G20 Meeting: ಉದ್ಯೋಗ ಸೃಷ್ಟಿಸುವವರ ತಾಣವಾಗುತ್ತಿದೆ ಭಾರತ; ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ
ಭಾರತದ ಯುವಕರು ಕೆಲಸ ಹುಡುಕುವುದರ ಬದಲಾಗಿ ಉದ್ಯೋಗ ಸೃಷ್ಟಿಸುವವರಾಗಲು ಬಯಸುತ್ತಾರೆ. ಭಾರತವು ಉದ್ಯೋಗ ಸೃಷ್ಟಿಸುವವರ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದರು.

ಬೆಂಗಳೂರು: ಭಾರತದ ಯುವಕರು ಕೆಲಸ ಹುಡುಕುವುದರ (Job-Seekers) ಬದಲಾಗಿ ಉದ್ಯೋಗ ಸೃಷ್ಟಿಸುವವರಾಗಲು ಬಯಸುತ್ತಾರೆ. ಭಾರತವು ಉದ್ಯೋಗ ಸೃಷ್ಟಿಸುವವರ (Job Creators) ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಜಿ. ಕಿಶನ್ ರೆಡ್ಡಿ (G. Kishan Reddy) ಹೇಳಿದರು. ಇಂದಿನ ಯುವಕರು ಕೆಲಸ ಹುಡುಕುವ ಬದಲು ತಾವೇ ಉದ್ಯೋಗ ಸೃಷ್ಟಿಕರ್ತರಾಗಲು ಬಯಸುತ್ತಾರೆ. ಸ್ಟಾರ್ಟಪ್ಗಳ ಸ್ಥಾಪನೆಗೆ ಭಾರತ ಪ್ರಶಸ್ತ ತಾಣವಾಗಿದೆ. ದೇಶದಲ್ಲಿ ಸುಮಾರು 85,000 ನೋಂದಾಯಿತ ಸ್ಟಾರ್ಟಪ್ಗಳಿವೆ. 100ಕ್ಕೂ ಹೆಚ್ಚು ಯೂನಿಕಾರ್ನ್ ಕಂಪನಿಗಳಿವೆ. ಇವುಗಳ ಮೌಲ್ಯ ಸುಮಾರು 350 ಶತಕೋಟಿ ಡಾಲರ್ ಆಗಿದೆ. ಈ ವಿಚಾರದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಸಚಿವರು ತಿಳಿಸಿದರು. ಹೈದರಾಬಾದ್ನಲ್ಲಿ ನಡೆದ ‘ಜಿ-20 ಸ್ಟಾರ್ಟ್ಅಪ್ 20 ಎಂಗೇಜ್ಮೆಂಟ್ ಗ್ರೂಪ್’ನಲ್ಲಿ ಅವರು ಮಾತನಾಡಿದರು.
ಸ್ಟಾರ್ಟಪ್ಗಳ ಮೂಲಕ ನಮ್ಮ ಯುವಕರು ಉದ್ಯೋಗ ಸೃಷ್ಟಿಕರ್ತರಾಗಲು ಬಯಸುತ್ತಿದ್ದಾರೆ. ನಮ್ಮ ಸ್ಟಾರ್ಟಪ್ಗಳು ಹೊಸ ಉತ್ಪನ್ನಗಳು, ಅನುಭವಗಳನ್ನು ಅನ್ವೇಷಿಸುವ ಹಾಗೂ ಇವುಗಳಿಗಾಗಿ ಹೂಡಿಕೆ ಮಾಡುವ ತಾಣಗಳಾಗುತ್ತಿವೆ. ಇದು ನಮ್ಮ ಸ್ಟಾರ್ಟಪ್ ವ್ಯವಸ್ಥೆಯ ಯಶಸ್ಸು ಹಾಗೂ ಉತ್ಸಾಹ ಅವುಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಸರ್ಕಾರ ನೀಡುತ್ತಿರುವ ಆದ್ಯತೆಯ ಸಂಕೇತವಾಗಿದೆ. ನಮ್ಮಲ್ಲಿರುವ ದೊಡ್ಡ ಸಂಖ್ಯೆಯ ಪ್ರತಿಭಾವಂತ ಜನಸಂಖ್ಯೆಯು ಬಾರತವನ್ನು ಮಾದರಿ ಹೂಡಿಕೆ ತಾಣವನ್ನಾಗಿಸಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Google Layoffs: ಇದು ನೋಡಿ ದುರದೃಷ್ಟ; ಬೇರೊಬ್ಬರಿಗೆ ಕೆಲಸ ಕೊಡಿಸಲು ಸಂದರ್ಶನ ಮಾಡುತ್ತಿದ್ದಾಗಲೇ ಬಂತು ವಜಾ ಸಂದೇಶ
ಸ್ಟಾರ್ಟಪ್ಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಕೈಗೊಂಡಿರುವ ಅನೇಕ ಕ್ರಮಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು. 1.25 ಶತಕೋಟಿ ಡಾಲರ್ ಅನುದಾನದೊಂದಿಗೆ ಆರಂಭಿಸಿರುವ (10,000 ಕೋಟಿ ರೂ.) ‘ಫಂಡ್ ಆಫ್ ಫಂಡ್ಸ್ ಫಾರ್ ಸ್ಟಾರ್ಟಪ್ (FFS) ಸ್ಕೀಮ್’ ಹಾಗೂ ಇತರ ಯೋಜನೆಗಳ ಬಗ್ಗೆ ಅವರು ಮಾಹಿತಿ ನೀಡಿದರು. ಕಳೆದ ಏಳು ವರ್ಷಗಳಲ್ಲಿ ‘ಗ್ಲೋಬಲ್ ಇನ್ನೋವೇಷನ್ ಇಂಡೆಕ್ಸ್’ನಲ್ಲಿ ಭಾರತ 41 ಸ್ಥಾನ ಜಿಗಿದಿದೆ ಎಂದೂ ಅವರು ಹೇಳಿದರು.
ಭಾರತವು 2022ರ ಡಿಸೆಂಬರ್ನಲ್ಲಿ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಒಂದು ವರ್ಷ ಕಾಲ ಜಿ20 ಅಧ್ಯಕ್ಷ ಸ್ಥಾನ ಭಾರತದ್ದಾಗಿರಲಿದೆ. ಈ ಅವಧಿಯಲ್ಲಿ ಸರಣಿ ಸಭೆಗಳನ್ನು ಆಯೋಜಿಸಲಾಗುತ್ತಿದೆ. ದೇಶದ 56 ಕಡೆಗಳಲ್ಲಿ 200ಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸಲಾಗುತ್ತಿದ್ದು, 9 ದೇಶಗಳ 1 ಲಕ್ಷಕ್ಕೂ ಹೆಚ್ಚು ಮಂದಿಯ ನಿಯೋಗಗಳು ಭಾಗವಹಿಸುವ ನಿರೀಕ್ಷೆ ಇದೆ. ಮೊದಲ ಸಭೆಗಳು ರಾಜಸ್ಥಾನದ ಉದಯಪುರದಲ್ಲಿ ಡಿಸೆಂಬರ್ 4ರಿಂದ 7ರ ವರೆಗೆ ನಡೆದಿದ್ದವು. ಬಳಿಕ ಬೆಂಗಳೂರು, ಮುಂಬೈ ಸೇರಿದಂತೆ ಹಲವೆಡೆ ಸಭೆಗಳನ್ನು ಆಯೋಜಿಸಲಾಗಿದೆ. ಇದೀಗ ಸ್ಟಾರ್ಟಪ್ಗಳಿಗೆ ಸಂಬಂಧಿಸಿದ ಸಭೆ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಈ ವರ್ಷ ಸೆಪ್ಟೆಂಬರ್ 9 ಮತ್ತು 10ರಂದು ದೆಹಲಿಯಲ್ಲಿ ಜಿ20 18ನೇ ಶೃಂಗಸಭೆ ನಡೆಯಲಿದ್ದು, ಪ್ರಧಾನಿ ಮೋದಿ ಜಿ20 ರಾಷ್ಟ್ರಗಳ ನಾಯಕರ ಸಭೆಯ ನೇತೃತ್ವ ವಹಿಸಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Sat, 28 January 23




