AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಡ್ಡಿದ್ದರೂ ಅನುಭವಿಸಲು ಸಮಯ ಇಲ್ಲ; ‘ಪ್ರೆಷರ್’ ಕುಕ್ಕರ್​ನಲ್ಲಿ ಬೇಯುತ್ತಿದ್ದಾರೆ ಈ ಕಂಪನಿ ಉದ್ಯೋಗಿಗಳು

Nvidia work culture: ಅಮೆರಿಕದ ಚಿಪ್, ರೋಬೋಟಿಕ್ಸ್ ತಯಾರಿಸುವ ಎನ್​ವಿಡಿಯಾ ಕಂಪನಿಯಲ್ಲಿ ಕೆಲಸ ಮಾಡುವುದು ಪ್ರೆಷರ್ ಕುಕ್ಕರ್​ನಲ್ಲಿ ಕೂತಂತಿರುತ್ತದೆ ಎಂದು ಹೇಳಲಾಗುತ್ತಿದೆ. ಮಾಜಿ ಉದ್ಯೋಗಿಗಳು ಸೇರಿದಂತೆ ವಿವಿಧ ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್​ಬರ್ಗ್ ವರದಿ ಮಾಡಿದೆ. ಇಲ್ಲಿನ ಉದ್ಯೋಗಿಗಳು ಶ್ರೀಮಂತಿಕೆ ಪಡೆದರೂ ಆ ಖುಷಿ ಅನುಭವಿಸಲು ಸಮಯವೇ ಸಿಗುತ್ತಿಲ್ಲ. ಒಂದು ದಿನವೂ ರಜೆ ಇಲ್ಲ. ಮಧ್ಯರಾತ್ರಿವರೆಗೂ ಕೆಲಸ.

ದುಡ್ಡಿದ್ದರೂ ಅನುಭವಿಸಲು ಸಮಯ ಇಲ್ಲ; ‘ಪ್ರೆಷರ್’ ಕುಕ್ಕರ್​ನಲ್ಲಿ ಬೇಯುತ್ತಿದ್ದಾರೆ ಈ ಕಂಪನಿ ಉದ್ಯೋಗಿಗಳು
ನಿವಿಡಿಯಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 28, 2024 | 6:21 PM

Share

ಕ್ಯಾಲಿಫೋರ್ನಿಯಾ, ಆಗಸ್ಟ್ 28: ಜಗತ್ತಿನ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲೊಂದಾದ ನಿವಿಡಿಯಾ ಷೇರುಮಾರುಕಟ್ಟೆಯಲ್ಲಿ ಇತ್ತೀಚೆಗೆ ಅಕ್ಷರಶಃ ಧೂಳೆಬ್ಬಿಸಿದೆ. ಆರ್ಟಿಫಿಶಿಯಲ್ ತಂತ್ರಜ್ಞಾನದ ಕ್ರೇಜ್​ನಲ್ಲಿ ಷೇರುಪೇಟೆ ಜನರು ಹುಚ್ಚೆದ್ದು ಈ ಕಂಪನಿಯ ಬೆನ್ನುಬಿದ್ದಿದ್ದಾರೆ. ತೈವಾನ್ ಮೂಲದ ಅಮೆರಿಕನ್ ಉದ್ಯಮಿ ಜೆನ್ಸೆನ್ ಹುವಾಂಗ್ ಮಾಲಕತ್ವದ ನಿವಿಡಿಯಾ ಮಾರುಕಟ್ಟೆ ಸಂಪತ್ತಿನಲ್ಲಿ ಮೈಕ್ರೋಸಾಫ್ಟ್, ಆ್ಯಪಲ್​ಗೆ ಪೈಪೋಟಿ ನೀಡುತ್ತಿದೆ. ಈ ಕಂಪನಿಯ ಹಲವು ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಿ ಹೋಗಿದ್ದಾರೆ. ದುರ್ದೈವ ಎಂದರೆ ತಮಗೆ ಸಿಕ್ಕ ಸಖತ್ ಸಂಪತ್ತನ್ನು ಅನುಭವಿಸಲು ಇವರಿಗೆ ಸಮಯವೂ ಇಲ್ಲ ಮನಸ್ಥಿತಿಯೂ ಇಲ್ಲವಾಗಿದೆ. ಅಷ್ಟರಮಟ್ಟಿಗೆ ಇವರು ನಿವಿಡಿಯಾ ಕಂಪನಿಯೊಳಗೆ ಬೆಂದು ಹೋಗುತ್ತಿದ್ದಾರೆ ಎಂದು ಬ್ಲೂಮ್​ಬರ್ಗ್ ಸಂಸ್ಥೆ ವರದಿ ಮಾಡಿದೆ.

ನಿವಿಡಿಯಾ ಸಂಸ್ಥಾಪಕರು ಮತ್ತು ಸಿಇಒ ಆಗಿರುವ ಜೆನ್ಸನ್ ಹುವಾಂಗ್ ಪಕ್ಕಾ ಟ್ಯಾಸ್ಕ್ ಮಾಸ್ಟರ್. ಸಾಕಷ್ಟು ಸಂದರ್ಶನದಲ್ಲಿ ಅವರು ದುಡಿಮೆಯೇ ಸರ್ವಸ್ವ ಎಂದು ಹೇಳಿಕೊಂಡಿದ್ದಾರೆ. ತಾನು ಎದ್ದ ಗಳಿಗೆಯಿಂದ ಹಿಡಿದು ಮಲಗುವವರೆಗೂ ನಿರಂತರವಾಗಿ ಕಂಪನಿಯ ಕಾಯಕದಲ್ಲಿ ತೊಡಗಿಸಿಕೊಂಡಿರುವಷ್ಟು ಅವರು ಟ್ಯಾಸ್ಕ್ ಮಾಸ್ಟರ್. ತಾನು ಹಾಕುತ್ತಿರುವ ಶ್ರಮದಲ್ಲಿ ತಕ್ಕ ಮಟ್ಟಿಗಾದರೂ ಉದ್ಯೋಗಿಗಳೂ ತೋರಬೇಕು ಎಂಬುದು ಅವರ ನಿರೀಕ್ಷೆ. ಇದು ಅಲ್ಲಿನ ಉದ್ಯೋಗಿಗಳನ್ನು ಹೈರಾಣಾಗಿಸಿದೆ ಎಂದು ಬ್ಲೂಮ್​ಬರ್ಗ್ ಬೇರೆ ಬೇರೆ ಮೂಲಗಳಿಂದ ಮಾಹಿತಿ ಪಡೆದು ವರದಿ ಮಾಡಿದೆ.

ಇದನ್ನೂ ಓದಿ: ಸ್ವಿಗ್ಗಿ ಶುರುವಾದ ಮೊದಲ ದಿನ ಗಳಿಸಿದ್ದು ಸೊನ್ನೆ; ಐಪಿಒಗೆ ಮುನ್ನ ಕೆಲ ರಹಸ್ಯ ಬಿಚ್ಚಿಟ್ಟ ಸಿಇಒ ಶ್ರೀಹರ್ಷ

ಪ್ರೆಷರ್ ಕುಕ್ಕರ್, ವಾರಕ್ಕೆ ಏಳು ದಿನ ಮಧ್ಯರಾತ್ರಿವರೆಗೂ ಕೆಲಸ ಅಂದ್ರೆ ತಮಾಷೆನಾ?

ನಿವಿಡಿಯಾ ಕಂಪನಿಯೊಳಗೆ ಕೆಲಸ ಮಾಡುವುದೆಂದರೆ ಪ್ರೆಷರ್ ಕುಕ್ಕರ್​ನಲ್ಲಿ ಬೆಂದಂಥ ಅನುಭವ ಎಂದು ಮಾಜಿ ಉದ್ಯೋಗಿಗಳು ವರ್ಣಿಸಿದ್ದಾರೆ. ಸಿಇಒ ತಮ್ಮ ಉದ್ಯೋಗಿಗಳಿಂದ ಬಹಳ ಹೆಚ್ಚಿನ ಮಟ್ಟದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ತಾನು ವಾರಕ್ಕೆ ಏಳು ದಿನವೂ ಕೆಲಸ ಮಾಡಬೇಕಾಗುತ್ತಿತ್ತು. ಅಷ್ಟೇ ಅಲ್ಲ, ಪ್ರತೀ ದಿನ ರಾತ್ರಿ 2 ಗಂಟೆಯವರೆಗೂ ಕೆಲಸ ಮಾಡುತ್ತಿದ್ದೆ. ಎಂಜಿನಿಯರಿಂಗ್ ವಿಭಾಗದ ಸಹೋದ್ಯೋಗಿಗಳಂತೂ ಇನ್ನೂ ಹೆಚ್ಚು ಹೊತ್ತು ಕೆಲಸ ಮಾಡುತ್ತಿರುತ್ತಾರೆ ಎಂದು ಮಾಜಿ ಉದ್ಯೋಗಿಯೊಬ್ಬರು ಹೇಳಿದ್ದಾಗಿ ಬ್ಲೂಮ್​ಬರ್ಗ್ ವರದಿ ಮಾಡಿದೆ.

ಕಂಪನಿ ಮೀಟಿಂಗ್​ಗಳಲ್ಲಿ ಫೈಟಿಂಗ್…!

ಒತ್ತಡಯುಕ್ತ ಕೆಲಸದ ವಾತಾವರಣದ ಪರಿಣಾಮವಾಗಿ ಕಂಪನಿ ಮೀಟಿಂಗ್​ಗಳಲ್ಲಿ ಸಹೋದ್ಯೋಗಿಗಳ ಮಧ್ಯೆ ಜಗಳ ತಪ್ಪುತ್ತಿರಲಿಲ್ಲ ಎನ್ನುತ್ತಾ ಮಾಜಿ ಮಹಿಳಾ ಉದ್ಯೋಗಿಯೊಬ್ಬರು.

ಈಕೆ 2022ರಲ್ಲಿ ಕಂಪನಿ ತೊರೆದಿದ್ದಾಳೆ. ಅಲ್ಲಿ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದ ಈಕೆ ದಿನವೂ 10 ಮೀಟಿಂಗ್​ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅದರಲ್ಲಿ ಹೆಚ್ಚಾಗಿ ಕಿರಿಚಾಟ, ಜಗಳವೇ ತುಂಬಿರುತ್ತಿತ್ತು ಎನ್ನುತ್ತಾರೆ.

ಇದನ್ನೂ ಓದಿ: ಎಂಟು ಸಿಬ್ಬಂದಿ ಇರುವ ಕಂಪನಿ ಐಪಿಒನಲ್ಲಿ ಕೇಳಿದ್ದು 12 ಕೋಟಿ ರೂ, ಜನರು ಕೊಡಲು ಮುಂದಾಗಿದ್ದು 4,800 ಕೋಟಿ ರೂ; ಇದೇನು ಕಥೆ..!

ಹಣಕ್ಕೆ ಕಟ್ಟುಬಿದ್ದು ಕೆಲಸ ಬಿಡಲಾಗುತ್ತಿಲ್ಲ…

ಇಷ್ಟೊಂದು ಪ್ರೆಷರ್ ಇರುವ ಕೆಲಸಕ್ಕೆ ತಿಲಾಂಜಲಿ ಹೇಳೋಣ ಎಂದರೆ ದಂಡಿಯಾಗಿ ಸಂಬಳ ಬರುತ್ತದೆ. ಇದೊಂದು ರೀತಿಯಲ್ಲಿ ಉದ್ಯೋಗಿಗಳಿಗೆ ಅಗಿಯಲೂ ಆಗದ, ನುಂಗಲೂ ಆಗದಂತಹ ಸ್ಥಿತಿ. ಬೇರೆ ಕಂಪನಿಗೆ ಹೋದರೆ ಇಷ್ಟೊಂದು ಸಂಬಳ ಸಿಕ್ಕೋದಿಲ್ಲ. ಹೀಗಾಗಿ ಯಾರೂ ಕೂಡ ಕೆಲಸ ಬಿಡುವ ಕಡೆ ಯೋಚಿಸುತ್ತಿಲ್ಲ. ಮುಂದೆ ಕಾಲ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಿದ್ದಂತೆ ಅನಿಸುತ್ತದೆ.

ಸಾಮಾನ್ಯ ಉದ್ಯೋಗಿಯನ್ನೂ ಬಿಡದ ಸಿಇಒ

ನಿವಿಡಿಯಾದ ಸಿಇಒ ಜೆನ್ಸನ್ ಹುವಾಂಗ್ ಪ್ರತಿಯೊಬ್ಬ ಉದ್ಯೋಗಿಯ ಕೈಯಿಂದಲೂ ಕೆಲಸ ತೆಗೆಸುವ ಛಾತಿ ಉಳ್ಳವರು. ಅವರು ಯಾವತ್ತೂ ಕೂಡ ಲೇ ಆಫ್ ಮಾಡುವ ಜಾಯಮಾನದವರಲ್ಲ. ಕೆಲಸ ಬಾರದ ಉದ್ಯೋಗಿಯನ್ನೂ ಅವರು ಬಿಟ್ಟು ಕಳುಹಿಸುವುದಿಲ್ಲ. ಬದಲಾಗಿ, ಆತನಿಗೆ ಕೆಲಸ ಕಲಿಸಿ, ಭರ್ಜರಿಯಾಗಿ ದುಡಿಸಿಕೊಳ್ಳುವಂಥವರು ಹುವಾಂಗ್.

ಇದನ್ನೂ ಓದಿ: ಮನೆ ಬೆಲೆ ಹೆಚ್ಚಳ: ಭಾರತದ ಟಾಪ್ 3 ಪ್ರದೇಶಗಳಲ್ಲಿ ಬೆಂಗಳೂರಿನ ಬಾಗಲೂರು, ವೈಟ್​ಫೀಲ್ಡ್; ಯಾಕಿಷ್ಟು ಏರಿಕೆ ಆಗ್ತಿದೆ ಗೊತ್ತಾ?

ನಿವಿಡಿಯಾದ ಪ್ರತಿಯೊಬ್ಬ ಉದ್ಯೋಗಿ ಕೂಡ ತಾವೇನು ಕೆಲಸ ಮಾಡುತ್ತಿದ್ದೇವೆ ಎಂದು ಐದು ಅಂಶಗಳಲ್ಲಿ ತಿಳಿಸಿ ಇಮೇಲ್ ಕಳುಹಿಸಬೇಕು. ಹಲವು ಬಾರಿ ಸಿಇಒ ಅವರು ಸಾಮಾನ್ಯ ಉದ್ಯೋಗಿಯ ಈ ಇಮೇಲ್​ಗೆ ಸ್ಪಂದಿಸುವುದುಂಟು. ಇದೊಂದು ರೀತಿಯಲ್ಲಿ ಉದ್ಯೋಗಿಗಳೊಳಗೆ ಕಠಿಣ ಸ್ಪರ್ಧೆ ಹುಟ್ಟುಹಾಕಿದೆ. ಸಿಇಒ ಗಮನ ಸೆಳೆಯಲು ಪ್ರತಿಯೊಬ್ಬರೂ ಇನ್ನಿಲ್ಲದಂತೆ ಕಸರತ್ತು ನಡೆಸುತ್ತಾರಂತೆ. ಇದು ಸಕಾರಾತ್ಮಕ ವಾತಾವರಣವೋ, ಟಾಕ್ಸಿಕ್ ವಾತಾವರಣವೋ ಖಂಡಿತವಾಗಿ ಗೊತ್ತಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ