ಶ್ರೀಲಂಕಾದಲ್ಲಿ ಅದಾನಿ ಗ್ರೂಪ್​ಗೆ ಧನಸಹಾಯ ಕೊಡುವ ಮುನ್ನ ಹಿಂಡನ್ಬರ್ಗ್ ವರದಿ ಅವಲೋಕಿಸಿದ್ದ ಅಮೆರಿಕದ ಸರ್ಕಾರ

US, Adani Group and Hindenburg Report: ಅದಾನಿ ಪೋರ್ಟ್ಸ್ ಅಂಡ್ ಎಸ್​ಇಝಡ್ ಸಂಸ್ಥೆ ಶ್ರೀಲಂಕಾದ ಕೊಲಂಬೋದ ಬಂದರಿನಲ್ಲಿ ಕಂಟೈನರ್ ಟರ್ಮಿನಲ್​ವೊಂದನ್ನು ನಿರ್ಮಿಸುತ್ತಿದೆ. ಅದಾನಿ ಗ್ರೂಪ್​ನ ಈ ಪೋರ್ಟ್ ಪ್ರಾಜೆಕ್ಟ್​ಗೆ ಅಮೆರಿಕದ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪ್ ಕಳೆದ ತಿಂಗಳು ಹಣದ ನೆರವು ಘೋಷಿಸಿತ್ತು. ಅದಾನಿ ಗ್ರೂಪ್​ನ ಷೇರು ಅಕ್ರಮಗಳ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್​ನ ವರದಿಯ ಅಂಶಗಳನ್ನು ಅವಲೋಕಿಸಿಯೇ ಅದಾನಿ ಕಂಪನಿಗೆ ಧನಸಹಾಯ ಒದಗಿಸಲಾಗಿದೆ.

ಶ್ರೀಲಂಕಾದಲ್ಲಿ ಅದಾನಿ ಗ್ರೂಪ್​ಗೆ ಧನಸಹಾಯ ಕೊಡುವ ಮುನ್ನ ಹಿಂಡನ್ಬರ್ಗ್ ವರದಿ ಅವಲೋಕಿಸಿದ್ದ ಅಮೆರಿಕದ ಸರ್ಕಾರ
ಅದಾನಿ ಗ್ರೂಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 05, 2023 | 11:48 AM

ವಾಷಿಂಗ್ಟನ್, ಡಿಸೆಂಬರ್ 5: ಶ್ರೀಲಂಕಾದಲ್ಲಿ ಅದಾನಿ ಗ್ರೂಪ್​ನ ಸಂಸ್ಥೆಯೊಂದು ನಡೆಸುತ್ತಿರುವ ಪೋರ್ಟ್ ಪ್ರಾಜೆಕ್ಟ್​ಗೆ ಕಳೆದ ತಿಂಗಳು ಅಮೆರಿಕದಿಂದ ಧನಸಹಾಯ ಘೋಷಣೆ ಆಗಿತ್ತು. ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಅದಾನಿ ಗ್ರೂಪ್ ವಿರುದ್ಧ ಅಕ್ರಮ ಆರೋಪಗಳನ್ನು (Hindenburg Research Report) ಮಾಡಿದ್ದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದ್ದು ಹಲವರ ಹುಬ್ಬೇರಿಸಿತ್ತು. ಆದರೆ, ಅಮೆರಿಕದ ಸರ್ಕಾರ ಯಾವುದೋ ಮರ್ಜಿಯಲ್ಲಿ ಅದಾನಿ ಗ್ರೂಪ್​ಗೆ ಹಣದ ನೆರವು ಒದಗಿಸಿಲ್ಲ ಎಂಬುದು ಅಲ್ಲಿನ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆ ದೃಢೀಕರಿಸಿದೆ. ಅದಾನಿ ಗ್ರೂಪ್​ನ ಪೋರ್ಟ್ ಪ್ರಾಜೆಕ್ಟ್​ಗೆ ಹಣದ ನೆರವು ಒದಗಿಸುವ ಮುನ್ನ ಹಿಂಡನ್ಬರ್ಗ್ ವರದಿಯ ಅಂಶಗಳನ್ನು ಅವಲೋಕಿಸಲಾಗಿತ್ತು ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿರುವುದಾಗಿ ಬ್ಲೂಮ್​ಬರ್ಗ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಅದಾನಿ ಗ್ರೂಪ್​ಗೆ ಸೇರಿದ ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿ ಸಂಸ್ಥೆ ಶ್ರೀಲಂಕಾದ ಕೊಲಂಬೋದ ಬಂದರಿನಲ್ಲಿ ಕಂಟೈನರ್ ಟರ್ಮಿನಲ್​ವೊಂದನ್ನು ನಿರ್ಮಿಸುತ್ತಿದೆ. ಈ ಯೋಜನೆಗೆ ಅಮೆರಿಕದ ಸರ್ಕಾರಿ ಸ್ವಾಮ್ಯದ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಸಂಸ್ಥೆ (ಡಿಎಫ್​ಸಿ) 553 ಮಿಲಿಯನ್ ಡಾಲರ್ ಮೊತ್ತದ ಸಾಲ ಸೌಲಭ್ಯ ಒದಗಿಸಿತ್ತು.

ಇದನ್ನೂ ಓದಿ: Corporate Bond: ಆರು ವರ್ಷದಲ್ಲಿ ದ್ವಿಗುಣಗೊಳ್ಳಲಿದೆ ಭಾರತದ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆ; ಏನಿದು ಬಾಂಡ್?

ಈ ಸಾಲ ನೀಡುವ ಮುನ್ನ ಡಿಎಫ್​ಸಿ ಸಂಸ್ಥೆ ಹಿಂಡನ್ಬರ್ಗ್ ವರದಿಯ ಅಂಶಗಳನ್ನು ಅವಲೋಕಿಸಿತ್ತು. ಹಿಂನ್ಬರ್ಗ್ ಮಾಡಿದ ಆರೋಪಗಳು ಶ್ರೀಲಂಕಾದಲ್ಲಿ ಪೋರ್ಟ್ ಪ್ರಾಜೆಕ್ಟ್ ಕೈಗೊಂಡಿರುವ ಅದಾನಿ ಕಂಪನಿಗೆ ಅನ್ವಯ ಆಗುವುದಿಲ್ಲ ಎಂಬುದು ಖಾತ್ರಿ ಆದ ಬಳಿಕ ಸಾಲ ನೀಡಲು ನಿರ್ಧರಿಸಲಾಯಿತು ಎಂದು ಡಿಎಫ್​ಸಿ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಆದರೆ, ಅದಾನಿಯ ಈ ಸಂಸ್ಥೆಯ ಮೇಲೆ ಮತ್ತು ಅದರ ಹಣಕಾಸು ನಡವಳಿಕೆ ಮತ್ತಿತರ ವಿಚಾರದ ಬಗ್ಗೆ ಸದಾ ಒಂದು ಕಣ್ಣಿಟ್ಟಿರಲಾಗುತ್ತದೆ ಎಂದೂ ಅಮೆರಿಕದ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಸಂಸ್ಥೆ ಹೇಳಿದೆ.

ಕೊಲಂಬೋದಲ್ಲಿ ಅದಾನಿ ಗ್ರೂಪ್ ಕೈಗೊಂಡಿರುವ ಪೋರ್ಟ್ ಪ್ರಾಜೆಕ್ಟ್​ಗೆ ಅಮೆರಿಕ ಬೆಂಬಲ ನೀಡಲು ರಾಜಕೀಯ ಕಾರಣವೂ ಇದೆ. ಶ್ರೀಲಂಕಾದಲ್ಲಿ ಚೀನಾದ ಹಿಡಿತ ದಿನೇ ದಿನೇ ಹೆಚ್ಚುತ್ತಿದೆ. ಚೀನಾದ ಪ್ರಭಾವವನ್ನು ಸರಿದೂಗಿಸುವುದು ಅಥವಾ ಕಡಿಮೆ ಮಾಡುವುದು ಅಮೆರಿಕದ ಗುರಿ. ಈ ಹಿನ್ನೆಲೆಯಲ್ಲಿ ಕೊಲಂಬೋ ಪೋರ್ಟ್ ಯೋಜನೆಯಲ್ಲಿ ಅಮೆರಿಕವೂ ಶಾಮೀಲಾಗಲು ನಿರ್ಧರಿಸಿದಂತಿದೆ.

ಇದನ್ನೂ ಓದಿ: ಅದಾನಿ-ಹಿಂಡನ್ಬರ್ಗ್ ರಿಪೋರ್ಟ್, ಚೀನಾ ಬೆಂಬಲಿಗರ ಕರ್ಮಕಾಂಡ: ರಾಜ್ಯಸಭಾ ಸಂಸದ ಮಹೇಶ್ ಜೇಠ್ಮಲಾನಿ ಅರೋಪ

ಕೊಲಂಬೋದಲ್ಲಿ ಪೋರ್ಟ್ ಈಗಾಗಲೇ ಅಸ್ತಿತ್ವದಲ್ಲಿದೆ. ಅದರಲ್ಲಿ ವಿವಿಧ ಟರ್ಮಿನಲ್​ಗಳಿದ್ದು, ಇನ್ನೂ ಕೆಲ ಹೊಸ ಟರ್ಮಿನಲ್​ಗಳನ್ನು ನಿರ್ಮಿಸಲಾಗುತ್ತಿದೆ. ಅದರ ಒಂದು ಟರ್ಮಿನಲ್ ನಿರ್ಮಾಣದ ಗುತ್ತಿಗೆಯನ್ನು ಅದಾನಿ ಪೋರ್ಟ್ಸ್ ಅಂಡ್ ಎಸ್​ಇಝಡ್ ಕಂಪನಿಗೆ ವಹಿಸಲಾಗಿದೆ. ಇದೇ ಬಂದರಿನಲ್ಲಿ ಚೀನಾ ಬೇರೆ ಒಂದು ಟರ್ಮಿನಲ್ ನಿರ್ಮಿಸಿ ಅದನ್ನು ನಿರ್ವಹಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ