FASTag: ಒಂದು ವರ್ಷ, 3,000 ರೂ, 200 ಟ್ರಿಪ್; ಬಂದಿದೆ ಫಾಸ್​ಟ್ಯಾಗ್ ವಾರ್ಷಿಕ ಪಾಸ್; ಪಡೆಯುವ ಕ್ರಮ ತಿಳಿದಿರಿ

FASTag Annual Pass full details: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಸ್ಕೀಮ್ ಅನ್ನು ಆಗಸ್ಟ್ 16ರಂದು ಬಿಡುಗಡೆ ಮಾಡಿದೆ. 3,000 ರೂ ಮೊತ್ತದ ಈ ಪಾಸ್​ನ ವ್ಯಾಲಿಡಿಟಿ ಒಂದು ವರ್ಷ ಇರುತ್ತದೆ. ಇದನ್ನು ಬಳಸಿ 200 ಟೋಲ್ ಟ್ರಿಪ್ ಮಾಡಬಹುದು. ಹೆದ್ದಾರಿ ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ಪಾಸ್ ಸಿಗುತ್ತದೆ. ಅಥವಾ ರಾಜಮಾರ್ಗ ಯಾತ್ರ ಎನ್ನುವ ಆ್ಯಪ್ ಮೂಲಕ ಇದನ್ನು ಪಡೆಯಬಹುದು.

FASTag: ಒಂದು ವರ್ಷ, 3,000 ರೂ, 200 ಟ್ರಿಪ್; ಬಂದಿದೆ ಫಾಸ್​ಟ್ಯಾಗ್ ವಾರ್ಷಿಕ ಪಾಸ್; ಪಡೆಯುವ ಕ್ರಮ ತಿಳಿದಿರಿ
ಫಾಸ್​ಟ್ಯಾಗ್

Updated on: Aug 18, 2025 | 3:56 PM

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಿಡುಗಡೆ ಆಗಿರುವ ಫಾಸ್​ಟ್ಯಾಗ್ ವಾರ್ಷಿಕ ಪಾಸ್​ಗೆ (FASTag annual pass) ಸಾಕಷ್ಟು ಸ್ಪಂದನೆ ಸಿಕ್ಕಿದೆ. ಖಾಸಗಿ ವಾಹನ ಮಾಲೀಕರು ರಾಜಮಾರ್ಗ ಯಾತ್ರಾ (Rajmarg Yatra) ಎನ್ನುವ ಮೊಬೈಲ್ ಆ್ಯಪ್ ಮೂಲಕ ಫಾಸ್​ಟ್ಯಾಗ್ ಪಾಸ್ ಅನ್ನು ಪಡೆಯಬಹುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ವಹಿಸುವ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಈ ಪಾಸ್ ಅನ್ನು ಬಳಸಬಹುದು.

ಯಾವುದಿದು ಫಾಸ್​ಟ್ಯಾಗ್ ಆ್ಯನುಯಲ್ ಪಾಸ್?

ರೆಗ್ಯುಲರ್ ಫಾಸ್​ಟ್ಯಾಗ್​ನಲ್ಲಿ ಪ್ರೀಪೇಡ್ ವ್ಯಾಲಟ್ ಇರುತ್ತದೆ. ವಾರ್ಷಿಕ ಪಾಸ್ ಬೆಲೆ 3,000 ರೂ ಆಗುತ್ತದೆ. ಒಂದು ವರ್ಷದವರೆಗೆ ವ್ಯಾಲಿಡಿಟಿ ಇರುತ್ತದೆ. 200 ಬಾರಿ ಟೋಲ್ ದಾಟಬಹುದು. ಒಂದು ವರ್ಷದೊಳಗೆ ನೀವು 200 ಟ್ರಿಪ್ ದಾಟಿದರೆ ಪ್ರತೀ ಟ್ರಿಪ್​ಗೆ ರೆಗ್ಯುಲರ್ ಟೋಲ್ ಶುಲ್ಕ ಅನ್ವಯ ಆಗುತ್ತದೆ.

ನೀವು ಒಂದು ವರ್ಷದೊಳಗೆ 200 ಕ್ಕಿಂತ ಕಡಿಮೆ ಟ್ರಿಪ್ ಮಾಡಿದ್ದರೆ ಕ್ಯಾರಿವೋವರ್ ಇರುವುದಿಲ್ಲ. ನೀವು ಮುಂದುವರಿಸಬೇಕೆಂದರೆ ಮತ್ತೆ ರೀಚಾರ್ಜ್ ಮಾಡಿಸಬೇಕಾಗುತ್ತದೆ. ಅಥವಾ ವ್ಯಾಲಟ್ ಮೂಲಕ ರೆಗ್ಯುಲರ್ ಫಾಸ್​ಟ್ಯಾಗ್ ಬಳಸಬೇಕಾಗುತ್ತದೆ.

ಫಾಸ್​ಟ್ಯಾಗ್ ಯಾರು ಪಡೆಯಬಹುದು?

ಫಾಸ್​ಟ್ಯಾಗ್ ಪಾಸುಗಳು ಖಾಸಗಿ ನೊಂದಾಯಿತ ಕಾರು, ಜೀಪು, ವ್ಯಾನುಗಳಿಗೆ ಲಭ್ಯ ಇರುತ್ತವೆ. ಬಸ್ಸು, ಟ್ರಕ್ ಇತ್ಯಾದಿ ಕಮರ್ಷಿಯಲ್ ವಾಹನಗಳಿಗೆ ಈ ವಾರ್ಷಕ ಪಾಸ್ ಸಿಕ್ಕೋದಿಲ್ಲ.

ಇದನ್ನೂ ಓದಿ: ಜಿಎಸ್​ಟಿಯಿಂದ ಹಿಡಿದು ರುಪಾಯಿವರೆಗೆ ಷೇರು ಮಾರುಕಟ್ಟೆಗೆ ಉತ್ಸಾಹ ಹೆಚ್ಚಿಸಿದ ಅಂಶಗಳು

ರಾಜ್ಯ ಹೆದ್ದಾರಿಗಳಿಗೆ ವಾರ್ಷಿಕ ಪಾಸ್ ಅನ್ವಯ ಆಗಲ್ಲ…

ರಾಜ್ಯ ಸರ್ಕಾರಗಳಿಂದ ನಿರ್ವಹಿಸಲಾಗುವ ರಾಜ್ಯ ಹೆದ್ದಾರಿಗಳು, ಎಕ್ಸ್​ಪ್ರೆಸ್​ವೇಗಳು, ಸ್ಥಳೀಯ ಸಂಸ್ಥೆಗಳಿಂದ ನಿರ್ವಹಿಸಲಾಗುವ ಹೆದ್ದಾರಿಗಳು, ಇಲ್ಲಿ ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಅನ್ನು ಬಳಸಲು ಆಗುವುದಿಲ್ಲ. ಇಂಥ ಹೆದ್ದಾರಿಗಳಲ್ಲಿ ರೆಗ್ಯುಲರ್ ಫಾಸ್​ಟ್ಯಾಗ್ ಬಳಸಬಹುದು.

ಹೆದ್ದಾರಿ ಸಚಿವಾಲಯದ ಎಕ್ಸ್ ಪೋಸ್ಟ್

ರಾಜ್ಯ ಸರ್ಕಾರದಿಂದ ನಿರ್ವಹಿಸುವ ಹೆದ್ದಾರಿಗಳು ಕರ್ನಾಟಕದಲ್ಲಿ ಬಹಳ ಇವೆ. ಶ್ರೀರಂಗಪಟ್ಟಣ, ನಾಗಮಂಗಲದಿಂದ ಹಿಡಿದು ಸಿಂಧನೂರು, ಜೀವರ್ಗಿವರೆಗೆ 611 ಕಿಮೀ ಉದ್ದದ ರಾಜ್ಯ ಹೆದ್ದಾರಿ ಇದೆ.

ರಾಯಚೂರಿನಿಂದ ಹಿಡಿದು ಬೆಳಗಾವಿ, ಬಾಚಿವರೆಗೆ 354 ಕಿಮೀ ಉದ್ದದ ರಾಜ್ಯ ಹೆದ್ದಾರಿ ಇದೆ. ಹೀಗೆ ಒಟ್ಟು 28,311 ಕಿಮೀ ಉದ್ದದ 115 ರಾಜ್ಯ ಹೆದ್ದಾರಿಗಳು ಕರ್ನಾಟಕದಲ್ಲಿವೆ. ಇಲ್ಲೆಲ್ಲಾ ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಅನ್ವಯ ಆಗಲ್ಲ. ಬೆಂಗಳೂರಿನಲ್ಲಿರುವ ನೈಸ್ ರಸ್ತೆಯಲ್ಲೂ ಈ ಪಾಸ್ ಬಳಸುವ ಹಂಗಿಲ್ಲ.

ರಾಷ್ಟ್ರೀಯ ಹೆದ್ದಾರಿ ಮತ್ತು ರಾಷ್ಟ್ರೀಯ ಎಕ್ಸ್​ಪ್ರೆಸ್​ವೇಗಳಲ್ಲಿ ಮಾತ್ರ ಫಾಸ್​ಟ್ಯಾಗ್ ಆ್ಯನುಯಲ್ ಪಾಸ್ ಅನ್ನು ಬಳಸಬಹುದು.

ಇದನ್ನೂ ಓದಿ: ನಾಲ್ಕಲ್ಲ, ಎರಡೇ ಸ್ಲ್ಯಾಬ್; ಸರ್ಕಾರ ತರುತ್ತಿದೆ ಹೊಸ ಜಿಎಸ್​ಟಿ ಸುಧಾರಣೆ; ಇಲ್ಲಿದೆ ಟ್ಯಾಕ್ಸ್ ದರ ಕಡಿಮೆ ಆಗುವ ಸರಕುಗಳು

ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಪಡೆಯುವ ಕ್ರಮ

ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಅನ್ನು ರಾಜಮಾರ್ಗ್ ಯಾತ್ರ ಎನ್ನುವ ಆ್ಯಪ್​ನಲ್ಲಿ ಪಡೆಯಬಹುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕೃತ ವೆಬ್​ಸೈಟ್​ನಲ್ಲೂ ಇದನ್ನು ಪಡೆಯಬಹುದು. ರಾಜಮಾರ್ಗ ಆ್ಯಪ್​ನಲ್ಲಿ ಸುಲಭವಾಗಿ ಪಡೆಯುವ ವಿಧಾನ ಇಲ್ಲಿದೆ:

  • ರಾಜಮಾರ್ಗ್ ಯಾತ್ರ ಆ್ಯಪ್ ಡೌನ್​ಲೋಡ್ ಮಾಡಿ. ಮೊಬೈಲ್ ನಂಬರ್ ಅಥವಾ ಗೂಗಲ್ ಐಡಿ ಬಳಸಿ ಲಾಗಿನ್ ಆಗಿರಿ.
  • ಲಾಗಿನ್ ಆದ ಬಳಿಕ ಮುಖ್ಯ ಪರದೆಯಲ್ಲಿ ‘ಆ್ಯನುಯಲ್ ಪಾಸ್’ ಆಯ್ಕೆ ಕಾಣಬಹುದು. ಅಲ್ಲಿ ನೀವು ‘ಆ್ಯಕ್ಟಿವೇಟ್’ ಬಟನ್ ಒತ್ತಿರಿ.
  • ಇದಾದ ಬಳಿಕ ನಿಮ್ಮ ವೆಹಿಕಲ್ ರಿಜಿಸ್ಟ್ರೇಶನ್ ನಂಬರ್ (ವಿಆರ್​ಎನ್) ಕೇಳಲಾಗುತ್ತೆ.
  • ನಿಮ್ಮ ರೆಗ್ಯುಲರ್ ಫಾಸ್​ಟ್ಯಾಗ್ ಅಕೌಂಟ್​ನಲ್ಲಿ ಒಂದಷ್ಟು ಬ್ಯಾಲನ್ಸ್ ಇರುವಂತೆ ನೋಡಿಕೊಳ್ಳಿ. ನಿಮ್ಮ ವಾಹನವು ಬ್ಲ್ಯಾಕ್​ಲಿಸ್ಟ್, ಹಾಟ್​ಲಿಸ್ಟ್ ಆಗಿರಕೂಡದು. ಇ-ನೋಟೀಸ್ ಕೂಡ ಪಡೆದಿರಬಾರದು.
  • ನಿಮ್ಮ ವಾಹನ ನೊಂದಣಿ ಸಂಖ್ಯೆ ನಮೂದಿಸಿದ ಬಳಿಕ ವಾಹನದ ವಿವರ ಪ್ರತ್ಯಕ್ಷವಾಗುತ್ತದೆ. ನಿಮ್ಮ ವಾಹನವು ಪಾಸ್​ಗೆ ಅರ್ಹವೋ ಇಲ್ಲವೋ ಎಂಬುದನ್ನೂ ತಿಳಿಸಲಾಗುತ್ತದೆ.
  • ವಿವರ ಸರಿ ಇದ್ದರೆ ಒಟಿಪಿ ಮೂಲಕ ದೃಢಪಡಿಸಿರಿ. ನಂತರ ಆನ್​ಲೈನ್​ನಲ್ಲಿ 3,000 ರೂ ಹಣ ಪಾವತಿಸಬೇಕು.
  • ಇದಾಗಿ ಒಂದೆರಡು ಗಂಟೆಯಲ್ಲಿ ವಾರ್ಷಿಕ ಪಾಸ್ ಸಕ್ರಿಯಗೊಳ್ಳುತ್ತದೆ. ಈ ಸಂಬಂಧ ಎಸ್ಸೆಮ್ಮೆಸ್ ಮೆಸೇಜ್ ಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Mon, 18 August 25