ಬೆಂಗಳೂರು: ಕೆಲವೇ ತಿಂಗಳ ಹಿಂದೆ 18,000 ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಅಮೇಜಾನ್ ಸಂಸ್ಥೆ (Amazon) ಇತ್ತೀಚೆಗೆ ಎರಡನೇ ಸುತ್ತಿನಲ್ಲಿ 11,000 ಮಂದಿಯನ್ನು ಕೆಲಸದಿಂದ ತೆಗೆದಿದೆ (Layoff). ಅದರಲ್ಲಿ 500 ಮಂದಿ ಭಾರತೀಯ ಉದ್ಯೋಗಿಗಳಿಗೆ ಏಪ್ರಿಲ್ ತಿಂಗಳಲ್ಲಿ ಕೆಲಸ ಹೋಗಿದೆ. ಬೆಂಗಳೂರಿನ ಅಮೇಜಾನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮಹಿಳಾ ಉದ್ಯೋಗಿಯೂ ಇದರಲ್ಲಿ ಇದ್ದಾರೆ. ಈಕೆ ಕೆಲಸಕ್ಕೆ ಸೇರಿ ಒಂದು ವರ್ಷ ಮಾತ್ರವೇ ಆಗಿದ್ದುದು. ಸೀನಿಯರ್ ಪ್ರಾಡಕ್ಟ್ ಕಾಂಪ್ಲಿಯನ್ಸ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ ಇವರನ್ನು ಏಕಾಏಕಿ ಲೇ ಆಫ್ ಮಾಡಲಾಗಿದೆ. ಕಾಲೇಜು ಮುಗಿಸಿ ಈಕೆ ಸೇರಿದ ಮೊದಲ ಕೆಲಸ ಇದು. ದಿಢೀರ್ ವಿದ್ಯಮಾನದಿಂದ ಈ ಹುಡುಗಿ ಕಂಗೆಟ್ಟು ಹೋಗಿ ತನ್ನ ಮನದ ವ್ಯಾಕುಲವನ್ನು ಲಿಂಕ್ಡ್ಇನ್ನಲ್ಲಿ ಹಾಕಿಕೊಂಡಿದ್ದಾರೆ.
ಅಮೇಜಾನ್ನ ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ದಿಢೀರ್ ಕೆಲಸ ಹೋಗಿದ್ದು ಭಾವೋದ್ವೇಗಗೊಳ್ಳುವಂತೆ ಮಾಡಿದೆ. ಸಂಕಟ, ಕೋಪ, ಅನಿಶ್ಚಿತತೆ ಇತ್ಯಾದಿ ಭಾವಾವೇಶಗಳಿಂದ ಆವರಿಸಿರುವ ಈ ಯುವತಿ, ತಾನು ನಿರುದ್ಯೋಗಿಯಾಗಿರುವ ಸತ್ಯವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಲಿಂಕ್ಡ್ಇನ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Amazon Layoff: ಅಮೇಜಾನ್ 9,000 ಲೇ ಆಫ್; ಭಾರತದಲ್ಲಿ ಕೆಲಸ ಕಳೆದುಕೊಂಡ 500 ಮಂದಿ
‘ನನ್ನ ಕೆಲಸ ಹೋಯಿತು. ನನ್ನ ಸಹೋದ್ಯೋಗಿಗಳ ಜೊತೆ ನಾನು ರೂಪಿಸಿಕೊಂಡ ಸಂಬಂಧ ಕಡಿತುಹೋಯಿತು. ನನ್ನ ಕೆಲಸದಲ್ಲಿ ನನಗಿದ್ದ ಅಭಿಲಾಷೆಯೂ ಹೋಯಿತು…. ಈ ಪರಿಸ್ಥಿತಿ ಬಗ್ಗೆ ನನಗೆ ಕೋಪ ಇದೆ. ಜೊತೆಗೆ ಭವಿಷ್ಯ ಏನಿದೆಯೋ ಎಂಬ ಅನಿಶ್ಚಿತತೆ ಕಾಡುತ್ತಿದೆ’ ಎಂದು ಈ ಮಾಜಿ ಅಮೇಜಾನ್ ಉದ್ಯೋಗಿ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
‘ಈ ಅನುಭವ ಆಗಿರುವುದು ನನಗೊಬ್ಬಳಿಗೆ ಮಾತ್ರ ಅಲ್ಲ ಎಂಬುದು ಗೊತ್ತು. ಪ್ರತೀ ವರ್ಷವೂ ಹಲವು ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದು ಬಹಳ ಕಷ್ಟಕರ ಸಮಯ. ನನ್ನ ಸ್ನೇಹಿತರು ಮತ್ತು ಕುಟುಂಬ ವರ್ಗದವರ ಬೆಂಬಲಕ್ಕೆ ನಾನು ಋಣಿ. ಈ ಪರಿಸ್ಥಿತಿಯಿಂದ ಹೊರಬರುತ್ತೇನೆ ಎನ್ನುವ ವಿಶ್ವಾಸ ನನಗಿದೆ’ ಎಂದು ತನ್ನ ಲಿಂಕ್ಡ್ಇನ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಯೂನಿವರ್ಸಿಟಿಯಲ್ಲಿ ಓದಿದ ಈ ಯುವತಿ ಇದೀಗ ಬೇರೆ ಕೆಲಸಕ್ಕೆ ಹುಡುಕುತ್ತಿದ್ದಾರೆ.