ಅದಾನಿ-ಹಿಂಡನ್ಬರ್ಗ್ ರಿಪೋರ್ಟ್, ಚೀನಾ ಬೆಂಬಲಿಗರ ಕರ್ಮಕಾಂಡ: ರಾಜ್ಯಸಭಾ ಸಂಸದ ಮಹೇಶ್ ಜೇಠ್ಮಲಾನಿ ಅರೋಪ
Adani-Hindenburg Case: ಅದಾನಿ ಹಿಂಡನ್ಬರ್ಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯಪೀಠ ಮಾಡಿದ ವಿಚಾರಣೆಯಿಂದ ಅದಾನಿ ಗ್ರೂಪ್ ಸಂಸ್ಥೆ ತುಸು ನಿರಾಳಗೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಸಭಾ ಸಂಸದ ಮಹೇಶ್ ಜೇಠ್ಮಲಾನಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ಕಿಡಿಕಾರಿದ್ದಾರೆ. ಹಿಂಡನ್ಬರ್ಗ್ ರಿಸರ್ಚ್ ರಿಪೋರ್ಟ್ ಹಿಂದೆ ಚೀನಾ ಬೆಂಬಲಿತ ಭಾರತೀಯ ಪಟಾಲಂನ ಕೈವಾಡ ಇದೆ ಎಂದಿದ್ದಾರೆ.
ನವದೆಹಲಿ, ನವೆಂಬರ್ 27: ಅದಾನಿ- ಹಿಂಡನ್ಬರ್ಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮೊನ್ನೆ (ನ. 24) ವ್ಯಕ್ತಪಡಿಸಿದ ಅಭಿಪ್ರಾಯಗಳು ಅದಾನಿ ಗ್ರೂಪ್ (Adani Group) ವಿರುದ್ಧ ಧ್ವನಿ ಎತ್ತಿದವರಿಗೆ ಹಿನ್ನಡೆ ತರುವಂತಿವೆ. ಸೆಬಿ ಬದಲು ನ್ಯಾಯಾಂಗ ಉಸ್ತುವಾರಿಯಲ್ಲಿ ವಿಶೇಷ ತಂಡದಿಂದ ತನಿಖೆ ಆಗಬೇಕು ಎಂಬ ಅರ್ಜಿದಾರರ ಮನವಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಹಿಂಡನ್ಬರ್ಗ್ ರಿಸರ್ಚ್ (Hindenburg research) ಪ್ರಕಟಿಸಿದ ವರದಿ ಅಥವಾ ಪತ್ರಿಕೆಯಲ್ಲಿ ಬಂದ ವರದಿಯನ್ನೇ ಅಂತಿಮ ಸತ್ಯ ಎಂಬು ಭಾವಿಸಬೇಕಿಲ್ಲ ಎಂದೂ ಹೇಳುವ ಮೂಲಕ ಸುಪ್ರೀಂಕೋರ್ಟ್ ನ್ಯಾಯಪೀಠ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಸದ್ಯಕ್ಕೆ ತೀರ್ಪನ್ನು ನ್ಯಾಯಪೀಠ ಕಾಯ್ದಿರಿಸಿದೆ. ತೀರ್ಪು ಇನ್ನೂ ಬರದೇ ಹೋದರೂ ಕೋರ್ಟ್ ಕಲಾಪಗಳು ಅದಾನಿ ವಿರುದ್ಧ ನಿಂತವರಿಗೆ ಮುಜುಗರ ತಂದಿರುವುದು ಹೌದು. ದೂರುದಾರರ ಪರ ವಕಾಲತ್ತು ವಹಿಸಿದ್ದವರು ಹಿರಿಯ ವಕೀಲ ಪ್ರಶಾಂತ್ ಭೂಷಣ್. ಇದೀಗ ಸುಪ್ರೀಂಕೋರ್ಟ್ನ ಮತ್ತೊಬ್ಬ ಹಿರಿಯ ವಕೀಲ ಹಾಗೂ ಬಿಜೆಪಿಯ ರಾಜ್ಯಸಭಾ ಸದಸ್ಯ ಮಹೇಶ್ ಜೇಠ್ಮಲಾನಿ ಅವರು ಈ ಪ್ರಕರಣದ ಬಗ್ಗೆ ಮಾತನಾಡಿದ್ದು, ಇದೆಲ್ಲವೂ ಚೀನೀ ಪ್ರಾಯೋಜಿತ ಭಾರತೀಯ ಪಟಾಲಂನ ಕುತಂತ್ರ ಎಂದು ಆರೋಪಿಸಿದ್ದಾರೆ.
ನವೆಂಬರ್ 24ರಂದು ನಡೆದ ಕೋರ್ಟ್ ವಿಚಾರಣೆಯಲ್ಲಿನ ಅಂಶಗಳನ್ನು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಮಹೇಶ್ ಜೇಠ್ಮಲಾನಿ ಪ್ರಸ್ತಾಪಿಸಿದ್ದಾರೆ. ‘ಭೂಷಣ್ ಅವರು ಫೈನಾನ್ಷಿಯಲ್ ಟೈಮ್ಸ್, ದಿ ಗಾರ್ಡಿಯನ್ ಮತ್ತು ಹಿಂಡನ್ಬರ್ಗ್ನಂತಹ ವಿದೇಶೀ ಮೂಲಗಳನ್ನು ನೆಚ್ಚಿಕೊಂಡರು. ಮಾತ್ರವಲ್ಲ, ಅವರೇ ನೀಡಿದ್ದ ಮಾಹಿತಿ ಆಧಾರದ ಮೇಲೆ ಒಸಿಸಿಆರ್ಪಿ ಎಂಬ ವಿದೇಶೀ ಎನ್ಜಿಒ ಸಿದ್ಧಪಡಿಸಿದ ವರದಿಯನ್ನೂ ಭೂಷಣ್ ಉಲ್ಲೇಖಿಸಿದ್ದರು…’ ಎಂದು ಮಹೇಶ್ ಜೇಠ್ಮಲಾನಿ ತಿಳಿಸಿದ್ದಾರೆ.
‘…ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಋಣಾತ್ಮಕವಾಗಿ ಬಿಂಬಿಸಲು ಹಪಹಪಿಸುವ ದಿಲ್ಲಿ ಪಟಾಲಂನ ಭಾಗವಾಗಿದ್ದಾರೆ ಈ ಭೂಷಣ್. ಈ ಹಿಂದೆ ಈ ಬಳಗದವರು ತಮ್ಮ ಹೋರಾಟಗಳಿಗೆ ಚೀನಾ ಬೆಂಬಲಿತ ಬಿಬಿಸಿಯ ಮೇಲೆ ಅವಲಂಬಿತವಾಗಿದ್ದರು…
‘ಅದಾನಿ ಗ್ರೂಪ್ ಬಗ್ಗೆ ಹಿಂಡನ್ಬರ್ಗ್ ವರದಿ ಪ್ರಕಟವಾಗಿದ್ದು ಚೀನಾ ಬೆಂಬಲಿತ ಭಾರತೀಯ ಪಟಾಲಂನ ಕೆಲಸ ಎಂಬುದಕ್ಕೆ ಸಾಕ್ಷ್ಯಾಧಾರ ದಟ್ಟವಾಗುತ್ತಿದೆ..’ ಎಂದು ಮಹೇಶ್ ಜೇಠ್ಮಲಾನಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಆರೋಪ ಮಾಡಿದ್ದಾರೆ.
Not for the first time has the #SupremeCourt called out #PrashantBhushan (see link) for spurious contentions based on suppression of material facts, reliance on fictitious material, unsubstantiated articles in the foreign media and reports of dubious NGOs. Yesterday in…
— Mahesh Jethmalani (@JethmalaniM) November 25, 2023
ಈ ಪೋಸ್ಟ್ನಲ್ಲಿ ಅವರು ಪ್ರಶಾಂತ್ ಭೂಷಣ್ ಅವರ ಹಿಂದಿನ ಹಲವು ನ್ಯಾಯಾಂಗ ಹಿನ್ನಡೆ ಮತ್ತು ವಿವಾದಗಳನ್ನು ಪಟ್ಟಿ ಮಾಡಿದ ಸುದ್ದಿಲೇಖನವೊಂದನ್ನು ಹಂಚಿಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ