ಮನೆ ಬೆಲೆ ಹೆಚ್ಚಳ: ಭಾರತದ ಟಾಪ್ 3 ಪ್ರದೇಶಗಳಲ್ಲಿ ಬೆಂಗಳೂರಿನ ಬಾಗಲೂರು, ವೈಟ್ಫೀಲ್ಡ್; ಯಾಕಿಷ್ಟು ಏರಿಕೆ ಆಗ್ತಿದೆ ಗೊತ್ತಾ?
Housing rates increase in Indian cities: ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಕೆಲ ಪ್ರಮುಖ ನಗರಗಳಲ್ಲಿ ರಿಯಲ್ ಎಸ್ಟೇಟ್ ಬೆಲೆ ಬಹಳ ಏರಿದೆ. ಅತಿ ಹೆಚ್ಚು ವಸತಿ ಬೆಲೆ ಹೆಚ್ಚಳ ಕಂಡ ಟಾಪ್ 5 ಪ್ರದೇಶಗಳಲ್ಲಿ ಬೆಂಗಳೂರಿನ ಮೂರು ಸ್ಥಳಗಳು ಸೇರಿವೆ. ಬಾಗಲೂರು ನಂಬರ್ ಒನ್ ಎನಿಸಿದರೆ, ವೈಟ್ಫೀಲ್ಡ್ ಮತ್ತು ಸರ್ಜಾಪುರ ರಸ್ತೆ ಪ್ರದೇಶಗಳು ಕ್ರಮವಾಗಿ 3 ಮತ್ತು 5ನೇ ಸ್ಥಾನ ಪಡೆದಿವೆ.
ಬೆಂಗಳೂರು, ಆಗಸ್ಟ್ 27: ಭಾರತದ ಪ್ರಮುಖ ನಗರಗಳಲ್ಲಿ ಕಮರ್ಷಿಯಲ್ ಆಸ್ತಿಗಳು ಮಾತ್ರವಲ್ಲ ವಸತಿ ಆಸ್ತಿಗಳ ಬೆಲೆಯೂ ಸಿಕ್ಕಾಪಟ್ಟೆ ಏರುತ್ತಿದೆ. 2020ರ ಬಳಿಕ ಮನೆ ಬೆಲೆ ಅತಿ ಹೆಚ್ಚು ಏರಿಕೆ ಕಂಡಿರುವುದು ಬೆಂಗಳೂರು ಮತ್ತು ಹೈದರಾಬಾದ್. ಬೆಂಗಳೂರಿನ ಬಾಗಲೂರಿನಲ್ಲಂತೂ ವಸತಿ ಬೆಲೆ ಏರಿಕೆ ದೇಶದಲ್ಲೇ ಗರಿಷ್ಠ ಎನಿಸಿದೆ. ಕೇವಲ ನಾಲ್ಕು ವರ್ಷದೊಳಗಿನ ಅವಧಿಯಲ್ಲಿ ಬಾಗಲೂರಿನಲ್ಲಿ ವಸತಿ ಬೆಲೆ ಶೇ. 90ರಷ್ಟು ಏರಿದೆ. ಐಟಿ ಕಂಪನಿಗಳ ದೊಡ್ಡ ಗುಚ್ಛಗಳೇ ಇರುವ ವೈಟ್ಫೀಲ್ಡ್ನಲ್ಲಿ ಶೇ. 80ರಷ್ಟು ಬೆಲೆ ಏರಿದೆ. ಹೈದರಾಬಾದ್ನ ಕೋಕಾಪೇಟ್ ಪ್ರದೇಶದಲ್ಲಿ ವಸತಿ ಬೆಲೆ ಶೇ. 89ರಷ್ಟು ಏರಿದೆ ಎಂದು ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಕಂಪನಿಯಾದ ಅನರಾಕ್ ರಿಸರ್ಚ್ ಹೇಳಿದೆ.
ಬೆಂಗಳೂರು, ಹೈದರಾಬಾದ್, ದೆಹಲಿ ಎನ್ಸಿಆರ್, ಮುಂಬೈ, ಪುಣೆ, ಚೆನ್ನೈ ಮತ್ತು ಕೋಲ್ಕತಾ ನಗರಗಳಲ್ಲಿ ಈ ನಾಲ್ಕು ವರ್ಷದ ಅವಧಿಯಲ್ಲಿ ಅತಿಹೆಚ್ಚು ಮನೆ ಬಾಡಿಗೆ ಹೆಚ್ಚಳ ಆಗಿದೆ ಎಂದು ಅನರಾಕ್ ರಿಸರ್ಚ್ ಸಂಸ್ಥೆ ತಿಳಿಸಿದೆ.
ಬಾಗಲೂರು ಹೇಗಿತ್ತು, ಹೇಗಾಯ್ತು ನೋಡಿ…
2019ರಲ್ಲಿ ಬಾಗಲೂರಿನಲ್ಲಿ ವಸತಿ ಬೆಲೆ ಸರಾಸರಿಯಾಗಿ ಪ್ರತೀ ಚದರಕ್ಕೆ 4,300 ರೂ ಇತ್ತು. ಈಗ ಜೂನ್ ತಿಂಗಳಲ್ಲಿ ನೋಡಿದರೆ ಚದರಡಿಗೆ ಸರಾಸರಿಯಾಗಿ 8,151 ರೂ ಬೆಲೆ ಬಂದಿದೆ. ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಸರಾಸರಿ ವಸತಿ ಬೆಲೆ ಚದರಡಿಗೆ 8,600 ರೂಗೆ ಏರಿದೆ. ಸರ್ಜಾಪುರ ರಸ್ತೆ ಪ್ರದೇಶದಲ್ಲಿ ಚದರಡಿ ಬೆಲೆ 9,300 ರೂ ಇದೆ. ಅತಿಹೆಚ್ಚು ವಸತಿ ಬೆಲೆ ಏರಿಕೆಯಲ್ಲಿ ಇದು ಐದನೆ ಸ್ಥಾನ ಪಡೆದಿದೆ. ಅಲ್ಲಿಗೆ ಟಾಪ್ 5ನಲ್ಲಿ ಬೆಂಗಳೂರಿನ ಮೂರು ಪ್ರದೇಶಗಳೇ ಇದ್ದಂತಾಗಿದೆ.
ಇದನ್ನೂ ಓದಿ: ಕಿತ್ತಾಟ ಸಾಕು, ಪರಸ್ಪರ ಸಹವಾಸ ಬಿಟ್ಟ ಝೀ ಮತ್ತು ಸೋನಿ; ಸೆಟಲ್ಮೆಂಟ್ ಮಾಡಿಕೊಂಡು ಮನರಂಜನಾ ಜಗತ್ತಿನ ದೈತ್ಯರು
ಬೆಂಗಳೂರಿನಲ್ಲಿ ಈ ಪರಿ ವಸತಿ ಬೆಲೆ ಏರಲು ಏನು ಕಾರಣ?
ಬಾಗಲೂರು, ವೈಟ್ಫೀಲ್ಡ್, ಸರ್ಜಾಪುರ ರಸ್ತೆ, ಉತ್ತರ ಬೆಂಗಳೂರು ಇತ್ಯಾದಿ ಸ್ಥಳಗಳಲ್ಲಿ ಬಹಳ ವೇಗವಾಗಿ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಆಗಿದೆ. ಅಗ್ರಮಾನ್ಯ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಐಟಿ ಕಂಪನಿಗಳು ಇಲ್ಲಿ ಸ್ಥಾಪನೆಯಾಗಿವೆ. ಕಮರ್ಷಿಯಲ್ ಚಟುವಟಿಕೆ ಹೆಚ್ಚಿದೆ. ಮನರಂಜನಾ ತಾಣಗಳು ಹೆಚ್ಚಿವೆ. ಹೀಗಾಗಿ, ಇಲ್ಲಿ ವಸತಿಗಳಿಗೆ ಬೇಡಿಕೆ ಹೆಚ್ಚಿದೆ ಬಿಸಿಡಿ ಗ್ರೂಪ್ನ ಸಿಎಂಡಿ ಆಗಿರುವ ಅಂಗದ್ ಬೇಡಿ ಹೇಳುತ್ತಾರೆ.
ಜನರ ಕೈಗೆ ಹೆಚ್ಚಿದ ಆದಾಯ
ವಸತಿ ಬೆಲೆ ಏರಿಕೆಯ ದತ್ತಾಂಶ ಬಿಡುಗಡೆ ಮಾಡಿದ ಅನರಾಕ್ ಗ್ರೂಪ್ನ ಛೇರ್ಮನ್ ಅನುಜ್ ಪುರಿ, ಬಹಳ ಕುತೂಹಲ ಎನಿಸುವ ಒಂದು ಸಂಗತಿಯನ್ನು ಕಾರಣವಾಗಿ ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ 2013ರಿಂದ 2019ರವರೆಗೆ ರಿಯಲ್ ಎಸ್ಟೇಟ್ ವಸತಿ ಆಸ್ತಿ ಬೆಲೆ ವರ್ಷಕ್ಕೆ ಶೇ. 2ರಷ್ಟು ಮಾತ್ರವೇ ಹೆಚ್ಚಳ ಕಂಡಿದೆ. ಇದೇ ಅವಧಿಯಲ್ಲಿ ಜನರ ಆದಾಯ ಮಟ್ಟದಲ್ಲಿ ಶೇ. 7ರಿಂದ 8ರಷ್ಟು ಏರಿಕೆ ಆಗಿದೆ. ಹೀಗಾಗಿ, 2020ರಿಂದ 2024ರವರೆಗೆ ಜನರು ತಮ್ಮ ಆದಾಯವನ್ನು ರಿಯಲ್ ಎಸ್ಟೇಟ್ ಮೇಲೆ ವ್ಯಯಿಸುತ್ತಿದ್ದಾರೆ. ಇದು ಬೆಲೆ ಏರಿಕೆಗೆ ಕಾರಣವಾಗಿರಬಹುದು ಎನ್ನುವುದು ಅವರ ಅನಿಸಿಕೆ.
ಬಾಗಲೂರು ಇತ್ಯಾದಿ ಮೈಕ್ರೋಮಾರ್ಕೆಟ್ಗಳಲ್ಲಿ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಯ ವೇಗ ಹೆಚ್ಚಿರುವ ಕಾರಣಕ್ಕೆ ರಿಯಲ್ ಎಸ್ಟೇಟ್ ಬೆಲೆ ಹೆಚ್ಚಿದೆ ಎನ್ನುವ ಅಂಗದ್ ಬೇಡಿ ಅವರ ಅನಿಸಿಕೆಯನ್ನು ಅನುಜ್ ಪುರಿ ಕೂಡ ಪುಷ್ಟೀಕರಿಸುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ