ನವದೆಹಲಿ: ಮುಂದಿನ ಆರು ವಾರಗಳಲ್ಲಿ ಮುಕ್ತ ಮಾರುಕಟ್ಟೆಗೆ 30 ಲಕ್ಷ ಮೆಟ್ರಿಕ್ ಟನ್ ಗೋಧಿ ಬಿಡುಗಡೆ ಮಾಡಲು ಭಾರತೀಯ ಆಹಾರ ನಿಗಮವು (FCI) ಟೆಂಡರ್ ಕರೆಯುತ್ತಿದ್ದಂತೆಯೇ ದೇಶದಲ್ಲಿ ಗೋಧಿ ದರ (Wheat Price) ತುಸು ಇಳಿಕೆಯಾಗಿದೆ. ಎರಡು ದಿನಗಳ ಹಿಂದಷ್ಟೇ ದೇಶದಾದ್ಯಂತ ಮಾರುಕಟ್ಟೆಗಳಲ್ಲಿ ಗೋಧಿ ಮತ್ತು ಗೋಧಿ ಹಿಟ್ಟಿನ (wheat flour) ದರ ದಶಕದ ಗರಿಷ್ಠ ಮಟ್ಟ ತಲುಪಿದ್ದು, ಕ್ವಿಂಟಲ್ಗೆ 2,950 ರೂ. ಆಗಿತ್ತು. ಶುಕ್ರವಾರ ಸಂಜೆ ವೇಳೆಗೆ ಮಧ್ಯ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದ ಮಂಡಿಗಳಲ್ಲಿ ಗೋಧಿ ದರ ಶೇ 10ರಷ್ಟು ಇಳಿಕೆಯಾಗಿದೆ. ಇದೀಗ ವ್ಯಾಪಾರಿಗಳು ಪ್ರತಿ ಕ್ವಿಂಟಲ್ಗೆ 200 ರೂ.ನಷ್ಟು ದರ ಕಡಿತಗೊಳಿಸಿದ್ದಾರೆ ಎಂದು ಸಿಹೋರ್ನ ವ್ಯಾಪಾರಿ ಗಗನ್ ಗುಪ್ತಾ ತಿಳಿಸಿರುವುದಾಗಿ ‘ಪೈನಾನ್ಶಿಯಲ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಗೋಧಿ ದಾಸ್ತಾನು ಇಟ್ಟಿರುವ ವ್ಯಾಪಾರಿಗಳೆಲ್ಲ ಈಗ ಮಾರುಕಟ್ಟೆಗೆ ಬಿಡಲು ಆರಂಭಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
2022-23ನೇ ಹಣಕಾಸು ವರ್ಷದ ಏಪ್ರಿಲ್-ಜೂನ್ ಅವಧಿಯ ಕನಿಷ್ಠ ಬೆಂಬಲ ಬೆಲೆಗಿಂತಲೂ ಮಂಡಿಗಳಲ್ಲಿ ಶೇ 40ರಿಂದ 45ರಷ್ಟು ಹೆಚ್ಚು ದರ ನಿಗದಿಯಾಗಿತ್ತು. ಕಳೆದ ವರ್ಷದ ಕಡಿಮೆ ಉತ್ಪಾದನೆಯಿಂದಾಗಿ ಪೂರೈಕೆಯಲ್ಲೂ ವ್ಯತ್ಯಯವಾಗಿತ್ತು. ಮುಂದಿನ ಹಣಕಾಸು ವರ್ಷಕ್ಕೆ ಕನಿಷ್ಠ ಬೆಂಬಲ ಬೆಲೆ ಪ್ರತಿ ಕ್ವಿಂಟಲ್ಗೆ 2,125 ರೂ. ನಿಗದಿಯಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಫೆಬ್ರವರಿ ಮಧ್ಯಭಾಗದ ವೇಳೆಗೆ ಗೋಧಿ ಮತ್ತು ಗೋಧಿ ಹಿಟ್ಟಿನ ದರ ಇನ್ನಷ್ಟು ಕಡಿಮೆಯಾಗಲಿದೆ. ದೊಡ್ಡ ಮಟ್ಟದ ಖರೀದಿದಾರರು ಭಾರತೀಯ ಆಹಾರ ನಿಗಮದ ಹರಾಜಿನಿಂದ ಗೋಧಿ ಖರೀದಿಸುತ್ತಿದ್ದಂತೆಯೇ ದರ ಇಳಿಕೆಯಾಗಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Wheat Price: ಗೋಧಿ ದರ ಭಾರೀ ಏರಿಕೆ, ನಿಯಂತ್ರಿಸಲು ಸರ್ಕಾರ ಸಾಹಸ
ದರ ಇಳಿಕೆಗಾಗಿ ಮುಕ್ತ ಮಾರುಕಟ್ಟೆಗೆ ಗೋಧಿ ಬಿಡುಗಡೆ ಮಾಡುವುದರಿಂದ ಆಹಾರ ನಿಗಮಕ್ಕೆ ಪ್ರತಿ ಕೆಜಿ ಗೋಧಿಗೆ 2-3 ರೂ. ನಷ್ಟವಾಗಲಿದೆ ಎಂದು ಎಫ್ಸಿಐ ಅಧ್ಯಕ್ಷ ಅಶೋಕ್ ಮೀನಾ ತಿಳಿಸಿದ್ದಾರೆ.
ಗೋಧಿ ದರ ಏರಿಕೆ ನಿಯಂತ್ರಣಕ್ಕಾಗಿ ಆಹಾರ ನಿಗಮದಿಂದ 30 ಲಕ್ಷ ಮೆಟ್ರಿಕ್ ಟನ್ ಗೋಧಿ ಬಿಡುಗಡೆ ಮಾಡಲಾಗುವುದು. ಪ್ರತಿ ಹಿಟ್ಟಿನ ಗಿರಣಿಯವರಿಗೆ ಮತ್ತು ದೊಡ್ಡ ಮಟ್ಟದ ಖರೀದಿದಾರರಿಗೆ ಇ-ಹರಾಜಿನ ಮೂಲಕ ಗರಿಷ್ಠ 3,000 ಮೆಟ್ರಿಕ್ ಟನ್ ಗೋಧಿ ವಿತರಣೆ ಮಾಡಲು ಉದ್ದೇಶಿಸಲಾಗಿದೆ. ಜತೆಗೆ ನೇರವಾಗಿ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗುತ್ತದೆ ಎಂದು ಆಹಾರ ಸಚಿವಾಲಯದ ಗುರುವಾರ ತಿಳಿಸಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವರ ಸಮಿತಿ ಬುಧವಾರ ಅನುಮೋದನೆ ನೀಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Sat, 28 January 23