Union Budget 2023: ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್; ನಿರ್ಮಲಾ ಸೀತಾರಾಮನ್

| Updated By: Ganapathi Sharma

Updated on: Jan 04, 2023 | 2:06 PM

ವಿದೇಶಿ ಹೂಡಿಕೆಯನ್ನು ಭಾರತಕ್ಕೆ ಸೆಳೆಯಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ದೇಶದಲ್ಲಿ ಹೂಡಿಕೆ ಮಾಡಲು ಬಯಸುವ ಉದ್ದಿಮೆಗಳಿಗಾಗಿ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Union Budget 2023: ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್; ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us on

ನವದೆಹಲಿ: ದೇಶದ ಮುಂದಿನ 25 ವರ್ಷಗಳ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ (Budget) ಸಿದ್ಧಪಡಿಸಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ‘ಫೆಡರೇಷನ್ ಆಫ್​ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ (FICCI)’ 95ನೇ ವಾರ್ಷಿಕ ಸಮಾವೇಶದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ಈ ಹಿಂದಿನ ಬಜೆಟ್​ಗಳಲ್ಲಿ ಇದ್ದ ಉತ್ತೇಜನಗಳು ಈ ಬಜೆಟ್​ನಲ್ಲಿಯೂ (Union Budget 2023) ಇರಲಿವೆ. ಪಾಶ್ಚಾತ್ಯ ದೇಶಗಳು ಆರ್ಥಿಕ ಹಿಂಜರಿತ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಉತ್ಪಾದನಾ ಉದ್ದಿಮೆಗಳು ಭಾರತದಲ್ಲಿ ಉತ್ಪಾದನೆ ಎದುರುನೋಡಬಹುದಾಗಿದೆ. ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

ವಿದೇಶಿ ಹೂಡಿಕೆಯನ್ನು ಭಾರತಕ್ಕೆ ಸೆಳೆಯಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ದೇಶದಲ್ಲಿ ಹೂಡಿಕೆ ಮಾಡಲು ಬಯಸುವ ಉದ್ದಿಮೆಗಳಿಗಾಗಿ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಯುರೋಪ್ ಸೇರಿದಂತೆ ಅಭಿವೃದ್ಧಿಹೊಂದಿದ ದೇಶಗಳ ಕಂಪನಿಗಳನ್ನು ಆಕರ್ಷಿಸಲು ಕಾರ್ಯತಂತ್ರವನ್ನು ರೂಪಿಸುವ ಅಗತ್ಯವಿದೆ. ಆ ದೇಶಗಳ ಕಂಪನಿಗಳು ಚೀನಾದಿಂದ ತಮ್ಮ ಉತ್ಪಾದನಾ ನೆಲೆಯನ್ನು ಬೇರೆಡೆ ಸ್ಥಳಾಂತರಿಸಲು ಅವಕಾಶಗಳನ್ನು ಅರಸುತ್ತಿರಬಹುದು ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಪಾಶ್ಚಾತ್ಯ ದೇಶಗಳ ಆರ್ಥಿಕ ಹಿಂಜರಿತ ಭಾರತಕ್ಕೆ ಹೂಡಿಕೆದಾರರನ್ನು ಸೆಳೆಯಲು ಅವಕಾಶ; ನಿರ್ಮಲಾ ಸೀತಾರಾಮನ್

ಜಿ20 ಅಧ್ಯಕ್ಷತೆಯನ್ನು ವೇದಿಕೆಯಾಗಿ ಬಳಸಿಕೊಂಡು ಭಾರತವು ಉತ್ತಮ ಹೂಡಿಕೆ ತಾಣ ಎಂಬುದನ್ನು ಬಿಂಬಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಲಿದೆ. ದೇಶವು ಪ್ರಸ್ತುತ ವಿಶ್ವದಲ್ಲಿ ಅತಿ ವೇಗದ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ, ಪಾಶ್ಚಾತ್ಯ ದೇಶಗಳ ಸಂಭಾವ್ಯ ಆರ್ಥಿಕ ಹಿಂಜರಿತವು ಭಾರತಕ್ಕೆ ಹೂಡಿಕೆದಾರರನ್ನು ಸೆಳೆಯಲು ಅವಕಾಶವಾಗಿದೆ ಎಂದು ಅವರು ಹೇಳಿದ್ದರು. ಪಾಶ್ಚಿಮಾತ್ಯ ದೇಶಗಳ ಆರ್ಥಿಕ ಹಿಂಜರಿತವನ್ನು ಅವಕಾಶವನ್ನಾಗಿ ಮಾಡಿಕೊಂಡು ದೇಶದಲ್ಲಿ ಹೂಡಿಕೆ ಮಾಡುವಂತೆ ಕಂಪನಿಗಳನ್ನು ಸೆಳೆಯಬೇಕು. ದೇಶದ ಅಮೃತ ಕಾಲದ ಸಂದರ್ಭದಲ್ಲಿ ಉದ್ಯಮಗಳು ಕೊಡುಗೆಯನ್ನು ಹೆಚ್ಚಿಸಬೇಕು ಎಂದು ಅವರು ಕರೆ ನೀಡಿದ್ದರು. ಭಾರತದ ಅಮೃತ ಕಾಲವು ನಿಮ್ಮನ್ನು (ಉದ್ದಿಮೆಗಳನ್ನು ಉದ್ದೇಶಿಸಿ) ಕಾಯುತ್ತಿದೆ. ಇದನ್ನು ಚೆನ್ನಾಗಿ ಬಳಸಿಕೊಳ್ಳಿ ಮತ್ತು ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯ ಕೊಡುಗೆ ನೀಡಿ ಎಂದು ನಿರ್ಮಲಾ ಸೀತಾರಾಮನ್ ಕರೆ ನೀಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:14 am, Sat, 17 December 22