ನಾಲ್ಕಲ್ಲ, ಎರಡೇ ಸ್ಲ್ಯಾಬ್; ಸರ್ಕಾರ ತರುತ್ತಿದೆ ಹೊಸ ಜಿಎಸ್ಟಿ ಸುಧಾರಣೆ; ಇಲ್ಲಿದೆ ಟ್ಯಾಕ್ಸ್ ದರ ಕಡಿಮೆ ಆಗುವ ಸರಕುಗಳು
Govt bringing next gen GST reforms: ಸರ್ಕಾರ ಇದೇ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮುಂದಿನ ತಲೆಮಾರಿನ ಜಿಎಸ್ಟಿ ಸುಧಾರಣೆಗಳನ್ನು ತರಬಹುದು. ನಾಲ್ಕು ಸ್ಲ್ಯಾಬ್ಗಳಿರುವ ಜಿಎಸ್ಟಿ ದರಗಳನ್ನು ಎರಡು ಸ್ಲ್ಯಾಬ್ಗಳಿಗೆ ಇಳಿಸುವ ಆಲೋಚನೆಯಲ್ಲಿದೆ ಸರ್ಕಾರ. ಶೇ. 5 ಮತ್ತು ಶೇ. 18ರ ಸ್ಲ್ಯಾಬ್ಗಳು ಮಾತ್ರ ಇರಲಿವೆ. ಶೇ. 12 ಮತ್ತು ಶೇ. 28 ಸ್ಲ್ಯಾಬ್ ರದ್ದಾಗಬಹುದು.

ನವದೆಹಲಿ, ಆಗಸ್ಟ್ 17: ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಲ್ಲಿ (GST) ಮತ್ತಷ್ಟು ಸುಧಾರಣೆ ತರಲು ಮತ್ತು ಸರಳಗೊಳಿಸಲು ಸರ್ಕಾರ ಮಹತ್ವದ ನಿರ್ಧಾರ ತಳೆದಿದೆ. ವರದಿಗಳ ಪ್ರಕಾರ ಜಿಎಸ್ಟಿ ದರಗಳು ಗಣನೀಯವಾಗಿ ತಗ್ಗಲಿವೆ. ದರ ಕಡಿಮೆಗೊಳ್ಳಲಿರುವುದು ಮಾತ್ರವಲ್ಲ, ಟ್ಯಾಕ್ಸ್ ಸ್ಲ್ಯಾಬ್ಗಳ ಸಂಖ್ಯೆಯೂ ಕಡಿಮೆ ಆಗಬಹುದು. ನಾಲ್ಕು ಇದ್ದ ಜಿಎಸ್ಟಿ ಸ್ಲ್ಯಾಬ್ಗಳನ್ನು ಎರಡಕ್ಕೆ ಇಳಿಸಲು ಸರ್ಕಾರ ಯೋಜಿಸಿದೆ. ಅಷ್ಟೇ ಅಲ್ಲ, ಮುಂಬರುವ ವರ್ಷಗಳಲ್ಲಿ ಒಂದು ರಾಷ್ಟ್ರ ಒಂದು ತೆರಿಗೆ ದರ ಎನ್ನುವ ನೀತಿ ಜಾರಿಗೆ ಬರಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆಯ ಸ್ವಾತಂತ್ರ್ಯೋತ್ಸವ ಭಾಷದಲ್ಲಿ ಮುಂದಿನ ತಲೆಮಾರಿನ ಜಿಎಸ್ಟಿ ಸುಧಾರಣೆ ತರುತ್ತಿರುವುದಾಗಿಯೂ ಹೇಳಿದ್ದರು.
ಎರಡು ಸ್ಲ್ಯಾಬ್ಗಳು ಮಾತ್ರ ಇರಲಿವೆ…
ಸದ್ಯ ಜಿಎಸ್ಟಿ ಸಿಸ್ಟಂನಲ್ಲಿ ನಾಲ್ಕು ಟ್ಯಾಕ್ಸ್ ಸ್ಲ್ಯಾಬ್ಗಳಿವೆ. ಶೇ. 5, ಶೇ. 12, ಶೇ. 18 ಮತ್ತು ಶೇ. 28 ಟ್ಯಾಕ್ಸ್ ಸ್ಲ್ಯಾಬ್ ದರಗಳಿವೆ. ಇವುಗಳ ಪೈಕಿ ಶೇ. 5 ಮತ್ತು ಶೇ. 18 ಅನ್ನು ಮಾತ್ರವೇ ಉಳಿಸಿಕೊಳ್ಳಲಾಗುವುದು ಎಂದು ಸರ್ಕಾರ ಪ್ರಸ್ತಾಪ ಮಾಡಿದೆ. ಶೇ. 12ರ ಟ್ಯಾಕ್ಸ್ ಸ್ಲ್ಯಾಬ್ನಲ್ಲಿರುವ ಸರಕುಗಳನ್ನು ಶೇ. 5ರ ಸ್ಲ್ಯಾಬ್ಗೆ ತರಬಹುದು. ಇನ್ನುಳಿದವನ್ನು ಶೇ. 18ರ ಟ್ಯಾಕ್ಸ್ ಸ್ಲ್ಯಾಬ್ಗೆ ತರುವ ಪ್ರಸ್ತಾಪವನ್ನು ಸರ್ಕಾರ ಮಾಡಿದೆ. ತಂಬಾಕು, ಮದ್ಯದಂತಹ ಪಾಪದ ಸರಕುಗಳಿಗೆ ಶೇ. 40ರಷ್ಟು ಸಿನ್ ಟ್ಯಾಕ್ಸ್ ಹಾಕಬಹುದು.
ಇದನ್ನೂ ಓದಿ: ಭಾರತದ ಕ್ರೆಡಿಟ್ ರೇಟಿಂಗ್ ಹೆಚ್ಚಳದ ಬಳಿಕ ಎಸ್ಬಿಐ ಸೇರಿದಂತೆ 10 ಬ್ಯಾಂಕುಗಳ ರೇಟಿಂಗ್ ಅಪ್ಗ್ರೇಡ್ ಮಾಡಿದ ಎಸ್ ಅಂಡ್ ಪಿ
ಸರ್ಕಾರಕ್ಕೆ ಸಾಕಷ್ಟು ತೆರಿಗೆ ಆದಾಯ ನಷ್ಟ
ಶೇ. 12 ಮತ್ತು ಶೇ. 28ರ ಟ್ಯಾಕ್ಸ್ ಸ್ಲ್ಯಾಬ್ಗಳನ್ನು ತೆಗೆದುಹಾಕುವುದರಿಂದ ಹಲವಾರು ವಸ್ತುಗಳಿಗೆ ಜಿಎಸ್ಟಿ ದರ ಗಣನೀಯವಾಗಿ ಇಳಿಕೆ ಆಗಲಿದೆ. ಇದರಿಂದ ಸರ್ಕಾರಕ್ಕೆ ಸಾಕಷ್ಟು ಆದಾಯ ನಷ್ಟ ಆಗಬಹುದು.
ಜಿಎಸ್ಟಿ ದರ ಇಳಿಕೆಯಾಗಲಿರುವ ಸರಕುಗಳು
ಶೇ. 12ರಿಂದ ಶೇ. 5ರ ಜಿಎಸ್ಟಿಗೆ ಇಳಿಯಬಹುದಾದ ವಸ್ತುಗಳು: ಹಣ್ಣಿನ ಜ್ಯೂಸ್, ಡ್ರೈಫ್ರೂಟ್, ಬೆಣ್ಣೆ ಇತ್ಯಾದಿ ವಸ್ತುಗಳು.
ಶೇ. 28ರಿಂದ ಶೇ. 18ಕ್ಕೆ ಟ್ಯಾಕ್ಸ್ ಇಳಿಯಬಹುದಾದ ಸರಕುಗಳು: ಎಸಿ, ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಸಿಮೆಂಟ್ ಇತ್ಯಾದಿ.
ಇದನ್ನೂ ಓದಿ: ಸೋಲಾರ್ ಶಕ್ತಿ: ಐತಿಹಾಸಿಕ ಸೆಂಚುರಿ ಭಾರಿಸಿದ ಭಾರತ; 100 ಗಿ.ವ್ಯಾ. ಸೋಲಾರ್ ಪಿವಿ ಮಾಡ್ಯೂಲ್ ತಯಾರಿಕಾ ಸಾಮರ್ಥ್ಯ
ಸರ್ಕಾರದ ಲೆಕ್ಕಾಚಾರ ಏನು?
ಜಿಎಸ್ಟಿ ದರಗಳನ್ನು ಇಳಿಸುವುದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ ಮೊತ್ತದ ಟ್ಯಾಕ್ಸ್ ಆದಾಯ ಕಡಿಮೆ ಆಗುತ್ತದೆ. ಆದರೆ, ಜನರಿಗೆ ಟ್ಯಾಕ್ಸ್ ಹೊರೆ ಕಡಿಮೆ ಆಗುವುದರಿಂದ ಅನುಭೋಗ ಹೆಚ್ಚಬಹುದು. ಅದರ ಪರಿಣಾಮವಾಗಿ ಆರ್ಥಿಕತೆಗೆ ಪುಷ್ಟಿ ಸಿಗಬಹುದು ಎಂಬುದು ಸರ್ಕಾರ ಎಣಿಕೆ. ಹೀಗಾಗಿ, ದಿಟ್ಟವಾಗಿ ಜಿಎಸ್ಟಿ ಸುಧಾರಣೆ ತರಲು ಸರ್ಕಾರ ಹೆಜ್ಜೆ ಹಾಕಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




