ಬೆಲ್ಜಿಯಂ, ಡಿಸೆಂಬರ್ 6: ಚೀನಾದ ಮಾರುಕಟ್ಟೆಯಲ್ಲಿ ವಿದೇಶೀ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ ಇಲ್ಲದಿರುವುದು ಬಹಳಷ್ಟು ಪಾಶ್ಚಿಮಾತ್ಯ ದೇಶಗಳಿಗೆ ಇರಿಸುಮುರುಸು ತಂದಿದೆ. ಅದರಲ್ಲೂ ಯೂರೋಪ್ ದೇಶಗಳು ಚೀನಾ ಮಾರುಕಟ್ಟೆ ಪ್ರಾಬಲ್ಯದಿಂದ ಹತಾಶಗೊಂಡಿವೆ. ಈ ವಿಚಾರವು ಮುಂಬರುವ ಚೀನಾ ಮತ್ತು ಐರೋಪ್ಯ ಒಕ್ಕೂಟ (European Union) ವಾರ್ಷಿಕ ಸಭೆಯಲ್ಲಿ ಚರ್ಚೆಗೆ ಬರಲಿದೆ. ಚೀನಾದ ಬೀಜಿಂಗ್ನಲ್ಲಿ ನಡೆಯಲಿರುವ 24ನೇ ಯೂರೋಪಿಯನ್ ಯೂನಿಯನ್ ಚೀನಾ ಮಹಾಸಭೆಗೆ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಐರೋಪ್ಯ ಒಕ್ಕೂಟದ ಮುಖ್ಯಸ್ಥೆ ಉರ್ಸುಲ ವೋನ್ ಡೆರ್ ಲೆಯೆನ್ (Ursula Von Der Leyen), ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಚೀನಾ ಜೊತೆಗಿನ ವ್ಯಾಪಾರ ಅಸಮತೋಲವನ್ನು ಯೂರೋಪ್ ಇನ್ನು ಮುಂದೆ ಸಹಿಸುವುದಿಲ್ಲ ಎಂದು ಜರ್ಮನಿಯ ಮಾಜಿ ಸಚಿವೆಯೂ ಆದ ಉರ್ಸುಲ ಹೇಳಿದ್ದಾರೆ. ಐರೋಪ್ಯ ಒಕ್ಕೂಟದ ದೇಶಗಳು ವ್ಯಾಪಾರ ಸಮರಕ್ಕೆ ಬೀಳುವ ಬದಲು ಸಂಧಾನ ಬಯಸುತ್ತಾರೆ ಎಂದೂ ಯೂರೋಪಿಯನ್ ಕಮಿಷನ್ನ ಅಧ್ಯಕ್ಷೆಯೂ ಆದ ಅವರು ಹೇಳಿದ್ದಾರೆ.
ಫೋರ್ಬ್ಸ್ 2023 ಪಟ್ಟಿಯಲ್ಲಿ ವಿಶ್ವದ ಅತ್ಯಂತ ಪ್ರಬಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿರುವ ಉರ್ಸುಲಾ ವಾನ್ ಡರ್, ‘ನಮ್ಮ ಮಾರುಕಟ್ಟೆಯನ್ನು ರಕ್ಷಿಸುವ ಸಾಧನ ನಮ್ಮೊಂದಿಗೆ ಇದೆ. ಆದರೆ, ಸಂಧಾನದ ಮೂಲಕ ಪರಿಹಾರ ಪಡೆಯಲು ಇಚ್ಛಿಸುತ್ತೇವೆ,’ ಎಂದು ಸ್ಪಷ್ಟಪಡಿಸಿದ್ದಾರೆ.
‘ವ್ಯಾಪಾರ ಅಸಮತೋಲನ ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕಳೆದ ಎರಡು ವರ್ಷದಲ್ಲಿ ಈ ಅಸಮತೋಲನ ಎರಡು ಪಟ್ಟು ಹೆಚ್ಚಾಗಿ ಈಗ 400 ಬಿಲಿಯನ್ ಯೂರೋ ತಲುಪಿದೆ… ಈ ವ್ಯಾಪಾರ ಸಂಬಂಧದಲ್ಲಿ ದೀರ್ಘಕಾಲ ಅಸಮತೋಲನವನ್ನು ಐರೋಪ್ಯ ನಾಯಕರು ಒಪ್ಪುವುದಿಲ್ಲ’ ಎಂದು ಉರ್ಸುಲಾ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಅದಾನಿ ಗ್ರೂಪ್ ಕಂಪನಿಗಳಿಗೆ ಷೇರುಪೇಟೆಯಲ್ಲಿ ಸುಗ್ಗಿ; ವಿಶ್ವ ಶ್ರೀಮಂತರ ಟಾಪ್15 ಪಟ್ಟಿಯಲ್ಲಿ ಗೌತಮ್ ಅದಾನಿ
ಚೀನಾ ಪಾಲಿಗೆ ಯೂರೋಪ್ ಮಾರುಕಟ್ಟೆ ಬಹಳ ಮುಖ್ಯ. ಚೀನಾದ ಸಾಕಷ್ಟು ಹೂಡಿಕೆ ಮತ್ತು ರಫ್ತು ಇಲ್ಲಿಗೆ ಹರಿದುಬರುತ್ತವೆ. ನೇರವಾಗಿ ಮತ್ತು ಪರೋಕ್ಷವಾಗಿ ಸರ್ಕಾರದಿಂದ ಸಬ್ಸಿಡಿಗಳನ್ನು ಪಡೆಯುವುದರಿಂದ ಯೂರೋಪಿಯನ್ ಕಂಪನಿಗಳ ಪೈಪೋಟಿಯನ್ನು ಚೀನಾ ಕಂಪನಿಗಳು ಸುಲಭವಾಗಿ ಹಿಮ್ಮೆಟ್ಟಿಸುತ್ತವೆ ಎನ್ನಲಾಗಿದೆ. ಆದರೆ, ಚೀನಾ ಮಾರುಕಟ್ಟೆಯಲ್ಲಿ ಯೂರೋಪಿಯನ್ ಕಂಪನಿಗಳಿಗೆ ಮುಕ್ತ ಸ್ವಾತಂತ್ರ್ಯ ಇಲ್ಲ. ಹೀಗಾಗಿ, ಚೀನಾ ಮತ್ತು ಯೂರೋಪಿಯನ್ ಮಧ್ಯೆ ಭಾರೀ ವ್ಯಾಪಾರ ಅಂತರ (trade imbalance) ಹೆಚ್ಚಲು ಕಾರಣವಾಗಿದೆ. ಭಾರತದ ವಿಚಾರಕ್ಕೂ ಇದೇ ಅನ್ವಯ ಆಗುತ್ತದೆ.
ಡಿಸೆಂಬರ್ 7ರಂದು ಚೀನಾದ ಬೀಜಿಂಗ್ನಲ್ಲಿ ಯೂರೋಪಿಯನ್ ಯೂನಿಯನ್ ಮತ್ತು ಚೀನಾ ಸಭೆ ನಡೆಯಲಿದೆ. ಇದು 24ನೇ ಸಮಿಟ್ ಆಗಿದೆ. 2019ರ ಬಳಿಕ ಮೊದಲ ಬಾರಿಗೆ ಇದರ ಭಾಗಿದಾರರು ಮುಖತಃ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು. ಮೂರು ವರ್ಷ ಆನ್ಲೈನ್ನಲ್ಲಿ ಈ ಸಮಿಟ್ ನಡೆದಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Wed, 6 December 23