
ನವದೆಹಲಿ, ನವೆಂಬರ್ 25: ಉದ್ಯೋಗಿಗಳು ತಮ್ಮ ಪ್ರಾವಿಡೆಂಟ್ ಫಂಡ್ ಹಣವನ್ನು ಎಟಿಎಂ, ಯುಪಿಐ ಮೂಲಕ ಸುಲಭವಾಗಿ ವಿತ್ಡ್ರಾ ಮಾಡಲಾಗುವಂತೆ ವಿನೂತನ ಸೌಲಭ್ಯಗಳು ಬರಲಿವೆ ಎನ್ನುವಂತಹ ಸುದ್ದಿ ವರ್ಷದಿಂದಲೂ ಇದೆ. ಇದೀಗ ಈ ಸೌಲಭ್ಯ ಮುಂದಿನ ಕೆಲವೇ ತಿಂಗಳಲ್ಲಿ ಜಾರಿಯಾಗಬಹುದು ಎಂದು ಹೇಳಲಾಗುತ್ತಿದೆ. ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಾರ ಫೆಬ್ರುವರಿಯಲ್ಲಿ ಇಪಿಎಫ್‌ಒ 3.0 ಜಾರಿಗೆ ಬರಲಿದೆ. ಅದಾದ ಬಳಿಕ ಎಟಿಎಂ ವಿತ್ಡ್ರಾಯಲ್, ಯುಪಿಐ ವಿತ್ಡ್ರಾಯಲ್ ಇತ್ಯಾದಿ ಸೌಲಭ್ಯಗಳು ಚಾಲನೆಗೆ ಬರಲಿವೆ.
ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ‘ಇಪಿಎಫ್‌ಒ 3.0’ ಯೋಜನೆಯ ಫ್ರೇಮ್ವರ್ಕ್ಗೆ 2025ರ ಅಕ್ಟೋಬರ್ ತಿಂಗಳಲ್ಲೇ ಅನುಮೋದನೆ ಸಿಕ್ಕಿದೆ. ಇಪಿಎಫ್ಒನ ಕೇಂದ್ರೀಯ ವಿಶ್ವಸ್ತ ಮಂಡಳಿ ಈ ಅನುಮೋದನೆ ನೀಡಿದ್ದು, ಒಂದು ವರ್ಷದಲ್ಲಿ ಜಾರಿಯಾಗಬೇಕೆಂದು ಸೂಚಿಸಿತ್ತು. 2027ರ ಫೆಬ್ರುವರಿಯಲ್ಲಿ ಮಂಡಳಿ ಸಭೆ ಇದ್ದು, ಆಗಲೇ ಇಪಿಎಫ್‌ಒ 3.0 ಜಾರಿಯನ್ನು ಘೋಷಿಸಬಹುದು. ಈಗಾಗಲೇ ಟೆಕ್ನಾಲಜಿ ಪಾರ್ಟ್ನರ್ ಅನ್ನು ನಿರ್ಧರಿಸಲಾಗಿದೆ. ಹೀಗಾಗಿ, ಬೇಗನೇ ಇಪಿಎಫ್‌ಒ 3.0 ಜಾರಿಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಫ್ಲಿಪ್ಕಾರ್ಟ್ನಲ್ಲಿ ನಾಯಕತ್ವ ಬದಲಾವಣೆ; ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ರಾಜೀನಾಮೆ; ಬಾಲಾಜಿ ತ್ಯಾಗರಾಜನ್ ಹಂಗಾಮಿ ಸಿಇಒ
ಮುಂದಿನ 50 ವರ್ಷಗಳ ಅವಧಿಯಲ್ಲಿ ಸುಮಾರು 200 ಕೋಟಿ ಸದಸ್ಯರ ದತ್ತಾಂಶವನ್ನು ನಿರ್ವಹಿಸುವ ಸಾಮರ್ಥ್ಯದೊಂದಿಗೆ ಈ ಹೊಸ ವೇದಿಕೆಯನ್ನು ರೂಪಿಸಲಾಗುತ್ತಿದೆ.
ಕೇಂದ್ರೀಕೃತ ವ್ಯವಸ್ಥೆ (Core Banking Solution) ಮತ್ತು ಸಮಗ್ರ ಡಿಜಿಟಲ್ ವೇದಿಕೆಯಿಂದ ಸದಸ್ಯರು ದೇಶದ ಯಾವುದೇ ಪ್ರಾದೇಶಿಕ ಕಚೇರಿಯ ಮೂಲಕ ಖಾತೆ ಸೇವೆಗಳನ್ನು ಸುಲಭವಾಗಿ ಪಡೆಯಲು ಹಾಗೂ ಕ್ಲೈಮ್ ಪ್ರಕ್ರಿಯೆಗಳನ್ನು ವೇಗಗೊಳಿಸಲು ಸಹಕಾರಿಯಾಗಲಿದೆ.
ಗಿಗ್ ವರ್ಕರ್ಸ್, ಡೆಲಿವರಿ ಪಾರ್ಟ್ನರ್ಸ್ ಮತ್ತು ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಂಪ್ರದಾಯಿಕ ಉದ್ಯೋಗದಾತರಿಲ್ಲದೆಯೂ ಯುಎಎನ್ (UAN) ಆಧಾರಿತ ಭವಿಷ್ಯ ನಿಧಿ ಕೊಡುಗೆ ನೀಡುವ ಮಾರ್ಗವನ್ನು ಇದು ತೆರೆಯಲಿದೆ.
ಒಂದೇ ಯುಎಎನ್ ಅನ್ನು ಹಲವು ಉದ್ಯೋಗದಾತರು ಅಥವಾ ಅಗ್ರಿಗೇಟರ್‌ಗಳೊಂದಿಗೆ ಜೋಡಿಸುವ ‘ಒನ್-ಟು-ಮೆನಿ ಮ್ಯಾಪಿಂಗ್’ ವ್ಯವಸ್ಥೆಯ ಜೊತೆಗೆ, ಎನ್‌ಜಿಒಗಳು, ದಾನಿಗಳು ಅಥವಾ ಸಿಎಸ್‌ಆರ್ (CSR) ನಿಧಿಗಳಂತಹ ಮೂರನೇ ವ್ಯಕ್ತಿಯ ಕೊಡುಗೆಗಳಿಗೂ ಅವಕಾಶ ಕಲ್ಪಿಸಲಾಗುವುದು.
ಇದನ್ನೂ ಓದಿ: ನಿಮ್ಮ ಪಿಎಫ್ ಹಣದಿಂದ ಮಾಸಿಕ ಆದಾಯ ಸೃಷ್ಟಿಸಲು ದಾರಿ; ಇಪಿಎಫ್ಒದ ಹೊಸ ಪ್ಲಾನ್ ಬಗ್ಗೆ ಮಾಹಿತಿ
ಯುಪಿಐ (UPI) ಮೂಲಕ ಪಿಎಫ್ ಹಣ ಹಿಂಪಡೆಯುವ ಸೌಲಭ್ಯವು ಮುಂದಿನ ವರ್ಷದ ಡಿಸೆಂಬರ್ ಅಂತ್ಯದೊಳಗೆ ಪ್ರಾಯೋಗಿಕ ಹಂತ ಪೂರೈಸಿ ಜಾರಿಗೆ ಬರುವ ನಿರೀಕ್ಷೆಯಿದೆ. ಎಟಿಎಂ ಮೂಲಕವೂ ಹಣ ಪಡೆಯುವ ವ್ಯವಸ್ಥೆಯ ಯೋಜನೆ ಇದೆ.
ಇದರ ಜೊತೆಗೆ, ನಿವೃತ್ತ ಸದಸ್ಯರಿಗೆ ಒಂದೇ ಬಾರಿಗೆ ಸಂಪೂರ್ಣ ಮೊತ್ತ ಪಡೆಯುವ ಬದಲು ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಕಂತುಗಳಲ್ಲಿ ಹಣ ಪಡೆಯಲು ಅವಕಾಶ ನೀಡುವ ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲಾನ್ (SWP) ಸೇರಿದಂತೆ ಹಲವು ಸದಸ್ಯಸ್ನೇಹಿ ಬದಲಾವಣೆಗಳತ್ತ ಗಮನ ಹರಿಸಲಾಗಿದೆ. ಕೆಲ ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ, ಇಪಿಎಫ್ನ ಎಸ್ಡಬ್ಲ್ಯುಪಿ ಪ್ಲಾನ್ನಲ್ಲಿ 20 ವರ್ಷಗಳವರೆಗೆ ಹಣವನ್ನು ವಿತ್ಡ್ರಾ ಮಾಡಿಕೊಳ್ಳಲು ಅವಕಾಶ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ