನ ಸಿಇಒ ಸತ್ಯ ನಾದೆಲ್ಲಾ ಅವರಿಗೆ ಸಿಕ್ಕಿರುವ ಕಾಂಪೆನ್ಸೇಶನ್ 79.1 ಮಿಲಿಯನ್ ಡಾಲರ್. ಇದು ಸದ್ಯ ಸಿಇಒಗಳ ಪೈಕಿ ಗರಿಷ್ಠ ಸಂಭಾವನೆ. ಆ್ಯಪಲ್ ಸಿಇಒ ಟಿಮ್ ಕುಕ್ ಸಂಭಾವನೆ 74.6 ಮಿಲಿಯನ್ ಡಾಲರ್. ಈ ಎಪ್ಪತ್ತು ಮಿಲಿಯನ್ ಡಾಲರ್ ಸಂಭಾವನೆ ಮಟ್ಟ ದಾಟಿರುವುದು ಇವರಿಬ್ಬರು ಮಾತ್ರವೇ. ಈಗ ಇಲಾನ್ ಮಸ್ಕ್ ಅವರ ಸಂಭಾವನೆಯು ಇವರಿಗಿಂತ ಸಾವಿರ ಪಟ್ಟು ಹೆಚ್ಚಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ