ನವದೆಹಲಿ, ಆಗಸ್ಟ್ 29: ಫಸ್ಟ್ಕ್ರೈ ಡಾಟ್ ಕಾಮ್ (FirstCry.Com) ಸೇರಿದಂತೆ ಮೂವರು ಸ್ಟಾರ್ಟಪ್ಗಳ ಸಂಸ್ಥಾಪಕ ಸುಪಮ್ ಮಹೇಶ್ವರಿ (Supam Maheshwari) ವಿರುದ್ಧ ತೆರಿಗೆ ವಂಚನೆಯ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಐಟಿ ಇಲಾಖೆಯಿಂದ ತನಿಖೆ ನಡೆಯುತ್ತಿದ್ದು, ಸುಪಮ್ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಬ್ಲೂಮ್ಬರ್ಗ್ ಮಾಧ್ಯಮ ಸಂಸ್ಥೆ ಈ ಬಗ್ಗೆ ಮೂಲಗಳ ಮಾಹಿತಿ ಆಧರಿಸಿ ವರದಿ ಮಾಡಿದೆ. ಸುಪಮ್ ಮಹೇಶ್ವರಿ ಅವರು ಫಸ್ಟ್ ಕ್ರೈ ಡಾಟ್ ಕಾಮ್ ಅಲ್ಲದೇ ಗ್ಲೋಬಲ್ ಬೀಸ್ ಬ್ರ್ಯಾಂಡ್ಸ್ ಲಿ (Globalbees Brands Ltd) ಮತ್ತು ಎಕ್ಸ್ಪ್ರೆಸ್ಬೀಸ್ (xPressbees) ಎಂಬ ಕಂಪನಿಗಳ ಸಂಸ್ಥಾಪಕರೂ ಹೌದು. ಈ ಮೂರೂ ಕಂಪನಿಗಳು ಯೂನಿಕಾರ್ನ್ ಸಂಸ್ಥೆಗಳೆನಿಸಿವೆ.
ಸುಪಮ್ ಮಹೇಶ್ವರಿ ಮೇಲೆ ತೆರಿಗೆ ಕಳ್ಳತನದ ಆರೋಪ ಇರುವುದು ತಿಳಿದುಬಂದಿದೆ. ಖಾಸಗಿ ಒಡೆತನದ ಫಸ್ಟ್ಕ್ರೈ ಸಂಸ್ಥೆಯಲ್ಲಿ ನಡೆದ ಷೇರು ವಹಿವಾಟಿನ ವೇಳೆ 50 ಮಿಲಿಯನ್ ಡಾಲರ್ನಷ್ಟು (ಸುಮಾರು 400 ಕೋಟಿ ರೂ) ತೆರಿಗೆ ಪಾವತಿಯನ್ನು ತಪ್ಪಿಸಲಾಗಿದೆ. ಅಷ್ಟು ತೆರಿಗೆ ಯಾಕೆ ಪಾವತಿಸಿಲ್ಲ ಎಂದು ಪ್ರಶ್ನಿಸಿ ಸುಪಮ್ ಮಹೇಶ್ವರಿ ಅವರಿಗೆ ಐಟಿ ಇಲಾಖೆ ನೋಟೀಸ್ ನೀಡಿದೆ ಎಂದು ಬ್ಲೂಮ್ಬರ್ಗ್ ವರದಿ ಹೇಳುತ್ತದೆ.
ಸುಪಮ್ ಮಹೇಶ್ವರಿ ಮಾತ್ರವಲ್ಲ, ಫಸ್ಟ್ ಕ್ರೈ ಸಂಸ್ಥೆಯ ಆರಕ್ಕೂ ಹೆಚ್ಚು ಹೂಡಿಕೆದಾರರಿಗೂ ಇಲಾಖೆಯಿಂದ ನೋಟೀಸ್ ಹೋಗಿದೆಯಂತೆ. ಇದರಲ್ಲಿ ಕ್ರಿಸ್ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಕೋ, ಸುನೀಲ್ ಭಾರ್ತಿ ಮಿತ್ತಲ್ರ ಕುಟುಂಬ ಕಚೇರಿಯೂ ಇದೆ ಎನ್ನಲಾಗಿದೆ. ತನಿಖೆ ಸಂಬಂಧ ಇವರೆಲ್ಲರಿಗೂ ಐಟಿ ನೋಟೀಸ್ ಹೋಗಿದೆ.
ಬ್ಲೂಮ್ಬರ್ಗ್ ವರದಿ ಪ್ರಕಾರ ಫಸ್ಟ್ ಕ್ರೈ ಸಂಸ್ಥಾಪಕ ಸುಪಮ್ ಮಹೇಶ್ವರಿ ಅವರು ಆದಾಯ ತೆರಿಗೆ ಇಲಾಖೆಯ ಸಂಪರ್ಕದಲ್ಲಿದ್ದು, ಸ್ಪಷ್ಟನೆ ಒದಗಿಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: ಜಿಯೋ ಭಾರತ್, ಏರ್ಫೈಬರ್, ಸ್ಮಾರ್ಟ್ ಹೋಮ್, ಇನ್ಷೂರೆನ್ಸ್, ಅನಿಲ ಉತ್ಪಾದನೆ; ರಿಲಾಯನ್ಸ್ ಮಹಾಸಭೆಯ ಮುಖ್ಯಾಂಶಗಳು
ನವಜಾತ ಶಿಶುಗಳಿಗೆ ಅಗತ್ಯವಾಗಿರುವ ಬಟ್ಟೆ ಮತ್ತಿತರ ವಸ್ತುಗಳಿಗೆ ಆನ್ಲೈನ್ ಮಾರುಕಟ್ಟೆ ಸ್ಥಳವಾಗಿರುವ ಫಸ್ಟ್ ಕ್ರೈ ಆರಂಭದ ಕೆಲ ವರ್ಷಗಳ ಕಾಲ ಸತತವಾಗಿ ನಷ್ಟ ಅನುಭವಿಸಿತ್ತು. 2021ರ ಹಣಕಾಸು ವರ್ಷದಲ್ಲಿ ಮೊದಲ ಬಾರಿಗೆ ಲಾಭ ಮಾಡಿತ್ತು. ಈಗ ಅದು ಐಪಿಒ ಮಾರುಕಟ್ಟೆಗೆ ಲಗ್ಗೆ ಇಡಲು ಯತ್ನಿಸುತ್ತಿದೆ. ಲಾಭದ ಹಳಿಗೆ ಬಂದು ಐಪಿಒಗೆ ಹೋಗುತ್ತಿರುವ ಕೆಲವೇ ಸ್ಟಾರ್ಟಪ್ಗಳಲ್ಲಿ ಫಸ್ಟ್ ಕ್ರೈ ಒಂದು.
ಇದೀಗ, ಫಸ್ಟ್ ಕ್ರೈ ಮಾಲೀಕರ ವಿರುದ್ಧ ತೆರಿಗೆ ವಂಚನೆ ಆರೋಪ ಬಂದಿರುವುದು ಅದರ ಐಪಿಒ ನಡೆಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇಲ್ಲದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ