Nykaa Falguni Nayar: ವಿಶ್ವದ ಶ್ರೀಮಂತ ಮಹಿಳೆಯರ ಸಾಲಲ್ಲಿ ನೈಕಾದ ಫಲ್ಗುಣಿ ನಾಯರ್; ಆಸ್ತಿ ಮೌಲ್ಯ 48,257 ಕೋಟಿ ರೂ.

| Updated By: Srinivas Mata

Updated on: Nov 10, 2021 | 1:50 PM

ನೈಕಾ ಕಂಪೆನಿ ಷೇರುಪೇಟೆ ಲಿಸ್ಟಿಂಗ್ ಭರ್ಜರಿ ಯಶಸ್ಸಿನೊಂದಿಗೆ ಫಲ್ಗುಣಿ ನಾಯರ್ ಅವರು ಬ್ಲೂಮ್​ಬರ್ಗ್​ ಬಿಲಿಯನೇರ್​ ಸೂಚ್ಯಂಕದ ಸೆಲ್ಫ್​ ಮೇಡ್ ಬಿಲಿಯನೇರ್ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

Nykaa Falguni Nayar: ವಿಶ್ವದ ಶ್ರೀಮಂತ ಮಹಿಳೆಯರ ಸಾಲಲ್ಲಿ ನೈಕಾದ ಫಲ್ಗುಣಿ ನಾಯರ್; ಆಸ್ತಿ ಮೌಲ್ಯ 48,257 ಕೋಟಿ ರೂ.
ಫಲ್ಗುಣಿ ನಾಯರ್ (ಸಂಗ್ರಹ ಚಿತ್ರ)
Follow us on

ಸೌಂದರ್ಯವರ್ಧಕಗಳ ಸ್ಟಾರ್ಟ್ಅಪ್ ನೈಕಾದ (Nykaa) ಸಂಸ್ಥಾಪಕರಾದ ಫಲ್ಗುಣಿ ನಾಯರ್ ಅವರು ಭಾರತದ ಅತ್ಯಂತ ಶ್ರೀಮಂತ ಸೆಲ್ಫ್ ಮೇಡ್ ಮಹಿಳಾ ಬಿಲಿಯನೇರ್ ಆಗಿದ್ದಾರೆ. ಇದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ತಿಳಿದುಬಂದಿರುವ ಅಂಶ. ನೈಕಾ ಕಂಪೆನಿಯ ಷೇರುಗಳು ಬುಧವಾರ ಅತ್ಯುತ್ತಮವಾಗಿ ಷೇರು ಮಾರುಕಟ್ಟೆಗೆ ಪದಾರ್ಪಣೆ ಮಾಡಿತು. ಫಲ್ಗುಣಿ ನಾಯರ್ ಅವರು ನೈಕಾ ಕಂಪೆನಿಯಲ್ಲಿ ಅರ್ಧದಷ್ಟು ಮಾಲೀಕತ್ವ ಹೊಂದಿದ್ದಾರೆ. ಬುಧವಾರದಂದು ಷೇರುಪೇಟೆಯಲ್ಲಿ ಕಂಪೆನಿಯ ಷೇರು ವಹಿವಾಟನ್ನು ಪ್ರಾರಂಭಿಸಿದಾಗ ಶೇ 89ರಷ್ಟು ಏರಿಕೆಯಾದ ಕಾರಣ ಈಗ ಅವರ ಆಸ್ತಿ ಮೌಲ್ಯ 650 ಕೋಟಿ ಅಮೆರಿಕನ್ ಡಾಲರ್ ಆಗಿದೆ. FSN ಇ-ಕಾಮರ್ಸ್ ವೆಂಚರ್ಸ್, ನೈಕಾದ ಮಾತೃಸಂಸ್ಥೆ. ಇದು ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟ್​ ಆದ ಮಹಿಳೆ ನೇತೃತ್ವದ ಭಾರತದ ಮೊದಲ ಯುನಿಕಾರ್ನ್ ಆಗಿದೆ.

ಮಾಜಿ ಇನ್​ವೆಸ್ಟ್‌ಮೆಂಟ್ ಬ್ಯಾಂಕರ್ ಫಲ್ಗುಣಿ ನಾಯರ್ 2012ರಲ್ಲಿ ಸ್ಥಾಪಿಸಿದ ಮಹಿಳೆ ನೇತೃತ್ವದ ಯುನಿಕಾರ್ನ್ ತನ್ನ ವೆಬ್‌ಸೈಟ್, ಅಪ್ಲಿಕೇಷನ್ ಮತ್ತು 80ಕ್ಕೂ ಹೆಚ್ಚು ಮಳಿಗೆಗಳ ಮೂಲಕ 4,000 ಸೌಂದರ್ಯ, ಪರ್ಸನಲ್ ಕೇರ್ ಮತ್ತು ಫ್ಯಾಷನ್ ಬ್ರ್ಯಾಂಡ್‌ಗಳನ್ನು ಒದಗಿಸುತ್ತದೆ. ಐಐಎಂ ಅಹಮದಾಬಾದ್‌ನಿಂದ ಪದವಿ ಪಡೆದ ನಂತರ, ಫಲ್ಗುಣಿ ಅವರು AF ಫರ್ಗುಸನ್ ಮತ್ತು ಕಂಪೆನಿಯೊಂದಿಗೆ ಕನ್ಸಲ್ಟಿಂಗ್​ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಕೊಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ 18 ವರ್ಷಗಳನ್ನು ಕಳೆದಿದ್ದು, ಹಲವಾರು ವ್ಯವಹಾರಗಳನ್ನು ಮುನ್ನಡೆಸಿದ್ದಾರೆ. ಕೊಟಕ್ ಮಹೀಂದ್ರಾ ಇನ್​ವೆಸ್ಟ್‌ಮೆಂಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಮತ್ತು ಕೊಟಕ್ ಸೆಕ್ಯುರಿಟೀಸ್‌ನಲ್ಲಿ ನಿರ್ದೇಶಕರಾಗಿದ್ದರು (ಬ್ಯಾಂಕ್​ನ ಸಾಂಸ್ಥಿಕ ಷೇರುಗಳ ವಿಭಾಗ).

1600ಕ್ಕೂ ಹೆಚ್ಚು ಮಂದಿಯಿದ್ದ ತಂಡವನ್ನು ಮುನ್ನಡೆಸಿಕೊಂಡು, ಫಲ್ಗುಣಿ ಅವರು ಸೌಂದರ್ಯವರ್ಧಕ ಮತ್ತು ಜೀವನಶೈಲಿಯ (Lifestyle) ರೀಟೇಲ್ ಸಾಮ್ರಾಜ್ಯವನ್ನು ನಿರ್ಮಿಸಿದ್ದು, ನೈಕಾ ಭಾರತದ ಪ್ರಮುಖ ಸೌಂದರ್ಯವರ್ಧಕ ರೀಟೇಲ್ ಸಂಸ್ಥೆಯಾಗಿ ಹೊರಹೊಮ್ಮಿದೆ. ತನ್ನದೇ ಆದ ಖಾಸಗಿ ಲೇಬಲ್ ಸೇರಿದಂತೆ 1500+ ಬ್ರ್ಯಾಂಡ್‌ಗಳ ಪೋರ್ಟ್‌ಫೋಲಿಯೋದೊಂದಿಗೆ ಆನ್‌ಲೈನ್‌ನಲ್ಲಿ ಮತ್ತು ಭಾರತದಲ್ಲಿ 68 ಅಂಗಡಿಗಳಲ್ಲಿ ಲಭ್ಯವಿದೆ. ನೈಕಾ ಲಾಭದಾಯಕ ಕಂಪೆನಿಯಾಗಿದ್ದು, ಸಾರ್ವಜನಿಕ ಮಾರುಕಟ್ಟೆಗಳಲ್ಲಿ ಪದಾರ್ಪಣೆ ಮಾಡುವ ಇಂಟರ್ನೆಟ್ ಸ್ಟಾರ್ಟ್‌ಅಪ್‌ಗಳಲ್ಲಿ ಅಪರೂಪವಾಗಿದೆ. ನಾಯರ್ ತಮ್ಮ ಕಂಪೆನಿಯ ಪಾಲನ್ನು ಎರಡು ಕುಟುಂಬ ಟ್ರಸ್ಟ್‌ಗಳು ಮತ್ತು ಮತ್ತು ಏಳು ಇತರ ಪ್ರವರ್ತಕ ಘಟಕಗಳ ಮೂಲಕ ಹೊಂದಿದ್ದಾರೆ. ವಿವಿಧ ನೈಕಾ ಘಟಕಗಳನ್ನು ನಡೆಸುತ್ತಿರುವ ನಾಯರ್​ ಅವರ ಮಗಳು ಮತ್ತು ಮಗ ಕೂಡ ಪ್ರವರ್ತಕರಲ್ಲಿ ಸೇರಿದ್ದಾರೆ.

ಇದನ್ನೂ ಓದಿ: Top 10 Richest Indians: ಫೋರ್ಬ್ಸ್​ ಇಂಡಿಯಾ ಭಾರತದ ಅತಿ ಶ್ರೀಮಂತರ ಟಾಪ್​ 10 ಪಟ್ಟಿ ಇಲ್ಲಿದೆ; ಯಾರಿಗೆ ಯಾವ ಸ್ಥಾನ?