
ನವದೆಹಲಿ, ಸೆಪ್ಟೆಂಬರ್ 25: ಭಾರತದ ಉದ್ಯೋಗಸೃಷ್ಟಿ ಪ್ರಕ್ರಿಯೆ ಉತ್ತಮವಾಗಿ ಸಾಗುತ್ತಿದೆ. ಇಪಿಎಫ್ ಸದಸ್ಯರ ಸಂಖ್ಯೆ ಸ್ಥಿರವಾಗಿ ಏರುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇಪಿಎಫ್ಒ (EPFO) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಜುಲೈ ತಿಂಗಳಲ್ಲಿ ಸೇರ್ಪಡೆಯಾದ ಸದಸ್ಯರ ಸಂಖ್ಯೆ ನಿವ್ವಳ 21.04 ಲಕ್ಷದಷ್ಟು ಇದೆ. ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಈ ಬಾರಿ ನಿವ್ವಳ ಇಪಿಎಫ್ ಸದಸ್ಯರ ಸೇರ್ಪಡೆ ಶೇ. 5.6ರಷ್ಟು ಹೆಚ್ಚಾಗಿದೆ.
ಈ ವರ್ಷ (2025-26) ಇಪಿಎಫ್ ಸದಸ್ಯರ ಸೇರ್ಪಡೆ ಪ್ರಮಾಣ ತಿಂಗಳಿಂದ ತಿಂಗಳಿಗೆ ಏರುತ್ತಲೇ ಇರುವುದು ಗಮನಾರ್ಹ ಸಂಗತಿ. ಏಪ್ರಿಲ್ನಲ್ಲಿ 14.3 ಲಕ್ಷ, ಮೇ ತಿಂಗಳಲ್ಲಿ 14.6 ಲಕ್ಷ, ಜೂನ್ ತಿಂಗಳಲ್ಲಿ 19 ಲಕ್ಷ ಹಾಗೂ ಜುಲೈನಲ್ಲಿ 21 ಲಕ್ಷ ಸಂಖ್ಯೆಯಲ್ಲಿ ಇಪಿಎಫ್ ಸದಸ್ಯರ ಸೇರ್ಪಡೆಯಾಗಿದೆ. ಹೊಸ ಉದ್ಯೋಗಗಳ ಸೃಷ್ಟಿ ನಿರಂತರವಾಗಿ ಹೆಚ್ಚುತ್ತಿದೆ.
ಇದನ್ನೂ ಓದಿ: ಇಪಿಎಫ್ಒದ ಬಹುನಿರೀಕ್ಷಿತ ಎಟಿಎಂ ಫೀಚರ್: ಜನವರಿಯಿಂದ ಸಿಗುತ್ತಾ ಈ ಸೌಲಭ್ಯ?
ಜೂನ್ ಮತ್ತು ಜುಲೈ ತಿಂಗಳಲ್ಲಿ ಹೊಸ ಉದ್ಯೋಗ ಸೃಷ್ಟಿ ಹೆಚ್ಚಲು ಬೇರೆಯೇ ಕಾರಣವಿರಬಹುದು. ಏಪ್ರಿಲ್, ಮೇ ತಿಂಗಳಲ್ಲಿ ಶೈಕ್ಷಣಿಕ ವರ್ಷ ಮುಗಿಯುತ್ತದೆ. ಪದವೀಧರರಾಗಿ ಹೊರಬರುವ ವಿದ್ಯಾರ್ಥಿಗಳು ಕೆಲಸಕ್ಕೆ ಸೇರಿಕೊಳ್ಳುವ ಸಂದರ್ಭ. ಹೀಗಾಗಿ, ಜೂನ್ ಮತ್ತು ಜುಲೈ ತಿಂಗಳಲ್ಲಿ ಹೆಚ್ಚಿನ ನೇಮಕಾತಿ ಆಗುವುದು ಸಹಜ.
ಹೊಸ ಇಪಿಎಫ್ ಸದಸ್ಯರಲ್ಲಿ 18-25 ವರ್ಷ ವಯೋಮಾನದವರೇ ಹೆಚ್ಚಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್, ಹರ್ಯಾಣ ಮತ್ತು ದೆಹಲಿ ರಾಜ್ಯಗಳಿಂದ ಹೆಚ್ಚು ಹೊಸ ಇಪಿಎಫ್ ಸದಸ್ಯರ ಸೇರ್ಪಡೆಯಾಗಿದೆ. ಅದರಲ್ಲೂ ದಕ್ಷಿಣ ರಾಜ್ಯಗಳು ಹೊಸ ಉದ್ಯೋಗಸೃಷ್ಟಿಯ ಕೇಂದ್ರ ಬಿಂದುಗಳೆನಿಸಿವೆ ಎಂದು ದತ್ತಾಂಶದಿಂದ ತಿಳಿದುಬರುತ್ತದೆ.
ಇದನ್ನೂ ಓದಿ: ಇಪಿಎಫ್ಒನಲ್ಲಿ ಹೊಸ ಫೀಚರ್ಸ್; ಪಾಸ್ಬುಕ್ ಲೈಟ್, ಟ್ರಾನ್ಸ್ಫರ್ ಸರ್ಟಿಫಿಕೇಟ್, ತ್ವರಿತ ಅನುಮೋದನೆ
ಐಟಿ, ಬಿಪಿ ಇತ್ಯಾದಿ ಸರ್ವಿಸಸ್ ಕ್ಷೇತ್ರ, ಎಂಜಿನಿಯರಿಂಗ್, ಕಟ್ಟಡ ನಿರ್ಮಾಣ, ಟ್ರೇಡಿಂಗ್ ಸೆಕ್ಟರ್ಗಳಲ್ಲಿ ಹೆಚ್ಚು ಹೊಸ ಇಪಿಎಫ್ ಅಕೌಂಟ್ಗಳು ಸೃಷ್ಟಿಯಾಗಿವೆ. ಟೆಕ್ಸ್ಟೈಲ್, ಗಾರ್ಮೆಂಟ್ಸ್, ಸ್ವಚ್ಛತೆ ಸರ್ವಿಸ್ನ ಕ್ಷೇತ್ರದಲ್ಲಿ ಅತಿಹೆಚ್ಚು ಉದ್ಯೋಗಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ