ಕೇಂದ್ರ ಸರ್ಕಾರ, ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆ (EPFO) ಘೋಷಣೆ ಮಾಡಿರುವಂತೆ, ಕೊವಿಡ್-19 ಹೊರತಾಗಿ ಬೇರೆ ಕಾರಣಗಳಿಗೆ (ಸಾಮಾನ್ಯ ಸಾವು) ಕೇಂದ್ರೀಯ ಮಂಡಳಿ ಉದ್ಯೋಗಿಗಳಿಗೆ ಎಕ್ಸ್ಗ್ರೇಷಿಯಾ ಮರಣ ಪರಿಹಾರ ನಿಧಿಯಾಗಿ 8 ಲಕ್ಷ ರೂಪಾಯಿಗೆ ವಿಸ್ತರಣೆ ಮಾಡಲಾಗಿದೆ. ಎಕ್ಸ್ಗ್ರೇಷಿಯಾ ಮರಣ ಪರಿಹಾರ ನಿಧಿಯನ್ನು ರೂ. 4.20 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಿಸಲಾಗಿದೆ. ನವೆಂಬರ್ 2, 2021ರಂದು ಹೊರಡಿಸಲಾದ ಅಧಿಕೃತ ಹೇಳಿಕೆಯಲ್ಲಿ ಇದನ್ನು ತಿಳಿಸಲಾಗಿದೆ. “ಕೊವಿಡ್-19 ಕಾಯಿಲೆ ಹೊರತಾದ ಕಾರಣದಿಂದ ಮೃತಪಟ್ಟ ಕೇಂದ್ರೀಯ ಮಂಡಳಿಯ ಸಿಬ್ಬಂದಿಯ ಕುಟುಂಬ ಸದಸ್ಯರಿಗೆ (ನಾಮಿನಿಗಳು ಅಥವಾ ಕಾನೂನು ಉತ್ತರಾಧಿಕಾರಿಗಳು) ಕಲ್ಯಾಣ ನಿಧಿಯಿಂದ 8 ಲಕ್ಷ ರೂಪಾಯಿ ಮೊತ್ತವನ್ನು ಎಕ್ಸ್ಗ್ರೇಷಿಯಾ ಮರಣ ಪರಿಹಾರ ನಿಧಿಯಿಂದ ಪಾವತಿಸಲಾಗುವುದು,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ತಕ್ಷಣದಿಂದಲೇ ಈ ಸೂಚನೆಯು ಜಾರಿಗೆ ಬರಲಿದೆ ಎಂಬುದನ್ನು ಇಪಿಎಫ್ಒ ಸದಸ್ಯರು ಗಮನದಲ್ಲಿ ಇಟ್ಟುಕೊಳ್ಳಬೇಕು. ಈ ಅಧಿಸೂಚನೆ ಹೊರಡಿಸಿದ ನಂತರದ ದಿನಾಂಕದಲ್ಲಿ ಸಂಭವಿಸಿದ ಸಾವಿನ ಪ್ರಕರಣಗಳಿಗೆ ಅನ್ವಯ ಆಗುತ್ತದೆ. ಈ ಹಿಂದೆಯೇ ಹೇಳಿದಂತೆ ಎಕ್ಸ್ಗ್ರೇಷಿಯಾ ಮರಣ ಪರಿಹಾರ ನಿಧಿಯನ್ನು ಪಿಎಫ್ ಚಂದಾದಾರರ ನಾಮಿನಿಗಳಿಗೆ ಪಾವತಿ ಮಾಡಲಾಗುತ್ತದೆ. ಆದ್ದರಿಂದ ನಾಮಿನೇಷನ್ ಶೀಘ್ರದಲ್ಲೇ ಮಾಡಬೇಕು. ಯುಎಎನ್ ಮೂಲಕವಾಗಿ ಇ-ನಾಮಿನೇಷನ್ ಆನ್ಲೈನ್ನಲ್ಲಿ ಫೈಲ್ ಮಾಡಬಹುದು. ಆ ಮೂಲಕ ತಮ್ಮ ಕುಟುಂಬ ಸದಸ್ಯರಿಗೆ ಸಾಮಾಜಿಕ ಭದ್ರತೆ ಖಾತ್ರಿಪಡಿಸಬಹುದು. ಇದಕ್ಕಾಗಿ ಯುಎಎನ್ ಪೋರ್ಟಲ್ಗೆ ಲಾಗ್ ಇನ್ ಆಗಿ, ಸ್ವ ಘೋಷಣೆಯನ್ನು ಮಾಡಬೇಕು. ಇದಕ್ಕಾಗಿ ಉದ್ಯೋಗದಾತರಿಂದ ಯಾವುದೇ ದಾಖಲಾತಿಗಳು ಅಥವಾ ಮಂಜೂರಾತಿ ಅಗತ್ಯ ಇಲ್ಲ.
ಇಪಿಎಫ್ಒ ಪ್ರಕಾರವಾಗಿ, ಆನ್ಲೈನ್ನಲ್ಲಿ ಇ-ನಾಮಿನೇಷನ್ ಫೈಲ್ ಮಾಡುವುದರಿಂದ ಪ್ರಾವಿಡೆಂಟ್ ಫಂಡ್ (PF), ಪೆನ್ಷನ್ (EPS) ಮತ್ತು ಇನ್ಷೂರೆನ್ಸ್ (EDLI) ಅನುಕೂಲಗಳನ್ನು ಸದಸ್ಯರ ಸಾವಿನ ಸಂದರ್ಭದಲ್ಲಿ ಪಡೆಯಲು ಸಹಾಯ ಆಗುತ್ತದೆ. ಇದರರ್ಥ ಏನೆಂದರೆ, ಇಪಿಎಫ್ ಸದಸ್ಯರು ಶೀಘ್ರವಾಗಿ ಇ-ನಾಮಿನೇಷನ್ ಮಾಡಿಸಬೇಕು. ಇದಕ್ಕಾಗಿ, www.epfindia.gov.in> Services > For Employees > Member UAN/ Online Serviceಗೆ ಭೇಟಿ ನೀಡಬೇಕು.
ಇದನ್ನೂ ಓದಿ: Digital EPF, EPS Nomination: ಇಪಿಎಫ್, ಇಪಿಎಸ್ ನಾಮನಿರ್ದೇಶನ ಡಿಜಿಟಲಿ ಮಾಡುವುದು ಹೇಗೆ?