Explainer: ಭಾರತದ ನಿರ್ಧಾರಕ್ಕೆ ಅಮೆರಿಕದಲ್ಲಿ ಆಕ್ರೋಶ, ಒಂದು ಕುಟುಂಬಕ್ಕೆ ಕೇವಲ 9 ಕೆಜಿ ಅಕ್ಕಿ, ಎಚ್ಚರಿಕೆ ನೀಡಿದ IMF

|

Updated on: Jul 26, 2023 | 7:41 PM

ಯುಎಸ್​​ ಮಳಿಗೆಗಳಲ್ಲಿ ಅಕ್ಕಿ ಖರೀದಿಗಾಗಿ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ, ಭಾರತದಿಂದ ಬಾಸ್ಮತಿ ಅಲ್ಲದ ಬಿಳಿ ಅಕ್ಕಿ' ರಫ್ತು ನಿಷೇಧಿಸಿರುವುದರಿಂದ ಅಮೆರಿಕದಲ್ಲಿ ಅಕ್ಕಿಯ ಕೊರತೆ ಉಂಟಾಗಿದೆ, ಇದೀಗ ಈ ಬಗ್ಗೆ ಅಮೆರಿಕದಲ್ಲಿ ಭಾರತದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿದೆ.

Explainer: ಭಾರತದ ನಿರ್ಧಾರಕ್ಕೆ ಅಮೆರಿಕದಲ್ಲಿ ಆಕ್ರೋಶ, ಒಂದು ಕುಟುಂಬಕ್ಕೆ ಕೇವಲ 9 ಕೆಜಿ ಅಕ್ಕಿ, ಎಚ್ಚರಿಕೆ ನೀಡಿದ IMF
ವೈರಲ್​ ಫೋಟೋ
Follow us on

ಆರ್ಥಿಕ ಹಿಂಜರಿತದಿಂದ ಬಹಳ ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ಗೋಧಿ ಮತ್ತು ಹಿಟ್ಟಿಗಾಗಿ ಜನರು ಸರತಿ ಸಾಲಿನಲ್ಲಿ ನಿಂತಿರುವುದನ್ನು ನೀವು ನೋಡಿರಬಹುದು. ಇಂತಹದೇ ಪರಿಸ್ಥಿತಿ ಶ್ರೀಲಂಕಾದಲ್ಲೂ ಗ್ಯಾಸ್​​ ಸಿಲಿಂಡರ್​ ಮತ್ತು ಪೆಟ್ರೋಲ್‌ಗಾಗಿ ಜನ ಸಾಲು ನಿಂತಿದ್ದರು. ಕೆಲವು ವರ್ಷಗಳ ಹಿಂದೆ ಭಾರತದಲ್ಲೂ ಪಡಿತರ ಅಂಗಡಿಗಳಲ್ಲಿ ಈ ಸಾಲುಗಳನ್ನು ನೋಡಿರಬಹುದು, ಇದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಕಥೆ, ಆದರೆ ಜಗತ್ತಿಗೆ ದೊಡ್ಡಣ್ಣ ಮತ್ತು ಆರ್ಥಿಕತೆಯಲ್ಲಿ ಮುಂದಿರುವ ಅಮೆರಿಕಕ್ಕೆ ಈ ಸ್ಥಿತಿ ಬಂದಿರುವುದು ಅಘಾತಕಾರಿ ವಿಚಾರ. ಯುಎಸ್​​ ಮಳಿಗೆಗಳಲ್ಲಿ ಅಕ್ಕಿಗಾಗಿ ಜನರು ಸರತಿ ಸಾಲಿನಲ್ಲಿ ನಿಂತಿರುವುದನ್ನು ಎಲ್ಲ ಕಡೆ ಸುದ್ದಿಯಾಗುತ್ತಿದೆ. ಅಮೆರಿಕದಲ್ಲಿರುವ ಭಾರತೀಯರು ಮತ್ತು ಏಷ್ಯಾದ ಇತರ ದೇಶಗಳ ಜನರು ಇದೀಗ ಯುಎಸ್​​ ಮಳಿಗೆಗಳಲ್ಲಿ ಬಂದು ಬಾಸ್ಮತಿ ಅಕ್ಕಿಗಳನ್ನು ಸಂಗ್ರಹಿಸಿಡಲು ಸಾಲು ನಿಂತಿದ್ದಾರೆ.

ಈ ಪರಿಸ್ಥಿತಿಗೆ ಕಾರಣ ಜುಲೈ 20 ರಂದು, ಭಾರತ ಸರ್ಕಾರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ‘ಬಾಸ್ಮತಿ ಅಲ್ಲದ ಬಿಳಿ ಅಕ್ಕಿ’ ರಫ್ತು ನಿಷೇಧಿಸಿರುವುದು. ಭಾರತದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಅನೇಕ ಬೆಳೆಗಳು ನಾಶವಾಗಿದೆ. ಇನ್ನೂ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಮಳೆಯಿಂದಾಗಿ ಬೆಳೆ ನಾಶವಾಗಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಪ್ರವಾಹ ಮತ್ತು ಮಳೆಯಿಂದ ಉಂಟಾಗುವ ಇತರ ಸಂಕಷ್ಟಗಳ ಸಮಯದಲ್ಲಿ ಭಾರತಕ್ಕೆ ಬೇಕಾಗಬಹುದಾದ ಅಕ್ಕಿ ಸಂಗ್ರಹಕ್ಕಾಗಿ ಕೇಂದ್ರ ಸರ್ಕಾರ ಬಾಸ್ಮತಿ ವಿಧದ ಅಕ್ಕಿಗಳನ್ನು ಬಿಟ್ಟು ಉಳಿದ ಸಾಧಾರಣ ಅಕ್ಕಿಗಳ ರಫ್ತು ಮಾಡುವಂತಿಲ್ಲ ಎಂದು ಹೇಳಿದೆ.

ಇನ್ನೂ ವಿದೇಶಕ್ಕೆ ಹೆಚ್ಚಿನ ಅಕ್ಕಿಯನ್ನು ರಫ್ತು ಮಾಡಿದರೆ, ಈಗಾಗಲೇ ಹಣದುಬ್ಬರದಿಂದ ಕಂಗೆಟ್ಟಿರುವ ಭಾರತ ಸರ್ಕಾರಕ್ಕೆ ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಏರಿಕೆಯಾಗಬಹುದು ಎಂಬ ಆತಂಕ. ಈ ಹಿಂದೆ 2022ರ ಸೆಪ್ಟೆಂಬರ್‌ನಲ್ಲಿಯೂ ಭಾರತ ನುಚ್ಚಕ್ಕಿ (broken rice) ರಫ್ತು ನಿಷೇಧಿಸಿತ್ತು. ಅದೇ ಸಮಯದಲ್ಲಿ, ಬಾಸ್ಮತಿ ಅಲ್ಲದ ಅಕ್ಕಿಯ ರಫ್ತಿನ ಮೇಲೆ 20 ಪ್ರತಿಶತ ಸುಂಕವನ್ನು ಹೆಚ್ಚಿಸಿತ್ತು. ಈ ಸಮಯದಲ್ಲೂ ವಿದೇಶಕ್ಕೆ ನೀಡುವ ಅಕ್ಕಿಯ ಬೆಲೆಯನ್ನು ಹೆಚ್ಚಿಸುವ ಕೆಲಸವನ್ನು ಭಾರತ ಸರ್ಕಾರ ಮಾಡಿತ್ತು.

ಇದನ್ನೂ ಓದಿ: ಭಾರತದಿಂದ ಅಕ್ಕಿ ರಫ್ತು ನಿಷೇಧ; ಹಲವು ದೇಶಗಳಲ್ಲಿ ಆತಂಕ; ಅಮೆರಿಕ, ಕೆನಡಾದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಜನರು

ಅಮೆರಿಕದಲ್ಲಿ ಅಕ್ಕಿ ಕೊರತೆ

ಅಮೆರಿಕಾದಲ್ಲಿ ಭಾರತ ಸೇರಿದಂತೆ ಏಷ್ಯಾ ದೇಶಗಳ ಜನರು ವಾಸಿಸುತ್ತಿದ್ದು, ಅವರಲ್ಲಿ ಹೆಚ್ಚಿನ ಜನರು ಅಕ್ಕಿಯನ್ನು ಉಪಯೋಗ ಮಾಡುತ್ತಿದ್ದಾರೆ. ಇನ್ನೂ ಅಮೆರಿಕದಲ್ಲಿ ದಕ್ಷಿಣ ಭಾರತದ ಜನರು ಹೆಚ್ಚಾಗಿ ವಾಸ ಮಾಡುತ್ತಿದ್ದು, ಇವರು ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ಬಳಸುತ್ತಾರೆ. ಇದೀಗ ಕೇಂದ್ರ ಸರ್ಕಾರದ ಅಕ್ಕಿ ರಫ್ತು ನಿಷೇಧ ಆದೇಶದ ಸುದ್ದಿ ಅವರಿಗೆ ದೊಡ್ಡ ಶಾಕ್​​ ನೀಡಿದೆ. ಇದರಿಂದ ಯುಎಸ್ ಮಳಿಗೆಗಳಲ್ಲಿ ಹೆಚ್ಚಿನ ಭಾರತೀಯರು ಜಮಾಯಿಸುತ್ತಿದ್ದಾರೆ.

‘ಒಂದು ಕುಟುಂಬಕ್ಕೆ ಒಂದು ಪ್ಯಾಕೆಟ್ ಅಕ್ಕಿ ನಿಯಮ’

ಯುಎಸ್​ ಮಳಿಗೆಗಳಿಗೆ ಬರುತ್ತಿರುವ ಜನರನ್ನು ನೋಡಿ ಅಲ್ಲಿನ ಮಾಲೀಕರು ಭಯಗೊಂಡಿದ್ದಾರೆ. ಸಂಗ್ರಹಣೆ ಮಾಡಿದ ಅಕ್ಕಿಗಳು ಖಾಲಿಯಾಗುತ್ತಿದೆ. ಮಳಿಗೆ ಮುಂದೆ ಸಾಲು ನಿಂತಿರುವ ಜನರನ್ನು ನಿಯಂತ್ರಿಸಲು ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ಇನ್ನೂ ಅಕ್ಕಿಯ ಕೊರತೆಯಿಂದ ಒಂದು ಕುಟುಂಬಕ್ಕೆ ಒಂದು ಪ್ಯಾಕೆಟ್ ಅಕ್ಕಿ ನಿಯಮ ಜಾರಿಗೆ ತಂದಿದ್ದಾರೆ. ಅಂದರೆ ಒಂದು ಕುಟುಂಬ ಒಂದು ಪ್ಯಾಕೆಟ್ ಅಕ್ಕಿಯನ್ನು ಮಾತ್ರ ಖರೀದಿಸಬೇಕು ಎಂದು ಹೇಳಿದ್ದಾರೆ.

ಪ್ರತಿ ಕುಟುಂಬಕ್ಕೆ ಕೇವಲ 9 ಕೆಜಿ ಅಕ್ಕಿ

ಅಮೆರಿಕದಲ್ಲಿ ಈ ಹಿಂದೆ ಕೊರನಾ ಸಮಯದಲ್ಲಿ ಟಿಶ್ಯೂ ಪೇಪರ್ ಮತ್ತು ಟಾಯ್ಲೆಟ್ ಪೇಪರ್ ಕೊರತೆ ಉಂಟಾಗಿತ್ತು, ಇನ್ನೂ ಭಾರತದಲ್ಲಿ ಒಂದು ಕಾಲದಲ್ಲಿ ಉಪ್ಪಿನ ಕೊರತೆಯಿಂದ ಅದರ ಬೆಲೆಯನ್ನು ಹೆಚ್ಚಿಸಲಾಗಿತ್ತು. ಇದೀಗ ಅಮೆರಿಕದಲ್ಲಿ ಇದೆ ಪರಿಸ್ಥಿತಿ ಉಂಟಾಗಿದೆ. ಪ್ರಮಾಣಿತ ಪ್ಯಾಕಿಂಗ್ 20 ಪೌಂಡು ಅಕ್ಕಿ ಅಂದರೆ 9.07ಕೆ.ಜಿ ಮಾತ್ರ ನೀಡಲಾಗುತ್ತಿದೆ. ಇದರ ಮೊದಲ ಬೆಲೆ 16ರಿಂದ 18 ಡಾಲರ್​​ (1,310 ರೂ.ರಿಂದ 1,392.56 ರೂ.) ಇತ್ತು. ಇದೀಗ 50 (4102.56 ರೂ.) ಡಾಲರ್ ಆಗಿದೆ.

IMF ಎಚ್ಚರಿಕೆ – ಹಣದುಬ್ಬರ ಹೆಚ್ಚಾಗುತ್ತದೆ

ಭಾರತವು ಅಕ್ಕಿ ರಫ್ತು ನಿಷೇಧದ ಬಗ್ಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಹ ಎಚ್ಚರಿಕೆ ನೀಡಿದೆ. ಇನ್ನೂ ಆಹಾರದ ಬೆಲೆ ಮತ್ತು ಕೊರತೆ ಉಂಟಾದರೆ ಖಂಡಿತ ಹಣದುಬ್ಬರವನ್ನು ಹೆಚ್ಚುತ್ತದೆ ಎಂದು ಅರ್ಥಶಾಸ್ತ್ರಜ್ಞ ಪಿಯರೆ-ಒಲಿವಿಯರ್ ಗೊರಿನ್ಹಾಸ್ ಹೇಳಿದ್ದಾರೆ.

ಭಾರತವು ವಿಶ್ವದ ಅತಿದೊಡ್ಡ ರಫ್ತುದಾರರಲ್ಲಿ ಒಂದಾಗಿದೆ. ಜಾಗತಿಕ ಅಕ್ಕಿ ವ್ಯಾಪಾರ ಸುಮಾರು 40 ಪ್ರತಿಶತವು ಭಾರತದೊಂದಿಗೆ ನಡೆಸಲಾಗುತ್ತದೆ. ಇನ್ನೂ ಭಾರತವು 140 ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡುತ್ತದೆ. ಬಾಸ್ಮತಿ ಹಾಗೂ ಬಾಸ್ಮತಿ ಅಲ್ಲದ ಅಕ್ಕಿ ರಫ್ತು ಮಾಡುವುದರಲ್ಲಿ ಪ್ರಮುಖ ಪಾಲು ಹೊಂದಿದೆ. ಭಾರತದಿಂದ ಅಮೆರಿಕ, ಮಲೇಷಿಯಾ, ಸೊಮಾಲಿಯಾ, ಗಿನಿಯಾ ಮುಂತಾದ ದೇಶಗಳೂ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತವೆ.

2022-23ರ ಆರ್ಥಿಕ ವರ್ಷದಲ್ಲಿ ಭಾರತದ ಅಕ್ಕಿ ರಫ್ತು $ 11 ಶತಕೋಟಿ (ಸುಮಾರು 90,180 ಕೋಟಿ ರೂ.) ತಲುಪಿದೆ. ಇದು ಕಳೆದ ವರ್ಷಕ್ಕಿಂತ ಶೇ 16ರಷ್ಟು ಹೆಚ್ಚು. ಭಾರತವು ಪ್ರತಿ ವರ್ಷ ಸುಮಾರು 21 ಮಿಲಿಯನ್ ಟನ್ ಅಕ್ಕಿಯನ್ನು ರಫ್ತು ಮಾಡುತ್ತದೆ. ಇದರಲ್ಲಿ ಬಾಸ್ಮತಿ ಅಕ್ಕಿಯ ಪಾಲು ಸುಮಾರು 50 ಲಕ್ಷ ಟನ್. ಬಾಸ್ಮತಿ ಮತ್ತು ಇತರ ಅಕ್ಕಿಯ ವ್ಯಾಪಾರದಲ್ಲಿ ಭಾರತದ ಪಾಲು ಪ್ರಪಂಚದಲ್ಲಿ 80 ಪ್ರತಿಶತದಷ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:37 pm, Wed, 26 July 23