ನವದೆಹಲಿ, ಆಗಸ್ಟ್ 30: ಸಿರಿತನ ಎನ್ನುವುದು ಮಾಯೆ. ಯಾವಾಗ ಕೈಹಿಡಿಯುತ್ತೆ, ಯಾವಾ ಕೈಬಿಡುತ್ತೆ ಪತ್ತೆ ಮಾಡುವುದು ಕಷ್ಟವೇ. ಇವತ್ತು ಪ್ರಜ್ವಲಿಸುವ ಕ್ಷೇತ್ರ ಮುಂದಿನ ದಿನಗಳಲ್ಲಿ ಕತ್ತಲೆಗೆ ಜಾರಬಹುದು. ಈ ಹಿಂದೆ ಇಂಥದ್ದು ಹಲವು ಆಗಿರುವುದುಂಟು. ಅದಕ್ಕೆ ಉದಾಹರಣೆ ಎರಡು, ಮೂರು ದಶಕದ ಹಿಂದಿನ ಡಾಟ್ ಕಾಮ್ ಉಬ್ಬರ. ಅಂದಿನ ಸಂದರ್ಭದಲ್ಲಿ ಡಾಟ್ ಕಾಮ್ ಟ್ರೆಂಡಿಂಗ್ ಬಹಳವೇ ಇದ್ದವು. ಆದರೆ, 2000ದ ದಶಕದ ಆರಂಭದಲ್ಲಿ ಈ ಡಾಟ್ ಕಾಮ್ ಉಬ್ಬರ ಠುಸ್ ಆಗಿ ಹೋಗಿ ಬಹಳಷ್ಟು ಕಂಪನಿಗಳು ನಾಮಾವಶೇಷವಾಗಿ ಹೋಗಿದ್ದವು. ಕೋಟ್ಯಾಧಿಪತಿಗಳಾಗಿ ಭವ್ಯ ಕನಸುಗಳನ್ನು ಕಟ್ಟಿಕೊಂಡವರು ಬೀದಿಗೆ ಬೀಳುವಂತಾಯಿತು. ಅಂಥವರ ಸಾಲಿಗೆ ಅನುಪಮ್ ಮಿಟ್ಟಲ್ ಹೆಸರು ಸೇರಿಸಬಹುದು. ಇವರು ಬೀದಿಗೆ ಬಿದ್ದರೂ ಬಳಿಕ ಚೇತರಿಸಿಕೊಂಡಿದ್ದು ಹೌದು. ಇದೀಗ ಅವರು ಅಂದಿನ ಕುಸಿತದ ದಿನಗಳನ್ನು ಸ್ಮರಿಸಿದ್ದಾರೆ.
ಡಾಟ್ ಕಾಮ್ ಟ್ರೆಂಡ್ನ ಲಾಭ ಮಾಡಿದವರಲ್ಲಿ ಅನುಪಮ್ ಮಿಟ್ಟಲ್ ಒಬ್ಬರು. ತಮ್ಮ ಲಿಂಕ್ಡ್ಇನ್ ಪೋಸ್ಟ್ನಲ್ಲಿ ಅವರು ತಮ್ಮ ಸೋಲಿನ ಕಥೆಗಳನ್ನು ಸ್ಮರಿಸಿದ್ದಾರೆ.
‘ಮೈಕ್ರೋಸ್ಟ್ರಾಟಿಜಿ ಕಂಪನಿಯ ಭಾಗವಾಗಿ ನಾನು ಓಡುತ್ತಿದ್ದೆ. 40 ಬಿಲಿಯನ್ ಡಾಲರ್ ವ್ಯಾಲ್ಯುಯೇಶನ್ ಅದು. ಅಮೆರಿಕದಲ್ಲಿನ ಜೀವನ ಒಂದು ಕನಸಿನಂತೆ ಇತ್ತು. ಫೆರಾರಿ ಕಾರನ್ನೂ ಖರೀದಿಸಿದೆ. ಆದರೆ, ಅದೆಲ್ಲವೂ ಬಂದಷ್ಟೇ ವೇಗದಲ್ಲಿ ಮಾಯವಾಯಿತು. ಡಾಟ್ ಕಾಮ್ ಬಬಲ್ ಸ್ಫೋಟವಾಗಿತ್ತು. ಹಣ ಹೊರಟುಹೋಯಿತು. ಭಾರೀ ಸಾಲ ಉಳಿದುಕೊಂಡಿತು.
ಇದನ್ನೂ ಓದಿ: ಶ್ರೀಮಂತಿಕೆಯಲ್ಲಿ ಅಂಬಾನಿಯನ್ನು ಹಿಂದಿಕ್ಕಿದ ಅದಾನಿ; ಬಿಲಿಯನೇರ್ಸ್ ಪಟ್ಟಿಗೆ ಶಾರುಖ್ ಸೇರ್ಪಡೆ
‘2003ರಲ್ಲಿ ಭಾರತಕ್ಕೆ ಬಂದಾಗ ನನ್ನಲ್ಲಿ ಇದ್ದದ್ದು ದೊಡ್ಡ ಗೆಲುವು ಮತ್ತು ದೊಡ್ಡ ಸೋಲಿನ ಸ್ಮರಣೆ ಮಾತ್ರವೇ. ನಾವು ಪ್ರಯಾಣ ನಿಲ್ಲಿಸಲಿಲ್ಲ. ಎಲ್ಲವೂ ಸೋತವನ ಬಳಿ ಇರುವ ಛಲ ನನ್ನನ್ನು ಶಾದಿ ಡಾಟ್ ಕಾಮ್ ಮೊದಲಾದ ಸಂಸ್ಥೆಗಳನ್ನು ಕಟ್ಟಲು ಎಡೆ ಮಾಡಿಕೊಟ್ಟಿತು’ ಎಂದು ಮಿಟ್ಟಲ್ ಬರೆದಿದ್ದಾರೆ.
ಮದುವೆಯಾಗಲು ಬಯಸುವವರಿಗೆ ಪ್ಲಾಟ್ ಫಾರ್ಮ್ ಆಗಿ ಶಾದಿ ಡಾಟ್ ಕಾಮ್ ಅನ್ನು ಆರಂಭಿಸಲು ಅನುಪಮ್ ಮಿಟ್ಟಲ್ ನಿರ್ಧರಿಸಿದ್ದರು. ಆಗ ಅವರ ಬಳಿ ಇದ್ದ ಬಂಡವಾಳ 30,000 ಡಾಲರ್ ಮಾತ್ರವೇ. ಅದರೆ, ಅಂದಿನ ಕಾಲಕ್ಕೆ ಡೊಮೈನ್ ಬೆಲೆ 25,000 ಡಾಲರ್ ಇತ್ತು. ಅದೊಂದು ರೀತಿಯಲ್ಲಿ ಮಾಡು ಇಲ್ಲವೇ ಮಡಿ ಸ್ಥಿತಿ.
ಇದನ್ನೂ ಓದಿ: ದುಡ್ಡಿದ್ದರೂ ಅನುಭವಿಸಲು ಸಮಯ ಇಲ್ಲ; ‘ಪ್ರೆಷರ್’ ಕುಕ್ಕರ್ನಲ್ಲಿ ಬೇಯುತ್ತಿದ್ದಾರೆ ಈ ಕಂಪನಿ ಉದ್ಯೋಗಿಗಳು
‘ಜನರು ನನ್ನನ್ನು ಹುಚ್ಚ ಎಂದರು. ನನ್ನ ಬಿಸಿನೆಸ್ ಗ್ರಹಿಕೆಯನ್ನು ಪ್ರಶ್ನಿಸಿದರು. ಆದರೆ, ನನಗೆ ಅದು (ಶಾದಿ ಡಾಟ್ ಕಾಮ್) ಗೇಮ್ ಚೇಂಜರ್ ಎನಿಸಿತು. ಧೈರ್ಯವಾಗಿ ಮುನ್ನಡೆದೆ. ನಾನಂದುಕೊಂಡಿದ್ದು ನಿಜವಾಯಿತು’ ಎಂದು ಲಿಂಕ್ಡ್ಇನ್ ಪೋಸ್ಟ್ನಲ್ಲಿ ಅನುಪಮ್ ಮಿಟ್ಟಲ್ ಹೇಳಿದ್ದಾರೆ.
‘ನನಗೆ ಅದು ಹಣಕ್ಕೆ ಸಂಬಂಧಿಸಿದ ವಿಷಯವಾಗಿರಲಿಲ್ಲ. ಪಾತಾಳದಿಂದ ಮೇಲೆದ್ದು ಬರಬಲ್ಲೆ ಎನ್ನುವುದನ್ನು ಸಾಬೀತುಪಡಿಸಿಕೊಳ್ಳಬೇಕಿತ್ತು. ನನ್ನ ಉದ್ಯಮಶೀಲತೆ ಗುಣವು ಯಾವುದೋ ಒಂದು ಯಶಸ್ಸು ಅಥವಾ ಸೋಲಿಗೆ ಅಂಟಿಕೊಂಡಿರುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕಿತ್ತು. ಅದೇ ಮನಸ್ಥಿತಿಯಲ್ಲಿ ಇವತ್ತೂ ಕೆಲಸ ಮಾಡುತ್ತೇನೆ’ ಎಂದಿದ್ದಾರೆ ಶಾದಿ ಡಾಟ್ ಕಾಮ್ ಸಂಸ್ಥಾಪಕರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ