ಬೆಂಗಳೂರು, ಡಿಸೆಂಬರ್ 6: ಕಳೆದ ಒಂದು ವಾರದಿಂದ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಕಂಪನಿಗಳಿಗೆ (Adani Group) ಭರ್ಜರಿ ಸುಗ್ಗಿ ಆಗುತ್ತಿದೆ. ಅದರ ಪರಿಣಾಮವಾಗಿ ಗೌತಮ್ ಅದಾನಿ ಷೇರುಸಂಪತ್ತು (Gautam Adani wealth) ಮತ್ತೆ ಅತೀವವಾಗಿ ಏರತೊಡಗಿದೆ. ಕೆಲ ತಿಂಗಳ ಹಿಂದೆ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 30 ಆಸುಪಾಸಿನ ಸ್ಥಾನದಲ್ಲಿದ್ದ ಅದಾನಿ ಈಗ ಟಾಪ್ 20ಗೆ ಲಗ್ಗೆ ಇಟ್ಟಿದ್ದಾರೆ. ಹಿಂಡನ್ಬರ್ಗ್ ವರದಿಯನ್ನು ಅಮೆರಿಕ ಸರ್ಕಾರ ಉಪೇಕ್ಷಿಸಿದೆ ಎಂಬಂತಹ ಸುದ್ದಿ ಬಂದ ಬಳಿಕ ಅದಾನಿ ಕಂಪನಿಗಳ ಷೇರು ಮೌಲ್ಯ ಹೆಚ್ಚಳ ಇನ್ನಷ್ಟು ವೇಗ ಪಡೆದುಕೊಂಡಿದೆ. ವಿಶ್ವ ಶ್ರೀಮಂತರ ಫೋರ್ಬ್ಸ್ ಪಟ್ಟಿ ಪ್ರಕಾರ ಗೌತಮ್ ಅದಾನಿ 16ನೇ ಸ್ಥಾನದಲ್ಲಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಪಟ್ಟಿಯಲ್ಲಿ 15ನೇ ಸ್ಥಾನಕ್ಕೆ ಏರಿದ್ದಾರೆ. ಭಾರತದ ನಂಬರ್ ಒನ್ ಶ್ರೀಮಂತ ಮುಕೇಶ್ ಅಂಬಾನಿ ಅವರ ಷೇರುಸಂಪತ್ತಿಗೆ ಸಮೀಪವೇ ಹೋಗಿದ್ದಾರೆ ಅದಾನಿ. ಇವತ್ತೂ ಕೂಡ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಹೆಚ್ಚಿನ ಬೆಲೆಗೆ ಬಿಕರಿಯಾಗತೊಡಗಿವೆ.
ರಿಯಲ್ಟೈಮ್ ಫೋರ್ಬ್ಸ್ ಪಟ್ಟಿ ಪ್ರಕಾರ ಗೌತಮ್ ಅದಾನಿ ಅವರ ಷೇರುಸಂಪತ್ತು ಡಿಸೆಂಬರ್ 6, ಮಧ್ಯಾಹ್ನದಂದು 76 ಬಿಲಿಯನ್ ಡಾಲರ್ ಇತ್ತು. ಪಟ್ಟಿಯಲ್ಲಿ ಅವರು 16ನೇ ಸ್ಥಾನದಲ್ಲಿದ್ದಾರೆ. ಮುಕೇಶ್ ಅಂಬಾನಿ 96 ಬಿಲಿಯನ್ ಡಾಲರ್ನೊಂದಿಗೆ 14ನೇ ಸ್ಥಾನದಲ್ಲಿದ್ದಾರೆ. ಫ್ರಾಂಕಾಯ್ಸ್ ಮೆಯೆರ್ಸ್ ಕುಟುಂಬ 94 ಬಿಲಿಯನ್ ಡಾಲರ್ನೊಂದಿಗೆ ಅದಾನಿಗಿಂತ ಒಂದು ಸ್ಥಾನ ಮೇಲಿದ್ದಾರೆ.
ಇದನ್ನೂ ಓದಿ: ಮುಕೇಶ್ ಅಂಬಾನಿಗೆ ಸೆಬಿ 25 ಕೋಟಿ ರೂ ದಂಡ ವಿಧಿಸಿದ್ದು ಯಾಕೆ? ಕೋರ್ಟ್ ಇದನ್ನು ರದ್ದು ಮಾಡಿದ್ದು ಯಾಕೆ?
ಇನ್ನು, ಬ್ಲೂಮ್ಬರ್ಗ್ ಬಿಲಿಯನೇರ್ಸ್ ಪಟ್ಟಿ ಪ್ರಕಾರ ಮುಕೇಸ್ ಅಂಬಾನಿ 91.4 ಬಿಲಿಯನ್ ಡಾಲರ್ ಷೇರುಸಂಪತ್ತಿನೊಂದಿಗೆ 13ನೇ ಸ್ಥಾನದಲ್ಲಿದ್ದಾರೆ. ಅಮಾನ್ಷಿಯೋ ಆರ್ಟೆಗಾ 83.6 ಬಿಲಿಯನ್ ಡಾಲರ್ ಹಾಗೂ ಗೌತಮ್ ಅದಾನಿ 82.5 ಬಿಲಿಯನ್ ಡಾಲರ್ನೊಂದಿಗೆ ಕ್ರಮವಾಗಿ 14 ಮತ್ತು 15ನೇ ಸ್ಥಾನದಲ್ಲಿದ್ದಾರೆ. ಆರ್ಟೆಗಾ ಮತ್ತು ಅದಾನಿ ಷೇರುಸಂಪತ್ತಿನ ಮಧ್ಯೆ ಅಷ್ಟೇನೂ ವ್ಯತ್ಯಾಸ ಇಲ್ಲ. ಒಂದೆರಡು ದಿನದಲ್ಲಿ ಅದಾನಿ 14ನೇ ಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಅದಾನಿ ಗ್ರೂಪ್ಗೆ ಧನಸಹಾಯ ಕೊಡುವ ಮುನ್ನ ಹಿಂಡನ್ಬರ್ಗ್ ವರದಿ ಅವಲೋಕಿಸಿದ್ದ ಅಮೆರಿಕದ ಸರ್ಕಾರ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ