Amazon Layoff: ಅಮೇಜಾನ್ 9,000 ಲೇ ಆಫ್; ಭಾರತದಲ್ಲಿ ಕೆಲಸ ಕಳೆದುಕೊಂಡ 500 ಮಂದಿ
500 Employees of Amazon India Lose Job: ಜಾಗತಿಕ ಇ-ಕಾಮರ್ಸ್ ದಿಗ್ಗಜ ಅಮೇಜಾನ್ 9,000 ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿದ್ದು, ಅದರ ಭಾಗವಾಗಿ ಭಾರತದಲ್ಲಿ 500 ಮಂದಿ ಕೆಲಸ ಕಳೆದುಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ...
ನವದೆಹಲಿ: ಅಮೇಜಾನ್ ಲೇ ಆಫ್ ಭರಾಟೆಗೆ (Amazon Layoffs) ಭಾರತದಲ್ಲಿ ಅದರ ಸುಮಾರು 500 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ವಿಶ್ವದ ಇ–ಕಾಮರ್ಸ್ ದಿಗ್ಗಜ ಅಮೇಜಾನ್ ಸಂಸ್ಥೆ 9,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಮಾರ್ಚ್ ತಿಂಗಳಲ್ಲಿ ಘೋಷಿಸಿತ್ತು. ಅದರ ಭಾಗವಾಗಿ ವಿವಿಧ ದೇಶಗಳಲ್ಲಿರುವ ಅದರ ಉದ್ಯೋಗಿಗಳನ್ನು ಲೇ ಆಫ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಭಾರತದಲ್ಲಿ ಅಮೇಜಾನ್ನ ವಿವಿಧ ವಿಭಾಗಗಳಿಂದ 500 ಮಂದಿಯನ್ನು ಈಗ ಕೆಲಸದಿಂದ ತೆಗೆದಿರುವುದು ತಿಳಿದುಬಂದಿದೆ.
ವರದಿಗಳ ಪ್ರಕಾರ, ಅಮೇಜಾನ್ನ ವೆಬ್ ಸರ್ವಿಸ್, ಮಾನವ ಸಂಪನ್ಮೂಲ ವಿಭಾಗ ಮತ್ತು ಕಸ್ಟಮರ್ ಸಪೋರ್ಟ್ ವಿಭಾಗಗಳಿಂದ ಹೆಚ್ಚಿನ ಉದ್ಯೋಗಿಗಳನ್ನು ತೆಗೆಯಲಾಗಿದೆ. ಭಾರತದಲ್ಲಿ ಅಮೇಜಾನ್ನ ಲೇ ಆಫ್ ಇಷ್ಟಕ್ಕೆ ನಿಲ್ಲುತ್ತದೆ ಎನ್ನುವುದು ಖಾತ್ರಿ ಇಲ್ಲ. ಜಾಗತಿಕವಾಗಿ 9,000 ಜಾಬ್ ಕಟ್ ಮಾಡುತ್ತಿರುವ ಅಮೇಜಾನ್ ಸಂಸ್ಥೆ ಭಾರತದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಕಡಿತ ಮಾಡುವ ಸಾಧ್ಯತೆ ಇಲ್ಲದಿಲ್ಲ.
ಇದನ್ನೂ ಓದಿ: PVR Inox: 50 ಸಿನಿಮಾ ಹಾಲ್ ಮುಚ್ಚಲಿರುವ ಪಿವಿಆರ್ ಐನಾಕ್ಸ್; ಭಾರೀ ನಷ್ಟ ಕಾರಣ- ಹಿಂದಿ ಚಿತ್ರಗಳನ್ನು ನೋಡೋರಿಲ್ಲವಾ?
ಅಮೇಜಾನ್ ಸೇರಿದಂತೆ ಜಾಗತಿಕ ಇಕಾಮರ್ಸ್ ಸಂಸ್ಥೆಗಳು ಕಳೆದ ವರ್ಷ ಹಿನ್ನಡೆ ಅನುಭವಿಸುತ್ತಿವೆ. ಇ–ಕಾಮರ್ಸ್ ಕ್ಷೇತ್ರವೇ ಕುಂಠಿತಗೊಂಡಿದೆ. ಜನರು ಆನ್ಲೈನ್ ಶಾಪಿಂಗ್ ಮಾಡುವ ಪ್ರಮಾಣ ಕಡಿಮೆ ಆಗಿದೆ. ಕೋವಿಡ್ ಮುಂಚೆ ಇದ್ದ ಸ್ಥಿತಿ ಬರುತ್ತಿದೆ. ಇದು ಅಮೇಜಾನ್ ಕಳೆದ ವರ್ಷ ಹಿನ್ನಡೆ ಕಾಣಲು ಕಾರಣವಾದರೆ, ಮುಂಬರುವ ದಿನಗಳು ಜಾಗತಿಕ ಆರ್ಥಿಕ ಹಿಂಜರಿತದ ಸ್ಥಿತಿ ಕಾಣಲಿರುವುದರಿಂದ ಅಮೇಜಾನ್ಗೆ ಹೆಚ್ಚಿನ ಅಪಾಯ ಕಾದಿದೆ. ಈ ಹಿನ್ನೆಲೆಯಲ್ಲಿ ಅದು ತನ್ನ ಪ್ರಮುಖ ವೆಚ್ಚಗಳನ್ನು ಕಡಿಮೆ ಮಾಡುತ್ತಿದೆ. ಈ ಹಿಂದೆ ಜನವರಿಯಲ್ಲಿ 18,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದಾಗಿ ಅಮೇಜಾನ್ ಘೋಷಿಸಿತ್ತು.
ಇ–ಕಾಮರ್ಸ್ ಕಂಪನಿಗಳು ಮಾತ್ರವಲ್ಲ ಗೂಗಲ್, ಮೆಟಾ, ಐಬಿಎಂ ಇತ್ಯಾದಿ ಟೆಕ್ ಕಂಪನಿಗಳು ಲೇ ಆಫ್ ಮಾಡುತ್ತಿವೆ.