ಸಿಗ್ನಲ್ ಇಲ್ಲದಿದ್ದರೂ ಉಚಿತವಾಗಿ ಎಮರ್ಜೆನ್ಸಿ ಸರ್ವಿಸ್; ಸ್ಟಾರ್ಲಿಂಕ್ ಆಫರ್
Starlink free emergency service: ಮೊಬೈಲ್ ಸಿಗ್ನಲ್ ಸಿಗದೇ ಇರುವಂಥ ಜಾಗದಲ್ಲೂ ತುರ್ತು ಸೇವೆಗಳಿಗೆ ಸಂಪರ್ಕಿಸಲು ಸಾಧ್ಯವಾಗುವಂತೆ ಸ್ಟಾರ್ಲಿಂಕ್ ಪ್ರಯತ್ನಿಸುತ್ತಿದೆ. ಎಮರ್ಜೆನ್ಸಿ ಸರ್ವಿಸ್ ಅನ್ನು ಯಾವುದೇ ಮೊಬೈಲ್ನಿಂದಲೂ ಉಚಿತವಾಗಿ ಬಳಸುವಂಥ ಫೀಚರ್ ಅನ್ನು ಸ್ಟಾರ್ ಲಿಂಕ್ ನೀಡುತ್ತಿದೆ. ಜಗತ್ತಿನಾದ್ಯಂತ ಇದು ಲಭ್ಯ ಇರಲಿದೆ. ಆಯಾ ದೇಶಗಳ ಸರ್ಕಾರಗಳಿಂದ ಇದಕ್ಕೆ ಅನುಮೋದನೆ ಸಿಗಬೇಕು.
ನವದೆಹಲಿ, ಆಗಸ್ಟ್ 29: ಕಾಡು, ಜನವಸತಿ ಇಲ್ಲದ ಪ್ರದೇಶ ಇತ್ಯಾದಿ ಮೊಬೈಲ್ ಸಿಗ್ನಲ್ಗಳು ತಲುಪದೇ ಇರುವ ಸ್ಥಳಗಳಲ್ಲಿ ಯಾರಾದರೂ ಸಿಲುಕಿಕೊಂಡಿದ್ದರೆ ಇತರ ಸಂಪರ್ಕ ಬಹಳ ಕಷ್ಟ. ಪ್ರವಾಹ ಇತ್ಯಾದಿ ತುರ್ತು ಸ್ಥಿತಿಯಲ್ಲಿದ್ದರಂತೂ ಏನು ಮಾಡಬೇಕೆಂದು ದಿಕ್ಕು ತೋಚದಂತಾಗುತ್ತದೆ. ಇಲಾನ್ ಮಸ್ಕ್ ಅವರ ಸ್ಪೇಸ್ಎಕ್ಸ್ನ ಅಂಗ ಸಂಸ್ಥೆಯಾದ ಸ್ಟಾರ್ಲಿಂಕ್ ಇದೀಗ ಜಗತ್ತಿನಾದ್ಯಂತ ಉಚಿತವಾಗಿ ಎಮರ್ಜೆನ್ಸಿ ಸರ್ವಿಸ್ ಒದಗಿಸುವುದಾಗಿ ಆಫರ್ ಮಾಡಿದೆ.
ಜಗತ್ತಿನ ಯಾವುದೇ ಮೂಲೆಯಲ್ಲೂ ಯಾವುದೇ ಮೊಬೈಲ್ ಫೋನ್ನಿಂದ ಉಚಿತವಾಗಿ ಎಮರ್ಜೆನ್ಸಿ ಸರ್ವಿಸ್ ಬಳಸಲು ಅವಕಾಶ ಕೊಡುತ್ತೇವೆ ಎಂದು ಇಲಾನ್ ಮಸ್ಕ್ ಹೇಳಿದ್ದಾರೆ. ಈ ಸರ್ವಿಸ್ ಪಡೆಯಲು ಸ್ಟಾರ್ಲಿಂಕ್ನ ಸಬ್ಸ್ಕ್ರೈಬರ್ ಆಗಬೇಕಿಲ್ಲ. ಯಾವ ಮೊಬೈಲ್ನಿಂದಲಾದರೂ ಈ ಸೇವೆ ಪಡೆಯಬಹುದು. ಮೊಬೈಲ್ ನೆಟ್ವರ್ಕ್ ಇಲ್ಲದ ಡೆಡ್ ಝೋನ್ಗಳಲ್ಲಿಯೂ ಸ್ಟಾರ್ಲಿಂಕ್ನ ಎಮರ್ಜೆನ್ಸಿ ಸರ್ವಿಸ್ ಪಡೆಯಬಹುದು.
ಇದನ್ನೂ ಓದಿ: ದುಡ್ಡಿದ್ದರೂ ಅನುಭವಿಸಲು ಸಮಯ ಇಲ್ಲ; ‘ಪ್ರೆಷರ್’ ಕುಕ್ಕರ್ನಲ್ಲಿ ಬೇಯುತ್ತಿದ್ದಾರೆ ಈ ಕಂಪನಿ ಉದ್ಯೋಗಿಗಳು
ಈ ಸರ್ವಿಸ್ ಅನ್ನು ಎಲ್ಲರಿಗೂ ಉಚಿತವಾಗಿ ಕೊಡುವುದಾಗಿ ಸ್ಟಾರ್ ಲಿಂಕ್ ಹೇಳಿದೆಯಾದರೂ ಆಯಾ ದೇಶಗಳ ಸರ್ಕಾರಗಳಿಂದ ಅನುಮೋದನೆ ಸಿಗಬೇಕಿದೆ. ಭಾರತ ಸರ್ಕಾರ ಅನುಮೋದನೆ ನೀಡಿದಲ್ಲಿ ದೇಶದ ಯಾವುದೇ ಮೂಲೆಯಲ್ಲಾದರೂ ಮೊಬೈಲ್ ಸಿಗ್ನಲ್ ಬಾರದೇ ಹೋದರೂ ಫೈರ್ ಆಂಬುಲೆನ್ಸ್, ಪೊಲೀಸ್ ಕಂಟ್ರೋಲ್ ರೂಮ್ ಇತ್ಯಾದಿ ಎಮರ್ಜೆನ್ಸಿ ಸರ್ವಿಸ್ ಪಡೆಯುವ ಅವಕಾಶವನ್ನು ಸ್ಟಾರ್ಲಿಂಕ್ ನೀಡುತ್ತದೆ.
ಸ್ಟಾರ್ಲಿಂಕ್ ಸಂಸ್ಥೆ ಸೆಟಿಲೈಟ್ ಇಂಟರ್ನೆಟ್ ಸೇವೆ ಒದಗಿಸುತ್ತದೆ. ಭಾರತದಲ್ಲೂ ಇದು ಲೈಸೆನ್ಸ್ಗಾಗಿ ಪ್ರಯತ್ನಿಸಲು ಯೋಜಿಸುತ್ತಿದೆ. ಸೆಲ್ಯೂಲಾರ್ ನೆಟ್ವರ್ಕ್ ಬಳಸದೇ ಇದು ನೇರವಾಗಿ ಸೆಟಿಲೈಟ್ ಮೂಲಕ ಇಂಟರ್ನೆಟ್ ಪಡೆಯುತ್ತದೆ. ಯಾವುದೇ ಕಡೆ ಇದ್ದರೂ ಸ್ಟಾರ್ಲಿಂಕ್ನ ಸೆಟಿಲೈಟ್ ಇಂಟರ್ನೆಟ್ ಕೆಲಸ ಮಾಡುತ್ತದೆ.
ಇದಕ್ಕೆಂದೇ ತಯಾರಿಸಲಾದ 130 ಸೆಟಿಲೈಟ್ಗಳನ್ನು ಈವರೆಗೂ ಭೂ ಕಕ್ಷೆಗೆ ಸೇರಿಸಲಾಗಿದೆ. ಇನ್ನೂ ಹಲವು ಸೆಟಿಲೈಟ್ಗಳನ್ನು ಲಾಂಚ್ ಮಾಡುವ ಉದ್ದೇಶದಲ್ಲಿ ಸ್ಪೇಸ್ ಎಕ್ಸ್ ಇದೆ.
ಇದನ್ನೂ ಓದಿ: 4 ದಿನ ಬಂದ್ ಆಗಿರಲಿದೆ ಪಾಸ್ಪೋರ್ಟ್ ಸೇವಾ ಪೋರ್ಟಲ್; ಮುಂಗಡ ಬುಕಿಂಗ್ ಸ್ಥಗಿತ; ತಾಂತ್ರಿಕ ನಿರ್ವಹಣೆ ಕಾರಣ
ಇನ್ನು, ಎಮರ್ಜೆನ್ಸಿ ಸರ್ವಿಸ್ನ ಫೀಚರ್ ಅನ್ನು ವಿಸ್ತೃತವಾಗಿ ಪರೀಕ್ಷಿಸಲಾಗಿದೆ. ಎಲ್ಲಾ ವಾತಾವರಣಗಳಲ್ಲೂ ಇದರ ಬಳಕೆ ಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ. ಅಮೆರಿಕಾ ಸರ್ಕಾರ ಅನುಮೋದನೆ ಕೊಟ್ಟರೆ ಆ ದೇಶದಲ್ಲಿ ಇದರ ಸೇವೆ ಚಾಲನೆಗೆ ಬರಲಿದೆ. ಆ ಬಳಿಕ ಜಗತ್ತಿನಾದ್ಯಂತ ಆಯಾ ದೇಶಗಳ ಸರ್ಕಾರದ ಅನುಮೋದನೆ ಪ್ರಕಾರ ಇದು ಲಭ್ಯ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ